More

    ಜ.21ರಂದು ವಿಜಯಸಂಕಲ್ಪ ಯಾತ್ರೆಗೆ ಚಾಲನೆ: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮಾಹಿತಿ

    ಮಂಡ್ಯ: ಬಿಜೆಪಿಯ ಮಹತ್ವಾಕಾಂಕ್ಷೆ ಯೋಜನೆಯಾದ ವಿಜಯಸಂಕಲ್ಪ ಯಾತ್ರೆ ಅಭಿಯಾನ ಜ.21ರಿಂದ ಆರಂಭವಾಗಲಿದೆ. ವಿಜಯಪುರದ ಸಿಂಧಗಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ಮುಖಂಡರೂ ಆದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ತಿಳಿಸಿದರು.
    ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳ ಬಗ್ಗೆ ಫಲಾನುಭವಿಗಳ ಜತೆ ಚರ್ಚಿಸಿ ಇನ್ನೂ ಹೆಚ್ಚಿನ ಮನೆಗಳಿಗೆ ತಲುಪಿಸುವ ಉದ್ದೇಶದಿಂದ ಜನಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಯೋಜನೆಗಳನ್ನು ಮತ್ತಷ್ಟು ಜನರಿಗೆ ತಲುಪಿಸುವ ಉದ್ದೇಶದಿಂದ ‘ಮಿಸ್ಡ್ ಕಾಲ್’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಮೂಲಕ 2 ಕೋಟಿ ಜನರನ್ನು ತಲುಪುವ ಗುರಿ ಹೊಂದಲಾಗಿದೆ. ಪ್ರತಿ ಹಳ್ಳಿಗಳಿಗೆ ಹೋಗಿ ಕಾರ್ಯಕರ್ತರನ್ನು ಗುರುತಿಸಿ ಅವರ ಮನೆಗಳ ಮೇಲೆ ಬಿಜೆಪಿ ಬಾವುಟ ಹಾರಿಸಲಾಗುತ್ತಿದೆ ಎಂದರು.
    ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಇದೊಂದು ಸರ್ವಸ್ಪರ್ಶಿ ಕಾರ್ಯಕ್ರಮ. ಬಿಜೆಪಿಯನ್ನು ಗೆಲುವಿನ ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಲಿದೆ. 2 ಕೋಟಿ ಮತದಾರರನ್ನು ಈ ವಿಜಯ ಸಂಕಲ್ಪ ಅಭಿಯಾನದ ಮೂಲಕ ನಮ್ಮ ಕಾರ್ಯಕರ್ತರು ತಲುಪಲಿದ್ದಾರೆ. 10 ವಿಭಾಗಗಳಲ್ಲಿ, 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ, 312 ಮಂಡಲಗಳಲ್ಲಿ ನಮ್ಮ ಕಾರ್ಯಕರ್ತರು ಬಿಜೆಪಿಯ ಸಾಧನೆಯನ್ನು ಮನೆ ಮನೆಗೆ ತಲುಪಿಸಲಿದ್ದಾರೆ ಎಂದು ತಿಳಿಸಿದರು.
    ಪಕ್ಷದ ರಾಜ್ಯಾಧ್ಯಕ್ಷ, ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ‘ವಿಜಯ ಸಂಕಲ್ಪ ಅಭಿಯಾನ’ ತಂಡದ ಸಂಚಾಲಕರನ್ನಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರನ್ನು ಸಹ ಸಂಚಾಲಕರಾಗಿ, ಡಿ.ಎಸ್.ಅರುಣ್, ಪಿ.ರಾಜೀವ್, ನಯನಾ ಗಣೇಶ್, ರಾಜಕುಮಾರ್ ಪಾಟೀಲ್ ತೇಲ್ಕೂರ್, ತೇಜಸ್ವಿನಿಗೌಡ, ಅಮರನಾಥ ಪಾಟೀಲ್, ಜಗದೀಶ್ ಹಿರೇಮನಿ, ಎಂ.ಬಿ.ನಂದೀಶ್ ಅವರನ್ನು ರಾಜ್ಯ ಸದಸ್ಯರನ್ನಾಗಿ ನೇಮಿಸಿದ್ದಾರೆ ಎಂದರು.
    ಮಾಧ್ಯಮ ವಕ್ತಾರ ನಾಗಾನಂದ, ಕಾಳೇಗೌಡ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts