More

    ಕಿಂಡಿ ಅಣೆಕಟ್ಟೆಯಿಂದ ಕೃಷಿ ಭೂಮಿ ಜಲಾವೃತ, ರೈತರಿಗೆ ಆತಂಕ

    ಬೈಂದೂರು: ಬಿಜೂರು ಗ್ರಾಮದ ಸುಮನಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟೆನಿಂದ ನದಿಯ ಇನ್ನೊಂದು ತೀರದ ಜನ ನಿದ್ದೆಗೆಡುವಂತಾಗಿದೆ.
    ಬಿಜೂರು ಹಾಗೂ ತಗ್ಗರ್ಸೆ ಉದ್ದಬೆಟ್ಟು ಗ್ರಾಮದ ಮಧ್ಯೆ ಹಾದುಹೋಗುವ ಸುಮನಾವತಿ ನದಿಗೆ ಅಂತರ್ಜಲ ವೃದ್ಧಿ ಹಾಗೂ ಕೃಷಿ ಭೂಮಿಗೆ ನೀರುಣಿಸುವ ದೃಷ್ಟಿಯಿಂದ ಅರೆಕಲ್ಲು ಬಳಿ ವೆಂಟೆಡ್ ಡ್ಯಾಮ್ ನಿರ್ಮಿಸಲಾಗಿತ್ತು. ಆದರೆ ನದಿಯ ಪೂರ್ವ ಭಾಗದಲ್ಲಿ ತಡೆಗೋಡೆ ನಿರ್ಮಾಣವಾಗದಿರುವುದು ಉದ್ದಬೆಟ್ಟು ಗ್ರಾಮಸ್ಥರ ಸಮಸ್ಯೆಗೆ ಕಾರಣ.
    ಕೆಲ ದಿನಗಳ ಹಿಂದೆ ಪಶ್ಚಿಮಘಟ್ಟ ಹಾಗೂ ಈ ಭಾಗದಲ್ಲಿ ಮಳೆಯಾದ ಕಾರಣ ನದಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿ ಗ್ರಾಮಗಳಿಗೆ ನೀರು ನುಗ್ಗಿ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆ, ಗದ್ದೆಗಳು, ತೆಂಗಿನ ತೋಟಗಳು ಸೇರಿ ಕೃಷಿ ಭೂಮಿ ನೀರಿನಿಂದ ಆವೃತವಾಗಿ ರೈತರಲ್ಲಿ ಆತಂಕ ಉಂಟಾಗಿದೆ. ಇಲ್ಲಿನ ಕೆಳಮನೆ ಲೀಲಾವತಿ ಎಂಬುವರ ತೆಂಗು, ಅಡಕೆ, ಕೃಷಿ ಭೂಮಿ ನೀರಿನಲ್ಲಿ ಮುಳುಗಿ ನಷ್ಟ ಉಂಟಾಗಿದೆ.

    ಸ್ವಯಂಚಾಲಿತ ಗೇಟ್ ನಿರ್ಮಾಣ
    ಬಿಜೂರು ಗ್ರಾಮದ ಅರೆಕಲ್ಲು, ಗರಡಿ, ನಿಸರ್ಗಕೇರಿ ಭಾಗದ ನೂರಾರು ಎಕರೆ ಹಾಗೂ ತಗ್ಗರ್ಸೆ ಗ್ರಾಮದ ಉದ್ದಬೆಟ್ಟು ಭಾಗದಲ್ಲಿ ಹತ್ತಾರು ಎಕರೆ ಕೃಷಿ ಭೂಮಿಯಲ್ಲಿ ರೈತರು ಸುಮನಾವತಿ ನದಿಯ ಕಿಂಡಿ ಅಣೆಕಟ್ಟಿನ ಹಿನ್ನೀರು ನಂಬಿಕೊಂಡು ಎರಡನೇ ಬೆಳೆಯಾಗಿ ಸುಗ್ಗಿ ಬೆಳೆಗೆ ಮುಂದಾಗಿದ್ದರು. ಕಿಂಡಿ ಅಣೆಕಟ್ಟು ದುಸ್ಥಿತಿಯಿಂದ ನೀರು ಸೋರಿಕೆಯಾಗಿ ನೀರಿನ ಸಂಗ್ರಹ ಕಡಿಮೆಯಾಗಿ, ಕೃಷಿ ಚಟುವಟಿಕೆಗೆ ಸಮಸ್ಯೆ ಎದುರಾಗಿತ್ತು. ಇಲ್ಲಿನ ರೈತರ ಮನವಿ ಮೇರೆಗೆ ಅಂದಿನ ಶಾಸಕ ಕೆ.ಗೋಪಾಲ ಪೂಜಾರಿ ಸಣ್ಣ ನೀರಾವರಿ ಇಲಾಖೆಯ ಮೂಲಕ 6.6 ಕೋಟಿ ರೂ. ಅನುದಾನ ತಂದು ಡ್ಯಾಂ ಹಾಗೂ ಆಟೋಮ್ಯಾಟಿಕ್ ಗೇಟ್ ನಿರ್ಮಾಣಗೊಂಡಿತು. ಡ್ಯಾಂ ಜತೆಗೆ ಕಾಲುವೆ ಕಾಂಕ್ರೀಟ್ ಕಾಮಗಾರಿಯೂ ನಡೆದಿದೆ. ಈಗಿನ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ನದಿಯ ಪಶ್ಚಿಮ ಬದಿಯ ತಡೆಗೋಡೆ ನಿರ್ಮಾಣಕ್ಕೆ 1.5 ಕೋಟಿ ರೂ. ಅನುದಾನ ನೀಡಿದ್ದು, ಕಾಮಗಾರಿ ಪೂರ್ಣಗೊಂಡಿದೆ.

    ತಡೆಗೋಡೆ ನಿರ್ಮಾಣಕ್ಕೆ ಬೇಡಿಕೆ
    ನದಿಯ ಪಶ್ಚಿಮ ಭಾಗದ ದಡದಲ್ಲಿ ಈಗಾಗಲೇ ತಡೆಗೋಡೆ ನಿರ್ಮಾಣವಾಗಿದೆ. ನದಿಯ ಪೂರ್ವ ಭಾಗದಲ್ಲಿ ಕೆಲಸ ಆಗಬೇಕಿದೆ. ಇಲ್ಲಿ ಸುಮಾರು 20ರಿಂದ 25 ಮನೆಗಳು ಇದ್ದು ನದಿಯ ನೀರಿನ ಮಟ್ಟ ಹೆಚ್ಚಾದಂತೆ ಇವುಗಳು ಅಪಾಯ ಎದುರಿಸುತ್ತಿವೆ. ನದಿ ತೀರಕ್ಕೆ ಸುಮಾರು 500-600 ಮೀಟರ್ ಉದ್ದಕ್ಕೆ ತಡೆಗೋಡೆ ನಿರ್ಮಾಣ ಮಾಡಿದರೆ ಸಮಸ್ಯೆಗೆ ಮುಕ್ತಿ ದೊರಕುತ್ತದೆ ಎನ್ನುತ್ತಾರೆ ಗ್ರಾಮಸ್ಥರು. ನದಿ ತೀರದಲ್ಲಿ ಸರಿಯಾಗಿ ತಡೆಗೋಡೆ ನಿರ್ಮಾಣವಾದರೆ ನದಿಯ ನೀರು ಗ್ರಾಮದ ಒಳಗೆ ನುಗ್ಗಿ ಬರುವುದನ್ನು ತಡೆಯಬಹುದು.

    ನದಿಯ ಮಣ್ಣಿನ ದಂಡೆಗಳು ದುರ್ಬಲಗೊಂಡಿದ್ದು ನೀರಿನ ಹರಿಯುವಿಕೆ ಹೆಚ್ಚಳಗೊಂಡಂತೆ ಉದ್ದಬೆಟ್ಟು ಗ್ರಾಮದೊಳಗೆ ನೀರು ನುಗ್ಗಿ ಸಮಸ್ಯೆ ಉಂಟಾಗುತ್ತಿದೆ. ತುರ್ತು ತಡೆಗೋಡೆ ನಿರ್ಮಾಣ ಅಗತ್ಯವಾಗಿದೆ.
    ರಾಜು ಮೊಗವೀರ, ಉದ್ದಬೆಟ್ಟು ನಿವಾಸಿ

    ಬಿಜೂರು ಉದ್ದಬೆಟ್ಟು ಪ್ರದೇಶದ ಜನರಿಂದ ಸುಮನಾವತಿ ನದಿಯ ಪೂರ್ವಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ ಬೇಡಿಕೆ ಬಂದಿದ್ದು, ಹಾನಿಗೀಡಾದ ಪ್ರದೇಶವನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪರಿಶೀಲಿಸಲಾಗಿದೆ. ಇಲ್ಲಿನ ಕೃಷಿಕರಿಗೆ ಹೆಚ್ಚು ಸಮಸ್ಯೆಗಳಿರುವುದರಿಂದ ಇವರಿಗೆ ಯಾವುದೇ ತೊಂದರೆಯಾಗದಂತೆ ರೈತರ ಹಿತ ಕಾಪಾಡಲು ಸದ್ಯದಲ್ಲೇ ತಡೆಗೋಡೆ ನಿರ್ಮಾಣ ಮಾಡಲಾಗುವುದು.
    ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts