More

    ಸಿರಿಧಾನ್ಯಗಳ ವಾಸು ಸಾಹಸ

    > ಬಿಳಗುಂಬದಲ್ಲೊಬ್ಬ ಮಾದರಿ ರೈತ ತಮ್ಮದೇ ಬ್ಯಾಂಡ್ರ್​ನಲ್ಲಿ ಉತ್ಪನ್ನಗಳ ಮಾರಾಟ
    > ಆನ್​ಲೈನ್​ನಲ್ಲೂ ಲಭ್ಯ

    ಗಂಗಾಧರ್​ ಬೈರಾಪಟ್ಟಣ ರಾಮನಗರ

    ನಾವು ಕಾಣುವ ಕನಸು ಯಾವಾಗಲೂ ದೊಡ್ಡದಿರಬೇಕು. ಆಗ ನಮ್ಮ ಸಾಧನೆಯೂ ದೊಡ್ಡದಾಗಿಯೇ ಇರುತ್ತದೆ ಎನ್ನುವ ಮಾತಿಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

    ಇಂತಹ ಉದಾಹರಣೆಗಳ ಸಾಲಿಗೆ ರಾಮನಗರದ ಬಿಳಗುಂಬ ವಾಸು ಅವರ ಸಾಧನೆ ಸೇರುತ್ತದೆ ಎಂದರೆ ಅಚ್ಚರಿಪಡಬೇಕಿಲ್ಲ. ರಾಮನಗರದಲ್ಲಿಯೇ ಬಾಳೆ ಮಂಡಿ ನಡೆಸುತ್ತಿದ್ದ ವಾಸು ಅವರು ಕಂಡ ದೊಡ್ಡ ಕನಸು ಈಗ ಅವರನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸಿದೆ. ಅಂದುಕೊಂಡಂತೆ ಆರೋಗ್ಯಕರವಾದ ಆಹಾರವನ್ನು ಜನರಿಗೆ ನೀಡುವ ಜತೆಗೆ ಕೃಷಿ ಮೂಲಕ ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ.


    ಸಿರಿಧಾನ್ಯವೇ ಬದುಕು

    ವಾಸು ಈಗ ಸಿರಿಧಾನ್ಯಗಳ ವಾಸು ಆಗಿ ಬದಲಾಗಿದ್ದಾರೆ. ಸಿರಿಧಾನ್ಯಗಳು ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿರುವ ಕಾರಣ ಕಳೆದ ಹಲವಾರು ವರ್ಷಗಳಿಂದ ಸಂಸ್ಕರಣೆ ಮತ್ತು ಮಾರಾಟ ಮಾಡುತ್ತಿದ್ದ ಇವರು, ಈಗ ಮತ್ತೊಂದು ಹೆಜ್ಜೆ ಮುಂದಕ್ಕೆ ಇಟ್ಟಿದ್ದು, ಆನ್​ಲೈನ್​ನಲ್ಲೂ ವ್ಯಾಪಾರ ವಿಸ್ತರಿಸಿಕೊಂಡಿದ್ದಾರೆ.

    ಇತ್ತೀಚೆಗೆ ತಮ್ಮ ರಾಮ್​ ಗೋಲ್ಡ್​ ಬ್ರಾಂಡ್​ನ ಸಿರಿಧಾನ್ಯಗಳ ಈಸಿ ರಾಗಿ ಮುದ್ದೆ, ಅಂಬಲಿ, ದೋಸೆ, ರೊಟ್ಟಿ ಹಿಟ್ಟುಗಳನ್ನು ಸಿದ್ಧಪಡಿಸಿ, ಆನ್​ಲೈನ್​ ಮೂಲಕವೇ ವ್ಯಾಪಾರ ಮಾಡುವ ಮೂಲಕ ರೈತ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.

    millets vasu at Fishery tank

    ರೈತರಿಗೂ ನೆರವು


    ವಾಸು ಅವರು ರಾಮನಗರದ ಬಿಳಗುಂಬ ಬಳಿ ಸುಮಾರು 8 ಎಕರೆ ಜಮೀನು ಹೊಂದಿದ್ದಾರೆ. ಇಲ್ಲಿ ಮಾವು ಸೇರಿ ವಿವಿಧ ಗಿಡಗಳು ಇದ್ದರೂ, ಇದರ ನಡುವೆಯೇ ಸಿರಿಧಾನ್ಯ ಬೆಳೆದು, ಸಿರಿಧಾನ್ಯದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು.

    ಇದಕ್ಕೆ ಬೇಡಿಕೆ ಹೆಚ್ಚಿದಂತೆ ಸಿರಿಧಾನ್ಯಗಳ ಅಗತ್ಯವೂ ಹೆಚ್ಚಿತು. ಹಾಗಾಗಿ ರೈತರಿಗೆ ತಾವೇ ಬಿತ್ತನೆ ಬೀಜ ಕೊಟ್ಟು ಬೆಳೆಸಿ ಸೂಕ್ತ ಬೆಲೆಗೆ ಖರೀದಿ ಮಾಡುವ ಮೂಲಕ ರೈತರ ಆರ್ಥಿಕ ಬೆಳವಣಿಗೆಗೂ ಕಾರಣವಾಗಿದ್ದಾರೆ.

    ವಿಭಿನ್ನ ಪ್ರಯೋಗದ ತುಡಿತ

    ವಾಸು ಕೇವಲ ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಅವುಗಳ ಉತ್ಪನ್ನಗಳ ಮಾರಾಟ ಮಾಡುವುದಕ್ಕೆ ಸೀಮಿತವಾಗಿಲ್ಲ. ಸಮಗ್ರ ಕೃಷಿಯಲ್ಲಿ ವಿಭಿನ್ನ ಪ್ರಯೋಗಗಳಿಗೆ ಸದಾ ತೆರೆದುಕೊಂಡಿದ್ದಾರೆ. ತಮ್ಮದೇ ತೋಟದಲ್ಲಿ ಆಸ್ಟ್ರೆಲಿಯಾದ ಮಾಯಾ, ನ್ಯೂಜಿಲೆಂಡ್​ ದೇಶದ ಲಿಲ್ಲಿ ತಳಿಯ ಮಾವಿನ ಜತೆಗೆ ಒಟ್ಟಾರೆ 25 ವಿವಿಧ ಜಾತಿಯ ಮಾವು ಬೆಳೆಯುತ್ತಾರೆ. ಒಂದೇ ಮರದಲ್ಲಿ 5 ಬಗೆಯ ಮಾವಿನ ಕಸಿ ಮಾಡಿ ಅದರಲ್ಲೂ ಬೆಳೆ ತೆಗೆದು ಸೈ ಎನಿಸಿಕೊಂಡಿದ್ದಾರೆ. ಇನ್ನು ಇವರ ಜಮೀನಿಗೆ ಕಾಲಿಟ್ಟರೆ ನೀರಿನ ಸದ್ಬಳಕೆಯಿಂದ ಆರಂಭಗೊಳ್ಳುವ ಕಲಿಕೆ, ಮೀನು, ಕೋಳಿ, ಕುರಿ ಸಾಕಣೆ, ಜಮೀನಿನ ಸದ್ಬಳಕೆ ಹೀಗೆ ಎಲ್ಲವನ್ನೂ ಪರಿಚಯ ಮಾಡಿಕೊಡುತ್ತದೆ.

    sheep farm at Vasu Land

     

    ಮಧ್ಯವರ್ತಿಗಳಿಗೆ ಸಿಗಲಿಲ್ಲ

    ವಾಸು ಅವರ ಯಶಸ್ಸಿನ ಹಿಂದಿನ ಗುಟ್ಟು ತಾವು ಬೆಳೆದ ಬೆಳೆ ಹಾಗೂ ಉತ್ಪಾದಿಸಿದ ಪದಾರ್ಥಗಳನ್ನು ಮಧ್ಯವರ್ತಿಗಳ ಕೈಗೆ ಕೊಟ್ಟು ಬಂದಷ್ಟು ಲಾಭಕ್ಕೆ ಸುಮ್ಮನಾದವರಲ್ಲ. ತಮ್ಮ ಉತ್ಪನ್ನಗಳಿಗೆ ತಾವೇ ಮಾರುಕಟ್ಟೆಯನ್ನು ಕಂಡುಕೊಂಡು ಆರ್ಥಿಕವಾಗಿ ನಷ್ಟವಾಗುವುದನ್ನು ತಪ್ಪಿಸಿಕೊಂಡಿದ್ದಾರೆ.

    ಇವರ ತೋಟದ ಮಾವನ್ನು ಮೌಲ್ಯವರ್ಧನೆ ಮೂಲಕ ಗ್ರಾಹಕರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದರೆ, ಸಿರಿ ಧಾನ್ಯಗಳ ಉತ್ಪನ್ನಗಳನ್ನು ಹಾಪ್​ಕಾಮ್ಸ್​ ಮೂಲಕ ಮಾರಾಟ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ದೆಹಲಿವರೆಗೂ ವ್ಯಾಪಾರ ವಿಸ್ತರಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

    ಇನ್ನು ಸಿರಿಧಾನ್ಯಗಳು ರಾಮ್​ಗೋಲ್ಡ್​ ಹೆಸರಲ್ಲಿ ಅಮೆಜಾನ್​ನಲ್ಲಿಯೂ ದೊರಕುವ ಮೂಲಕ ಆನ್​ಲೈನ್​ ಮಾರಾಟಕ್ಕೂ ಲಗ್ಗೆ ಇಟ್ಟಿದ್ದಾರೆ. ಇಷ್ಟೇ ಅಲ್ಲದೆ, ಸಿರಿಧಾನ್ಯ ಪೌಷ್ಟಿಕ ಆಹಾರವಾಗಿರುವ ಕಾರಣ, ರೋಗಿಗಳಿಗೆ ನೀಡುವ ಕಾರ್ಯಕ್ಕೂ ಚಾಲನೆ ದೊರೆತಿದೆ.

    ಪ್ರಶಸ್ತಿಗೆ ಬೀಗದ ವಾಸು

    ಕೃಷಿಯಲ್ಲಿ ಭಿನ್ನ ವಿಭಿನ್ನ ಹಾಗೂ ಸಾಹಸಮಯ ಪ್ರಯತ್ನಗಳ ಮೂಲಕವೇ ಯಶಸ್ಸು ಕಂಡಿರುವ ವಾಸು, ಬಹುತೇಕ ತಮ್ಮದೇ ಬಂಡವಾಳ ಹೂಡಿ ಯಶಸ್ವಿ ಆಗಿದ್ದಾರೆ. ಕೃಷಿ ವಿಜ್ಞಾನಿಗಳು, ಕೃಷಿಯ ಬಗ್ಗೆ ತಿಳಿದುಕೊಳ್ಳುವ ಹಂಬಲ ಇರುವವರಿಗೆ ವಾಸು ಅವರ ತೋಟ ವಿಶ್ವ ವಿದ್ಯಾಲಯವಿದ್ದಂತೆ. ಹಲವಾರು ಮಂದಿ ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ.

    ಮಾಜಿ ಪ್ರಧಾನಿ ದೇವೇಗೌಡರ ಆದಿಯಾಗಿ, ಹಾಲಿ ವಿಧಾನಸಭೆ ಸ್ಪೀಕರ್​ ಯು.ಟಿ. ಖಾದರ್​ ಅವರೂ ಇವರ ತೋಟಕ್ಕೆ ಭೇಟಿ ನೀಡಿದ್ದಾರೆ. ಇವರ ಈ ಸಾಧನೆಗೆ ಹಲವಾರು ಪ್ರಶಸ್ತಿಗಳು ಸಂದಿವೆಯಾದರೂ ಇದರಿಂದ ಬೀಗದ ವಾಸು, ಪುತ್ರ ಕೃತಿ ಕುಮಾರ್​ ಜತೆಗೂಡಿ ಪ್ರತಿನಿತ್ಯ ಕೃಷಿ ಕಾಯಕ ಮುಂದುವರಿಸಿದ್ದಾರೆ.

    ಕೃಷಿ ಅವಕಾಶಗಳ ಹೆಬ್ಬಾಗಿಲು. ಇದನ್ನು ದಾಟಿ ಒಳಗೆ ಬಂದರೆ ಖಂಡಿತವಾಗಿ ಯಶಸ್ಸು ಸಾಧಿಸಬಹುದು. ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಧ್ಯವರ್ತಿಗಳಿಗೆ ನೀಡಿ ಸುಮ್ಮನಾಗುವ ಬದಲು, ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಸೃಷ್ಟಿಸಿಕೊಂಡರೆ ಆರ್ಥಿಕವಾಗಿ ಸಬಲರಾಗಬಹುದು. ಇದು ನನ್ನ ಅನುಭವ ಕೂಡ.
     ವಾಸು, ಪ್ರಗತಿಪರ ರೈತ, ಬಿಳಗುಂಬ

    ಸಂಪರ್ಕ ಸಂಖ್ಯೆ ಮತ್ತು ಸಮಯ
    ಮೊ.ಸಂ. 9964457181
    ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts