More

    ಏ. 1ರಿಂದ ಲಸಿಕಾ ಕಾರ್ಯಕ್ರಮ

    ಮದ್ದೂರು : ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ ರಾಸುಗಳಿವೆ 5 ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ (ಆಡಳಿತ) ಡಾ. ಬಿ.ಬಿ.ಪ್ರವೀಣ್‌ಕುಮಾರ್ ತಿಳಿಸಿದ್ದಾರೆ.
    ತಾಲೂಕಿನಾದ್ಯಂತ ಜಾನುವಾರುಗಳಿಗೆ ಏ. 1 ರಿಂದ 30 ವರೆಗೆ ಪಶುಪಾಲನಾ ಇಲಾಖೆ ಮತ್ತು ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳಿ ವತಿಯಿಂದ 161 ಗ್ರಾಮಗಳಲ್ಲಿ ಸುಮಾರು 57,510 ಹಸುಗಳು ಮತ್ತು 18, 150 ಎಮ್ಮೆಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುವುದು. ಕೃಷಿಕರು ಸಹಕಾರ ನೀಡಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಕಾರ್ಯಕ್ರಮ ಯಶವಾಗಲು 74 ಜನ ಲಸಿಕೆದಾರರನ್ನು 37 ತಂಡಗಳಾಗಿ ನೇಮಿಸಲಾಗಿದೆ. ಪ್ರತಿ ತಂಡವು ನಿಗದಿತ ದಿನಾಂಕದಂದು ಆಯಾ ಹಳ್ಳಿಗಳಿಗೆ ಬೆಳಗ್ಗೆ 6 ಗಂಟೆಗೆ ವೇಳಾಪಟ್ಟಿಯಂತೆ ರೈತರ ಮನೆಗಳಿಗೆ ತೆರಳಿ ಜಾನುವಾರುಗಳಿಗೆ ಲಸಿಕೆ ಹಾಕಲಿದೆ. ರೈತರು ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ರೋಗದ ನಿರ್ಮೂಲನೆಗೆ ಸಹಕರಿಸಬೇಕೆಂದು ರೈತರಲ್ಲಿ ಮನವಿ ಮಾಡಿದ್ದಾರೆ.
    ಕಾಲುಬಾಯಿಜ್ವರ ರೋಗವು ಎತ್ತು, ಹೋರಿ, ಹಸು,ಎಮ್ಮೆ ಮತ್ತು ಹಂದಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಅತಿಯಾದ ಜ್ವರ, ಬಾಯಿಯಲ್ಲಿ ಹುಣ್ಣು ಜೊಲ್ಲು ಸುರಿಸುವುದು, ಕುಂಟುವುದು ಮತ್ತು ಕೆಚ್ಚಲಿನ ಮೇಲೆ ಗುಳ್ಳೆಗಳು ಇತ್ಯಾದಿ ಲಕ್ಷಣಗಳು ಕಾಣಿಸುತ್ತವೆ. ಈ ರೋಗದಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ರಾಸುಗಳು ಗರ್ಭಧರಿಸಲು ವಿಳಂಬವಾಗಿ ಬರಡಾಗುತ್ತವೆ. ಹಾಲಿನ ಇಳುವರಿ ಕಡಿಮೆ ಆಗುತ್ತದೆ. ರಾಸುಗಳಲ್ಲಿ ಸಾಮರ್ಥ್ಯ ಕುಂದುತ್ತದೆ. ಆದ್ದರಿಂದ ರೈತರು ತಪ್ಪದೇ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಜಾನುವಾರುಗಳಿಗೆ ರೋಗ ಬಾರದಂತೆ ಇಲಾಖೆಯ ಜತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts