More

    ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜುಸರ್ಕಾರಿ ಕಾಲೇಜಿಗೆ ಬೇಕಿದೆ ಕಾಯಕಲ್ಪ ; ಅನುದಾನ ಕೊರತೆಯಿಂದ ಅಭಿವೃದ್ಧಿಗೆ ಹಿನ್ನಡೆ

    ವೇಮಗಲ್: ಕೋಲಾರ ಜಿಲ್ಲೆಯ ವೇಮಗಲ್ ಹೋಬಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಕಾಣದೆ ಪಾಳು ಬಿದ್ದಿದೆ. ವೇಮಗಲ್ ಬಹುದೊಡ್ಡ ಕೈಗಾರಿಕಾ ಪ್ರದೇಶವಾಗಿ ಬೆಳೆಯುತ್ತಿದೆ. ವೇಮಗಲ್ -ಕುರುಗಲ್ ಪಟ್ಟಣ ಪಂಚಾಯಿತಿಯಾಗಿ ಘೋಷಣೆಯಾಗಿದೆ ಹಾಗೂ ತಾಲೂಕು ಮಟ್ಟದಲ್ಲಿ ಅಭಿವೃದ್ಧಿಯಾದರೂ ಹೃದಯ ಭಾಗದಲ್ಲಿರುವ ಸರ್ಕಾರಿ ಶಾಲೆಗೆ ಮೂಲಸೌಕರ್ಯಗಳಿಲ್ಲದಿರುವುದು ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

    ಬಿಟ್ರಿಷರ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಈ ಶಾಲೆಯಲ್ಲಿ ಅನೇಕರು ಓದಿ ಉತ್ತಮ ಹುದ್ದೆ ಅಲಂಕರಿಸಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ, ಆದರೆ ಆಧುನಿಕತೆ ಬೆಳೆದಂತೆ ಸರ್ಕಾರ ಮತ್ತು ಜನರ ಆಶಯ, ಉದ್ದೇಶ ಹಾಗೂ ಆದ್ಯತೆ ಬದಲಾವಣೆಗೊಂಡಿರುವುದರಿಂದ ಬಡ ಮಕ್ಕಳಿಗಾಗಿ ತೆರೆದಿರುವ ಶಾಲೆಯನ್ನು ಉಳಿಸಿ ಬೆಳೆಸುವ ಬದಲು ತಾತ್ಸಾರ ತೋರಿರುವುದರಿಂದ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಬದಲು ಸಾವಿರಾರು ರೂ. ಡೊನೇಷನ್ ನೀಡಿ ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ.

    ಇದೇ ಶಾಲೆಯಲ್ಲಿ ಪದವಿ ಪೂರ್ವ ಕಾಲೇಜು ಸಹ ತೆರೆಯಲಾಗಿದ್ದು ನೂರಾರು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನ ಮಕ್ಕಳಿಗೆ ಹಾಗೂ ಸಿಬ್ಬಂದಿಗೆ ಸದ್ಯಕ್ಕೆ ಸೌಕರ್ಯಗಳ ಕೊರತೆ ಇಲ್ಲ. ಆದರೆ ಪ್ರೌಢಶಾಲೆ ಮಕ್ಕಳು ನೆಮ್ಮದಿಯಿಂದ ಪಾಠ ಕೇಳುವ ವಾತಾವರಣ ಇಲ್ಲ., ಕಟ್ಟಡಕ್ಕೆ ಸುಣ್ಣ ಬಣ್ಣ ಬಳೆದು ವರ್ಷಗಳೇ ಕಳೆದಿವೆ. ಶಾಲೆಯ ಮೂರು ಹಳೇ ಕೊಠಡಿಗಳು ಶಿಥಲಗೊಂಡಿವೆ, ಈ ಕೊಠಡಿಗಳ ಹಿಂಭಾಗದಲ್ಲಿ ಕಾಂಪೌಂಡ್ ಕುಸಿದಿರುವುದರಿಂದ ಪುಂಡರು ಜೂಜು ಇನ್ನಿತರ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಶಿಥಲಗೊಂಡಿರುವ ಹಳೇ ಕೊಠಡಿಗಳನ್ನು ತೆರವುಗೊಳಿಸಿ ಹೊಸದಾಗಿ ಕಟ್ಟಡ ನಿರ್ಮಿಸಲು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಬೇಕು. ಅಥವಾ ದಾನಿಗಳಿಂದ ಆರ್ಥಿಕ ನೆರವು ಪಡೆದು ಶಾಲೆ ಅಭಿವೃದ್ಧಿಪಡಿಸಬೇಕಿದೆ.

    ಗೋವಿಂದಗೌಡರ ಭರವಸೆ: 10ನೇ ತರಗತಿ ಮಕ್ಕಳಿಗೆ ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಮಿತ್ರ, ಉದ್ಯೋಗ ಮಿತ್ರ ವಿತರಿಸಲು ಜ.6ರಂದು ಶಾಲೆಗೆ ಭೇಟಿ ನೀಡಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಎಸ್‌ಡಿಎಂಸಿ ಪದಾಧಿಕಾರಿಗಳು, ಉಪ ಪ್ರಾಂಶುಪಾಲರ ಕೋರಿಕೆ ಮೇರೆಗೆ ಶಾಲೆ ಹೊರಭಾಗದ ಕಟ್ಟಡಕ್ಕೆ ಸುಣ್ಣ ಬಣ್ಣದ ವ್ಯವಸ್ಥೆ ಮಾಡಲು ಒಪ್ಪಿದ್ದಾರೆ.

    ಶಾಲೆಯ 3 ಹಳೇ ಕೊಠಡಿಗಳು ಪಾಳು ಬಿದ್ದಿವೆ, ಕಾಂಪೌಂಡ್ ಕುಸಿದಿದೆ, ಈ ಹಳೇ ಕಟ್ಟಡವನ್ನು ಕೂಡಲೇ ನೆಲಸಮ ಮಾಡಿ ವಿದ್ಯಾರ್ಥಿಗಳ ಅನುಕೂಲಕ್ಕೆ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕು.
    ಸಿ.ಎಂ.ನಾರಾಯಣಸ್ವಾಮಿ, ಉಪ ಪ್ರಾಂಶುಪಾಲ, ವೇಮಗಲ್ ಸರ್ಕಾರಿ ಪದವಿಪೂರ್ವ ಕಾಲೇಜು

    ಶಿಥಿಲವಾಗಿರುವ ಕೊಠಡಿಗಳಲ್ಲಿ ಹೊರಗಿನವರು ಮಾತ್ರವಲ್ಲದೆ ಕೆಲ ವಿದ್ಯಾರ್ಥಿಗಳು ಬೀಡಿ, ಸಿಗರೇಟು ಸೇದುವುದು ಮದ್ಯಪಾನ ಮಾಡುವುದು, ಪರಸ್ವರ ಜಗಳವಾಡುವುದು ನಡೆಯುತ್ತಿದೆ, ಸರ್ಕಾರ ಶಾಲೆಯ ಅಭಿವೃದ್ಧಿಗೆ ಬೇಗನೆ ಅನುದಾನ ಬಿಡುಗಡೆ ಮಾಡಿ ಶಾಲೆಯನ್ನು ಉಳಿಸಬೇಕು.
    ಪುರಹಳ್ಳಿ ಜಿ.ಯಲ್ಲಪ್ಪ, ಅಧ್ಯಕ್ಷ, ಎಸ್‌ಡಿಎಂಸಿ, ವೇಮಗಲ್ ಸರ್ಕಾರಿ ಶಾಲೆ

    ವೇಮಗಲ್ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸುವುದು ಎಲ್ಲರ ಕರ್ತವ್ಯ, ಜನತ್ರತಿನಿಧಿಗಳು ಅನುದಾನದಲ್ಲಿ ಶಾಲೆಯನ್ನು ಅಭಿವೃದ್ಧಿಪಡಿಸಬೇಕು, ಜಿಲ್ಲಾಡಳಿತ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿನ ಪ್ರಮುಖ ಕೈಗಾರಿಕೆಗಳ ಮಾಲೀಕರ ಮನವೊಲಿಸಿ ಸಿಎಸ್‌ಆರ್ ನಿಧಿಯಿಂದ ಶಾಲೆಗೆ ಕಾಯಕಲ್ಪ ನೀಡಬೇಕು.
    ಎಂ.ಐ.ಸಿ.ಟಿ ಮಂಜುನಾಥ್, ಉಪಾಧ್ಯಕ್ಷ, ಎಸ್‌ಡಿಎಂಸಿ, ವೇಮಗಲ್ ಸರ್ಕಾರಿ ಶಾಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts