More

    ವೀರಶೈವ ಸಮಾಜ ಒಗ್ಗಟ್ಟಾಗಬೇಕು

    ಕೊಡಗು : ಸಮಾಜದ ಉದ್ಧಾರಕ್ಕೆ ಎಲ್ಲರೂ ಸೇರಿ ದೀಪ ಹಚ್ಚಬೇಕೇ ಹೊರತು ಬೆಂಕಿ ಹಚ್ಚಬಾರದು ಎಂದು ಹೈಕೋರ್ಟ್ ವಕೀಲರೂ ಆಗಿರುವ ಕಾಂಗ್ರೆಸ್ ಮುಖಂಡ ಎಚ್.ಎಸ್.ಚಂದ್ರಮೌಳಿ ಹೇಳಿದರು.

    ಶನಿವಾರಸಂತೆಯ ಕೊಡ್ಲಿಪೇಟೆಯ ಕಿರಿಕೊಡ್ಲಿ ವಿದ್ಯಾಪೀಠದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ವೀರಶೈವ ಸಮಾಜದ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ 30 ಸಾವಿರದಷ್ಟು ವೀರಶೈವ- ಲಿಂಗಾಯತರು ಇದ್ದರೂ ಕೂಡ ಇದುವರೆಗೂ ಸಾಮಾಜಿಕವಾಗಿ ಏಕೆ ಒಗ್ಗೂಡಿಲ್ಲ. ಜಿಲ್ಲೆಯಲ್ಲಿ ಅಥವಾ ಯಾವುದಾದರೂ ಒಂದು ತಾಲೂಕಿನಲ್ಲಿ ವೀರಶೈವ ಜನಾಂಗದ ಒಂದೇ ಒಂದು ಸಮುದಾಯ ಭವನವಿಲ್ಲ. ಲಿಂಗಾಯತರು ಪರಸ್ಪರ ಅಸೂಯೆ, ಹೊಟ್ಟೆಕಿಚ್ಚು, ಕಾಲೆಳೆಯುವುದನ್ನು ಬಿಟ್ಟು ಒಂದಾದರೆ ಮಾತ್ರ ಅಭಿವೃದ್ಧಿ ಸಾಧ್ಯ. ಆದ್ದರಿಂದ ಬೆಂಕಿ ಹಚ್ಚುವುದನ್ನು ಬಿಟ್ಟು ದೀಪ ಹಚ್ಚುವ ಮೂಲಕ ಎಲ್ಲರೂ ಹೊಸ ಬೆಳಕು ಕಾಣುವತ್ತ ಇನ್ನಾದರೂ ಚಿಂತನೆ ನಡೆಸಬೇಕು ಎಂದು ಚಂದ್ರಮೌಳಿ ಆಶಿಸಿದರು.


    ಕೊಡಗು ಜಿಲ್ಲೆಯಲ್ಲಿ ಜಾತ್ಯತೀತ ಮನೋಭಾವದ ಇಬ್ಬರು ಶಾಸಕರು ಇದ್ದಾರೆ. ಆದ್ದರಿಂದ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರ ಸಹಕಾರ ಪಡೆದುಕೊಂಡು ಜಿಲ್ಲೆಯಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಬೇಕೆಂದು ಅವರು ಇದೇ ಸಂದರ್ಭ ಹೇಳಿದರು.


    ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಮಡಿಕೇರಿ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ನನ್ನ ಗೆಲುವಿಗೆ ಲಿಂಗಾಯತರ ಮತಗಳು ನಿರ್ಣಾಯಕವಾಗಿದ್ದವು. ಹಾಗಾಗಿ ಸಮಾಜದ ಯಾವುದೇ ನೆರವಿಗೆ ನಾನು ಸದಾ ಬದ್ಧ. ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಹೊರತು, ಚುನಾವಣೆ ನಂತರ ನನಗೆ ಎಲ್ಲರೂ ಒಂದೇ ಎಂದರು.


    ಸಭೆಯ ಸಾನ್ನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಕೊಡಗಿನಲ್ಲಿ ಲಿಂಗಾಯತ ಸಮಾಜ ಒಗ್ಗೂಡುವ ಮೂಲಕ ಬಲಗೊಳ್ಳಬೇಕಿದೆ. ಸಮಾಜ ಶಕ್ತಿಶಾಲಿಯಾಗಿದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.


    ಮುದ್ದಿನಕಟ್ಟೆ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮನೇಹಳ್ಳಿ ಮಠದ ಶ್ರೀ ಮಹಾಂತ ಸ್ವಾಮೀಜಿ, ಕಲ್ಲಹಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಕೊಡಗು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಎಚ್.ವಿ.ಶಿವಪ್ಪ, ಕಾರ್ಯದರ್ಶಿ ಜಿ.ಎಂ.ಕಾಂತರಾಜು, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹಾಲಪ್ಪ, ಹಿರಿಯರಾದ ಕೊಡ್ಲಿಪೇಟೆ ವಸಂತ್, ಸಂಪಿಗೆದಾಳು ವೀರಪ್ಪ, ಕುಶಾಲನಗರದ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಭುಲಿಂಗಪ್ಪ, ಕುಶಾಲನಗರ ವೀರಶೈವ ಸಮಾಜದ ಅಧ್ಯಕ್ಷ ಎಂ.ಎಸ್.ಶಿವಾನಂದ ಮತ್ತಿತರರು ಇದ್ದರು.


    ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಆಯ್ಕೆಯಾದ ಶನಿವಾರಸಂತೆಯ ಶರತ್ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಲಿಂಗಾಯತ ಸಮುದಾಯದ ನೇಹಾ ಕಗ್ಗೊಲೆಯನ್ನು ತೀವ್ರವಾಗಿ ಖಂಡಿಸಿದ ಚಂದ್ರಮೌಳಿ, ಯುವತಿ ನೇಹಾ ಕೊಲೆಗೈದ ಆರೋಪಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts