More

    ರೈತರ ಜಮೀನುಗಳಿಗೆ ದಾರಿ ಸಮಸ್ಯೆ ಇತ್ಯಾರ್ಥಗೊಳಿಸಿ

    ವಿಜಯಪುರ : ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯಾದ್ಯಂತ ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗಲು ಸೂಕ್ತ ದಾರಿ ಇಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹಳ್ಳಿಗಳಲ್ಲಿ ದಾರಿಗಾಗಿ ರೈತರ ಮಧ್ಯೆ ಹೊಡೆದಾಟಗಳು ಆಗುತ್ತಿವೆ. ಕೆಲವೊಂದು ಭಾಗದಲ್ಲಿ ಕೊಲೆಗಳು ನಡೆದಿವೆ. ದಾರಿ ಇಲ್ಲದ ಕಾರಣ ಜಮೀನು ಬೀಳು ಬಿದ್ದು ದಾರಿ ಇಲ್ಲದ ರೈತ ಕುಟುಂಬಗಳ ಜೀವನ ನಿರ್ವಹಣೆ ತುಂಬ ತೊಂದರೆಯಲ್ಲಿವೆ ಎಂದರು.

    2002ನೇ ಸಾಲಿನ ವರೆಗೂ ಅನುಭೋಗದ ಹಕ್ಕಿನಡಿ ತಹಸೀಲ್ದಾರ್‌ಗಳು ದಾರಿ ಮಾಡಿ ಕೊಡುತ್ತಿದ್ದರು. ಈ ಸದ್ಯ ದಾರಿ ಮಾಡಿಕೊಡುವ ಅಧಿಕಾರ ತಹಸೀಲ್ದಾರ್‌ಗಳಿಗೆ ಇಲ್ಲ. ಜಮೀನುಗಳಿಗೆ ಹೋಗಿ ಬರಲು ದಾರಿ ಬೇಕಾದರೆ ಸಿವಿಲ್ ನ್ಯಾಯಾಲಯಕ್ಕೆ ಹೋಗಬೇಕು. ಪ್ರಕರಣ ಇತ್ಯರ್ಥವಾಗಲು 15-20 ವರ್ಷ ಸಮಯ ಬೇಕಾಗುತ್ತದೆ. ಇದರಿಂದ ರೈತರ ಜಮೀನು ಪಾಳು ಬೀಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಕುರಿತು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    2016ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರಿಗೆ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಕಾರಣ ಸಚಿವರು ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ ಅವರಿಗೆ 2016 ನೇ ಸಾಲಿನಲ್ಲಿಯೇ ಪತ್ರ ಬರೆದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಮೀನುಗಳಿಗೆ ಹೋಗುವ ರಸ್ತೆಗಳಿರುವುದಿಲ್ಲವೋ ಅಂತಹ ಜಮೀನುಗಳಿಗೆ ಹೋಗುವ ದಾರಿಗಳಿಗಾಗಿ ಜಾಗವನ್ನು ಗುರುತಿಸಿ ವರದಿ ನೀಡುವಂತೆ ಕಂದಾಯ ಸಚಿವರು ಹಾಗೂ ಆಯುಕ್ತರು ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳು ಬೆಂಗಳೂರು ಅವರಿಗೆ ಸೂಚಿಸಿದ್ದರು. ಅವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಆದೇಶ ಮಾಡಿದ್ದಾರೆ. ದರಂತೆ ರಾಜ್ಯದ ವಿವಿಧ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ. ಆದರೆ ಇಲ್ಲಿವರೆಗೂ ಯಾವುದೇ ರೀತಿ ಕ್ರಮವನ್ನು ಜಿಲ್ಲಾಡಳಿತ ಕೈಗೊಂಡಿಲ್ಲ. ಇಂತಹ ಗಂಭೀರ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರದ ಆದೇಶದಂತೆ ಮೊದಲಿದ್ದ ಆದೇಶದಂತೆ ತಹಸೀಲ್ದಾರ್‌ಗಳಿಗೆ ಸೂಚಿಸಬೇಕೆಂದು ಒತ್ತಾಯಪಡಿಸಿದರು.
    ಮುಖಂಡರಾದ ಗುರಲಿಂಗಪ್ಪಗೌಡ ಪಾಟೀಲ, ಚಂದ್ರಶೇಖರ ಪಾಟೀಲ, ಪವಾಡೆಪ್ಪ ಹಳೇಗೌಡರ, ಬಕ್ಷುಸಾಬ ಹಳಕೇರಿ, ಶಂಕ್ರೆಪ್ಪ ಮಾದರ, ಮಲ್ಲಪ್ಪ ಹಳೇಗೌಡರ, ಶಿವಪ್ಪ ಸಣ್ಣತಂಗಿ, ಪರಮಪ್ಪ ಗುಡಿಮನಿ, ಮಲ್ಲಪ್ಪ ಮುತ್ತಗಿ, ಭೀಮಪ್ಪ ಮಳಗಿ, ಹೊನಕೇರಪ್ಪ ತೆಲಗಿ, ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts