More

    ವರಂಗದಲ್ಲಿ ಮಾದರಿ ಗ್ರಾಮ ಸರ್ಕಾರ

    ಅವಿನ್ ಶೆಟ್ಟಿ ಉಡುಪಿ
    ದಟ್ಟ ಅರಣ್ಯ ಹಾಗೂ ತೀರ ಗ್ರಾಮೀಣ ಪ್ರದೇಶದಿಂದ ಕೂಡಿರುವ ಹೆಬ್ರಿ ತಾಲೂಕಿನ ವರಂಗ ಗ್ರಾಮ ಪಂಚಾಯಿತಿ ತಂತ್ರಜ್ಞಾನಮಯವಾಗಿ ಮಾದರಿಯೆನಿಸಿದೆ.

    ಜಿಲ್ಲೆಯಲ್ಲಿ ಡಿಜಿಟಲ್ ಗ್ರಂಥಾಲಯ ಹೊಂದಿರುವ ಏಕೈಕ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಇಲ್ಲಿಗಿದೆ. ಗ್ರಾಪಂ ಕಚೇರಿ ಸಮೀಪದಲ್ಲಿರುವ ಸಾರ್ವಜನಿಕ ಗ್ರಂಥಾಲಯವನ್ನು ಸಂಪೂರ್ಣ ಡಿಜಿಟಲೀಕರಣ ಮಾಡಿ ವೈಫೈ ಮೂಲಕ ಓದುಗರಿಗೆ ಪುಸ್ತಕವನ್ನು ಓದಿಸಲಾಗುತ್ತಿದೆ. ಈ ಡಿಜಿಟಲ್ ಗ್ರಂಥಾಲಯದಲ್ಲಿ 2500 ಪುಸ್ತಕಗಳು ಲಭ್ಯವಿದೆ. ಓದಲು ಇಂಟರ್‌ನೆಟ್ ಅಗತ್ಯ ಇರುವುದಿಲ್ಲ. ಮಿಂಟ್ ಬಾಕ್ಸ್‌ನ 100 ಮೀಟರ್ ವ್ಯಾಪ್ತಿಯಲ್ಲಿ ಇದರದ್ದೇ ವೈಫೈ ಮೂಲಕ ಪುಸ್ತಕ ಓದಬಹುದಾಗಿದೆ. ಈ ಮಿಂಟ್ ಬಾಕ್ಸನ್ನು ಶಾಲಾ, ಕಾಲೇಜು ಸೇರಿದಂತೆ ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಿ ಆಸಕ್ತರಿಗೆ ಓದಲು ಅವಕಾಶ ಕಲ್ಪಿಸಿರುವುದು ವಿಶೇಷ.

    ಗ್ರಂಥಾಲಯ ಮಾತ್ರವಲ್ಲ, ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಅಳವಡಿಕೆ ಮತ್ತು ಮೂಲಸೌಕರ್ಯ ಆಧುನೀಕರಣಗೊಂಡಿದೆ. ಕುಡಿಯುವ ನೀರಿನ ಟ್ಯಾಂಕ್ ತುಂಬಿದಾಗ ನೀರು ಪೋಲಾಗದಂತೆ ತಂತ್ರಜ್ಞಾನ ಆಳವಡಿಸಲಾಗಿದೆ. ಮೊಬೈಲ್ ಮೂಲಕ ಮಿಸ್ಡ್‌ಕಾಲ್‌ನಲ್ಲಿ ನಿಯಂತ್ರಿಸುವ ವ್ಯವಸ್ಥೆ ಇದೆ. ಪಂಚಾಯಿತಿ ವ್ಯಾಪ್ತಿಯ ಮೂರು ಕಂದಾಯ ಗ್ರಾಮಗಳಲ್ಲಿರುವ ಓವರ್‌ಹೆಡ್ ಟ್ಯಾಂಕಿನ ಪಂಪ್‌ಗಳಿಗೂ ಸ್ಟಾರ್ಟರ್ ಅಳವಡಿಸಲಾಗಿದೆ.
    ವಿದ್ಯುತ್ ಉಳಿತಾಯ ಉದ್ದೇಶದಿಂದ ಬೀದಿದೀಪಗಳಿಗೆ ಟೈಮರ್ ಅಳವಡಿಸಲಾಗಿದ್ದು, ಸಾಯಂಕಾಲ 6 ಗಂಟೆಗೆ ಸ್ವಯಂ ಚಾಲಿತವಾಗಿ ಉರಿದು ಬೆಳಗ್ಗೆ 6ಕ್ಕೆ ಸ್ವಯಂ ಆಫ್ ಆಗುತ್ತದೆ. ನಗದು ರಹಿತ ವ್ಯವಹಾರದಲ್ಲೂ ಗ್ರಾಪಂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

    ಗ್ರಾಪಂನಲ್ಲಿ ಕ್ಯಾಂಟೀನ್ ಸೌಕರ್ಯ : ಸಿಬ್ಬಂದಿ ಚಹಾ, ಉಪಾಹಾರಕ್ಕಾಗಿ ಹೋಟೇಲ್ಗೆ ಹೋದಾಗ ಗ್ರಾಮಸ್ಥರಿಗೆ ಸೇವೆಯಲ್ಲಿ ವ್ಯತ್ಯಯ ಆಗುತ್ತದೆ. ಇದನ್ನು ತಪ್ಪಿಸಲು ಪಂಚಾಯಿತಿ ಕಚೇರಿಯಲ್ಲಿ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗಿದೆ. ಗ್ರಾಪಂ ಸಿಬ್ಬಂದಿಗೆ, ಸಭೆಯ ಸಂದರ್ಭದಲ್ಲಿ ಸದಸ್ಯರಿಗೆ, ಅತಿಥಿಗಳಿಗೆ, ಸಾಮಾನ್ಯ ಜನರಿಗೆ ಟೀ ಕಾಫಿಯನ್ನು ಗ್ರಾಪಂನಲ್ಲಿ ತಯಾರಿಸಿ ನೀಡಲಾಗುತ್ತಿದೆ. ಗ್ರಾಪಂ ಸಿಬ್ಬಂದಿಯೇ ದಿನಕ್ಕೊಬ್ಬರಂತೆ ಕ್ಯಾಂಟೀನ್‌ನಲ್ಲಿ ಕಾರ್ಯನಿರ್ವಹಿಸುತ್ತಾರೆ. ಯಾವುದೇ ಸಂದರ್ಭದಲ್ಲೂ ಗ್ರಾಮಸ್ಥರು ಕಚೇರಿಗೆ ಬಂದಾಗ ಸಿಬ್ಬಂದಿ ಕಚೇರಿಯಲ್ಲಿ ಲಭ್ಯ.

    ವರಂಗ ಗ್ರಾ.ಪಂ. ಮಾದರಿಯಾಗಿ ರೂಪುಗೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ. ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ, ತಂತ್ರಜ್ಞಾನ ಆಳವಡಿಕೆ ಮತ್ತು ಮೂಲಸೌಕರ್ಯಗಳ ಆಧುನೀಕರಣಗೊಳಿಸುವ ಕಾರ್ಯಕ್ಕೆ ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿವರ್ಗ ಸೇರಿ ನಿರಂತರ ಶ್ರಮಿಸುತ್ತಿದ್ದೇವೆ.
    ಸದಾಶಿವ ಸೇರ್ವೆಗಾರ್, ಪಿಡಿಒ, ವರಂಗ ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts