ಐವರು ಟಾಲಿವುಡ್​ ಸ್ಟಾರ್​ ನಟರು ರಿಜೆಕ್ಟ್​ ಮಾಡಿದ ಚಿತ್ರವನ್ನು ವಿಜಯ್​ ಒಪ್ಪಿದ್ದೇಕೆ?

Vijay 1
Published on

ಹೈದರಾಬಾದ್​: ವಿಜಯ್​ ಅಭಿನಯದ 'ವಾರಿಸು' ಚಿತ್ರವು ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಈ ಚಿತ್ರ ವಿಜಯ್​ ಪಾಲಿಗೆ ವಿಶೇಷ. ಏಕೆಂದರೆ, ಇದು ತಮಿಳಿನ ಜತೆಗೆ ತೆಲುಗಿನಲ್ಲೂ ತಯಾರಾಗಿದ್ದು, ಈ ಚಿತ್ರದ ಮೂಲಕ ಟಾಲಿವುಡ್​ಗೆ ವಿಜಯ್​ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.

ಆದರೆ, ಈ ಚಿತ್ರವನ್ನು ವಿಜಯ್​ ಒಪ್ಪುವುದಕ್ಕೆ ಮುನ್ನ ತೆಲುಗಿನ ಐವರು ಟಾಪ್​ ಸ್ಟಾರ್​ಗಳು ನಿರಾಕರಿಸಿರುವ ವಿಷಯ ಗೊತ್ತಾ? ಅಂಥದ್ದೊಂದು ವಿಷಯ ಇದೀಗ ಬಹಿರಂಗವಾಗಿದೆ.

ಮೊದಲು ಈ ಕಥೆಯನ್ನು ಟಾಲಿವುಡ್​ ನಟ ಮಹೇಶ್​ ಬಾಬು ಅವರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಯಿತಂತೆ. ಆದರೆ, ಕೈಯಲ್ಲಿ ಬೇರೆ ಚಿತ್ರಗಳಿದ್ದ ಕಾರಣ, ಅವರು ನಟಿಸುವುದಕ್ಕೆ ಸಾಧ್ಯವಾಗಿಲ್ಲ. ಆ ನಂತರ ಇದೇ ಕಥೆ ಅಲ್ಲು ಅರ್ಜುನ್​, ರಾಮ್​ಚರಣ್​ ತೇಜ ಮತ್ತು ಪ್ರಭಾಸ್​ ಹತ್ತಿರವೂ ಹೋಗಿ ಬಂತಂತೆ. ಆದರೆ, ಯಾರೂ ಈ ಚಿತ್ರವನ್ನು ಕಾರಣಾಂತರಗಳಿಂದ ಒಪ್ಪಿಲ್ಲ. ಕೊನೆಗೆ, ಈ ಕಥೆಯನ್ನು ತಮಿಳು ನಟ ವಿಜಯ್​ ಒಪ್ಪಿ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಐವರು ನಟರು ರಿಜೆಕ್ಟ್​ ಮಾಡಿದ ಕಥೆಯಲ್ಲಿ ವಿಜಯ್​ ಅದೇನು ಸ್ಪೆಷಾಲಿಟಿ ಕಂಡರು? ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

'ವಾರಿಸು' ಚಿತ್ರವನ್ನು ತೆಲುಗಿನ ಜನಪ್ರಿಯ ನಿರ್ಮಾಪಕ ದಿಲ್​ ರಾಜು ನಿರ್ಮಿಸಿದ್ದು, ವಂಶಿ ಪಡಿಪಲ್ಲಿ ನಿರ್ದೇಶನ ಮಾಡಿದ್ದಾರೆ. ವಿಜಯ್​ಗೆ ನಾಯಕಿಯಾಗಿ ಕನ್ನಡದ ರಶ್ಮಿಕಾ ಮಂದಣ್ಣ ನಟಿಸಿದ್ದು, ಪ್ರಭು, ಶರತ್​ ಕುಮಾರ್​, ಪ್ರಕಾಶ್​ ರಾಜ್​ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net