More

    ಲಸಿಕೆ ಪಡೆದು ಸುರಕ್ಷಿತವಾಗಿರಿ : ದೇವನಹಳ್ಳಿಯಲ್ಲಿ ಸಚಿವ ಎಂಟಿಬಿ ನಾಗರಾಜ್ ಸಲಹೆ

    ಬೆಂಗಳೂರು ಗ್ರಾಮಾಂತರ: ಕೋವಿಡ್ ನಿಯಂತ್ರಣಕ್ಕೆ ಹಮ್ಮಿಕೊಂಡಿರುವ ಉಚಿತ ಲಸಿಕಾ ಅಭಿಯಾನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಗಿದ್ದು, ಕರೊನಾ ವಾರಿಯರ್ಸ್ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯರು ಬೂಸ್ಟರ್ ಡೋಸ್ ಪಡೆದು ಸುರಕ್ಷಿತರಾಗಿರಬೇಕೆಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

    ಗ್ರಾಮಾಂತರ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ದೇವನಹಳ್ಳಿಯ ಲಯನ್ಸ್ ಕ್ಲಬ್ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕೋವಿಡ್-19 ಬೂಸ್ಟರ್ ಡೋಸ್ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ 9,419 ಫಲಾನುಭವಿಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು. ದೇಶವು ಕರೊನಾ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದ್ದು, ಜನತೆಗೆ ಉಚಿತವಾಗಿ ಲಸಿಕೆ ನೀಡುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಹೇಳಿದರು.

    ದೇಶದಲ್ಲಿ ಲಸಿಕೆ ಅಭಿಯಾನ ಕಾರ್ಯ ವೇಗವಾಗಿ ಸಾಗಿದ್ದು, ಈಗಾಗಲೇ ಸುಮಾರು 150 ಕೋಟಿ ಡೋಸ್ ಲಸಿಕೆ ನೀಡಿರುವುದು ಅಸಾಮಾನ್ಯ ಸಾಧನೆ. ಸಂಭಾವ್ಯ ಮೂರನೇ ಅಲೆ ಹಾಗೂ ಒಮಿಕ್ರಾನ್ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂಗೆ ಜಿಲ್ಲೆಯ ಜನತೆ ಉತ್ತಮವಾಗಿ ಸಹಕರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

    ಬೂಸ್ಟರ್ ಡೋಸ್ ಕೂಡ ಮೊದಲ ಹಾಗೂ ಎರಡನೇ ಡೋಸ್ ಮಾದರಿಯಲ್ಲಿ ಇರುತ್ತದೆ. ಈಗಾಗಲೇ ಎರಡನೇ ಡೋಸ್ ತೆಗೆದುಕೊಂಡು ಸುಮಾರು ಒಂಬತ್ತು ತಿಂಗಳು ಕಳೆದಿರುವ ಲಾನುಭವಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ ಎಂದರು. ಜಿಲ್ಲೆಯಾದ್ಯಂತ ಈಗಾಗಲೇ ಕೋವಿಡ್ 19 ಲಸಿಕಾಕರಣವನ್ನು ಶೇ.95.8 ಮೊದಲನೇ ಡೋಸ್ ಹಾಗೂ ಶೇ. 85.7 ಎರಡನೇ ಡೋಸ್ ನೀಡಿದ್ದು, ಬಾಕಿ ಉಳಿದಿರುವ ಫಲಾನುಭವಿಗಳಿಗೆ ಲಸಿಕೆ ನೀಡಲು ಸೂಚಿಸಲಾಗಿದೆ ಎಂದರು.

    ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯದಲ್ಲಿ ಶೇ. 50 ಪ್ರಗತಿ ಸಾಧಿಸಲಾಗಿದ್ದು, ಶೀಘ್ರವಾಗಿ ಈ ಕಾರ್ಯದಲ್ಲಿ ಶೇ.100 ಪ್ರಗತಿಯನ್ನು ಅಧಿಕಾರಿಗಳು ಸಾಧಿಸಬೇಕು ಎಂದು ತಿಳಿಸಿದರು. ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಸೋಂಕು ವಿಶ್ವವನ್ನೇ ಆವರಿಸಿದೆ. ಸಾರ್ವಜನಿಕರು ಉದಾಸೀನ ತೋರದೆ, ಸರ್ಕಾರ ಕಾಲ ಕಾಲಕ್ಕೆ ನೀಡುವ ಮಾರ್ಗಸೂಚಿ ಪಾಲಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.
    ದೇವನಹಳ್ಳಿ ತಹಸೀಲ್ದಾರ್ ಅನಿಲ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts