More

    ಕೊಳ್ಳೇಗಾಲದಲ್ಲಿ ಹೆದ್ದಾರಿ ಬದಿ ನಿಲ್ಲುವ ವಾಹನಗಳು

    ಕೊಳ್ಳೇಗಾಲ: ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ (209) ವಾಹನ ನಿಲುಗಡೆ ಸ್ಥಳವಾಗಿ ಮಾರ್ಪಡುತ್ತಿದೆ. ರಸ್ತೆ ಬದಿ ಸಾಲುಗಟ್ಟಿ ನಿಲ್ಲುವ ವಾಹನಗಳಿಂದ ಜನಸಾಮಾನ್ಯರ ಸಂಚಾರಕ್ಕೆ ತೊಂದರೆ ಉಂಟಾಗಿದೆ.

    ನಗರದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮುಂಭಾಗದಿಂದ ಬಿಎಸ್‌ಎನ್‌ಎಲ್ ಕಚೇರಿವರೆಗೂ ಹೆದ್ದಾರಿಯ ಪಾದಚಾರಿ ಮಾರ್ಗವನ್ನು ಗೂಡ್ಸ್ ಲಾರಿಗಳು, ಬಸ್‌ಗಳು ನಿತ್ಯವೂ ಆಕ್ರಮಿಸಿಕೊಂಡು ನಿಲ್ಲುವುದು ವಾಡಿಕೆ ಆಗಿಬಿಟ್ಟಿದೆ. ಇದರಿಂದ ಪಾದಚಾರಿಗಳು ಹೆದ್ದಾರಿ ಮಧ್ಯ ಭಾಗದಲ್ಲಿಯೇ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಪರಿಸ್ಥಿತಿ ಇದೆ.

    ಹೆದ್ದಾರಿ ಪ್ರಾಧಿಕಾರ 2018ರಲ್ಲಿ ಹೆದ್ದಾರಿ ವಿಸ್ತರಣೆ ಕೈಗೊಂಡಿತ್ತು. ಪಟ್ಟಣದ ಮುಡಿಗುಂಡದಿಂದ ಹೊಸ ಅಣಗಳ್ಳಿವರೆಗೆ ಸುಮಾರು 7.ಕಿ.ಮೀ. ಚತುಷ್ಪಥ ರಸ್ತೆ ನಿರ್ಮಿಸಿದೆ. ಬೆಂಗಳೂರಿನಿಂದ ಕೊಳ್ಳೇಗಾಲ, ಚಾಮರಾಜನಗರ ಮಾರ್ಗವಾಗಿ ತಮಿಳುನಾಡಿನ ದಿಂಡಿಗಲ್‌ಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಮಲೆ ಮಹದೇಶ್ವರ ಬೆಟ್ಟ, ಹೊಗೇನಕಲ್ ಫಾಲ್ಸ್, ಗಗನಚುಕ್ಕಿ ಫಾಲ್ಸ್, ಬಿಳಿಗಿರಿರಂಗನ ಬೆಟ್ಟ ಇನ್ನಿತರ ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಈ ರಸ್ತೆಯಿಂದಲೇ ಸಂಚರಿಸಬೇಕಿದೆ.

    ಹಲವು ವರ್ಷಗಳ ಹಿಂದೆ ಬಸ್‌ಗಳು ಪಟ್ಟಣದ ಹಳೇ ಬಸ್ ನಿಲ್ದಾಣದಿಂದ ಕಿರಿದಾದ ಡಾ.ವಿಷ್ಣುವರ್ಧನ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ತೆರಳುತ್ತಿದ್ದವು. ಹೆದ್ದಾರಿ ಅಭಿವೃದ್ಧಿ ನಂತರ ಬಸ್‌ಗಳು ಹೆದ್ದಾರಿ ಮೂಲಕವೇ ಸಂಚರಿಸುತ್ತವೆ. ದಿನವಿಡೀ ಈ ರಸ್ತೆಯಲ್ಲಿ ಸಾವಿರಾರು ವಾಹನಗಳ ನಿರಂತರ ಸಂಚಾರವಿರುತ್ತದೆ.

    ಆದರೆ ಪಾದಚಾರಿ ರಸ್ತೆಯನ್ನೇ ಪಾಕಿರ್ಂಗ್ ಮಾಡಿಕೊಂಡು ದಿನವಿಡೀ ನಿಲ್ಲುವ ವಾಹನಗಳಿಂದ ಜನಸಾಮಾನ್ಯರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಹೆದ್ದಾರಿ ಆದ ಕಾರಣ ವಾಹನಗಳು ವೇಗದಲ್ಲಿ ಸಂಚರಿಸುತ್ತವೆ. ಈ ವೇಳೆ ರಸ್ತೆ ಬದಿ ನಿಂತಿರುವ ವಾಹನಗಳಿಗೆ ಡಿಕ್ಕಿ ಹೊಡೆದಿರುವ ಪ್ರಸಂಗ ಸಹ ಈ ಹಿಂದೆ ನಡೆದಿದೆ. ಈ ಬಗ್ಗೆ ಮಾಧ್ಯಮಗಳು ಹಲವು ಬಾರಿ ವರದಿ ಮಾಡಿ ಪೊಲೀಸ್ ಇಲಾಖೆಯ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಪೊಲೀಸರೂ ಯಾವುದೇ ಕ್ರಮ ಕೈಗೊಂಡಿಲ್ಲ.

    ಭಯದಲ್ಲಿ ಸಂಚಾರ
    ಗಂಭೀರ ವಿಚಾರವೆಂದರೆ, ಹೆದ್ದಾರಿ ರಸ್ತೆಯ ಎಡ ಬದಿಯಲ್ಲಿ ನ್ಯಾಷನಲ್ ಮಿಡ್ಲ್ ಸ್ಕೂಲ್, ಶ್ರೀ ವಾಸವಿ ವಿದ್ಯಾಸಂಸ್ಥೆ, ಬಲ ಬದಿಯಲ್ಲಿ ಮಾನಸ ಶಿಕ್ಷಣ ಸಂಸ್ಥೆ, ಎಂ.ಜಿ.ಎಸ್.ವಿ ಜೂನಿಯರ್ ಕಾಲೇಜು, ಜಿ.ವಿ.ಗೌಡ ಕಾಲೇಜುಗಳಿವೆ. ಶಾಲೆ ಹಾಗೂ ಕಾಲೇಜು ಆರಂಭವಾಗುವ ಸಮಯ ಬೆಳಗ್ಗೆ 8 ರಿಂದ 10 ಗಂಟೆ ಹಾಗೂ ಬಿಡುವ ಸಮಯ ಸಂಜೆ 4 ರಿಂದ 6 ಗಂಟೆವರೆಗೂ ವಿದ್ಯಾರ್ಥಿಗಳ ಸಂಚಾರವಿರುತ್ತದೆ. ಈ ವೇಳೆ ರಸ್ತೆಯಲ್ಲಿ ಜನದಟ್ಟಣೆ ಹೆಚ್ಚಾಗಲಿದ್ದು, ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳಿಂದ ಮಕ್ಕಳು ರಸ್ತೆ ಮಧ್ಯೆ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ದುರದೃಷ್ಟವಶಾತ್ ರಸ್ತೆಯಲ್ಲಿ ಮಕ್ಕಳು ತೆರಳುವಾಗ ಅವಘಡವಾದರೆ ಯಾರು ಹೊಣೆ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಇನ್ನಾದರೂ ವಾಹನಗಳ ನಿಲುಗಡೆಗೆ ಪೊಲೀಸ್ ಇಲಾಖೆ ಅವಕಾಶ ನೀಡಬಾರದೆಂದು ನಾಗರಿಕರು ಒತ್ತಾಯಿಸಿದ್ದಾರೆ.

    ಹೆದ್ದಾರಿಯಲ್ಲಿ ಭಾರಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದನ್ನು ಗಮನಿಸಿದ್ದೇನೆ. ವಾಹನಗಳನ್ನು ನಿಲ್ಲಿಸುವವರಿಗೆ ಒಂದು ಬಾರಿ ಎಚ್ಚರಿಕೆ ನೀಡಲಾಗುವುದು. ನಂತರ ಅದೇ ಪ್ರವೃತ್ತಿ ಮುಂದುವರಿಸಿದರೆ ವಾಹನ ವಶಕ್ಕೆ ಪಡೆದು ಕ್ರಮವಹಿಸಲಾಗುವುದು.
    ಧಮೇರ್ಂದ್ರ, ಡಿವೈಎಸ್ಪಿ, ಕೊಳ್ಳೇಗಾಲ ಉಪವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts