More

    ಲಸಿಕೆ ಹಾಕಿಸಿದರೆ ಕಾಲುಬಾಯಿ ರೋಗ ಗುಣ, ಪಶುವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಕಿವಿಮಾತು

    ತ್ಯಾಮಗೊಂಡ್ಲು: ಸೀಳು ಗೊರಸುಗಳುಳ್ಳ ಎಲ್ಲ ಪ್ರಾಣಿಗಳೂ ಸಾಮಾನ್ಯವಾಗಿ ಕಾಲುಬಾಯಿ ರೋಗಕ್ಕೆ ತುತ್ತಾಗುತ್ತವೆ, ರಾಸುಗಳಿಗೆ ಸತತ ಮೂರು ಬಾರಿ ಲಸಿಕೆ ಹಾಕಿಸಿದರೆ, ಜೀವಮಾನಪೂರ್ತಿ ರೋಗವನ್ನು ನಿಯಂತ್ರಿಸಬಹುದು ಎಂದು ಪಟ್ಟಣದ ಪಶುವೈದ್ಯ ಶಾಲಾ ಮುಖ್ಯ ಪಶುವೈದ್ಯಾಧಿಕಾರಿ ಹಾಗೂ ಅಭಿಯಾನದ ಮೇಲುಸ್ತುವಾರಿ ಡಾ. ಶಿವಪ್ರಸಾದ್ ಹೇಳಿದರು.

    ಹೋಬಳಿಯ ಇಸುವನಹಳ್ಳಿ ಪಾಳ್ಯದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಬಮುಲ್ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಲುಬಾಯಿ ರೋಗ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ನೆಲಮಂಗಲ ತಾಲೂಕಿನಲ್ಲಿರುವ ರಾಸುಗಳಲ್ಲಿ ಶೇ.40 ರಾಸುಗಳು ತ್ಯಾಮಗೊಂಡ್ಲು ಹೋಬಳಿಯಲ್ಲಿವೆ. ತಾವರೆಕೆರೆ, ಇಸುವನಹಳ್ಳಿ, ಇಸುವನಹಳ್ಳಿ ಪಾಳ್ಯ, ನರಸಾಪುರ, ಧರ್ಮೇಗೌಡನಪಾಳ್ಯ, ಸುಬ್ರಹ್ಮಣ್ಯನಗರ, ಹನುಮಂತೇಗೌಡನಪಾಳ್ಯ ಮತ್ತಿತರೆಡೆಗಳಲ್ಲಿ ಬುಧವಾರವೂ ಲಸಿಕಾ ಅಭಿಯಾನ ಮುಂದುವರಿಯಲಿದೆ. ಅ.2ರಿಂದ ಪ್ರಾರಂಭವಾಗಿರುವ ಅಭಿಯಾನ ನ.15ಕ್ಕೆ ಮುಕ್ತಾಯವಾಗಲಿದೆ ಎಂದು ಮಾಹಿತಿ ನೀಡಿದರು.

    ಮೂರು ತಿಂಗಳ ನಂತರದ ಕರುಗಳಿಗೆ ಮತ್ತು ಗರ್ಭ ಧರಿಸಿರುವ ಹಸುಗಳಿಗೆ ಏಳು ತಿಂಗಳವರೆಗೂ ಲಸಿಕೆ ಹಾಕಿಸಬಹುದು. ಕಾಲುಬಾಯಿ ರೋಗದಿಂದ ಹಸುವಿನ ಉತ್ಪಾದಕಶಕ್ತಿ ಕಡಿಮೆಯಾಗುತ್ತದೆ. ಇದರಿಂದ ರೈತರ ಆರ್ಥಿಕ ಪ್ರಗತಿ ಕುಂಠಿತವಾಗುತ್ತದೆ. ಲಸಿಕೆ ಹಾಕಿಸಿದರೆ ಈ ಸಮಸ್ಯೆಯಿಂದ ಪಾರಾಗಬಹುದು ಎಂದರು.

    ಲಸಿಕಾ ಅಭಿಯಾನದಲ್ಲಿ ಡಾ. ಎಸ್.ಎನ್. ರಾಜಣ್ಣ, ಡಾ. ಎಸ್.ಆರ್. ನಯನಕುಮಾರ್, ಡಾ. ಸಿ. ನಿಶಾಂತ್, ಡಾ. ಕೆ. ಪವಿತ್ರಾ, ಜಾನುವಾರು ಅಧಿಕಾರಿ ಎನ್. ಮಲ್ಲೇಶ್, ಹಿರಿಯ ಪಶುವೈದ್ಯ ಪರೀಕ್ಷಕ ಬಿ.ಎಸ್. ಬಸವರಾಜು, ಆರ್. ನೇತ್ರಾವತಿ ಮತ್ತಿತರರಿದ್ದರು.

    ನೆಲಮಂಗಲ ತಾಲೂಕಿನ 45 ಸಾವಿರ ರಾಸುಗಳ ಪೈಕಿ ಈವರೆಗೆ ಶೇ.95 ಪಶುಗಳಿಗೆ ಲಸಿಕೆ ಹಾಕಲಾಗಿದೆ. ರಾಸುಗಳಿಗೆ ಕಿವಿಯೋಲೆ ಹಾಕಿ ಬಾರ್ ಕೋಡ್ ನೀಡಲಾಗುವುದು, ಇನಾಫ್ ಆ್ಯಪ್‌ನಿಂದ ರಾಸು, ಅದರ ಮಾಲೀಕರು, ವಿಮೆ, ಚುಚ್ಚುಮದ್ದಿನ ವಿವರವನ್ನು ದಾಖಲಿಸಲಾಗುವುದು. ನ.15ರ ನಂತರ ಕೂಂಬಿಂಗ್ ಮಾಡಿ ತಪ್ಪಿಹೋಗಿರುವ ರಾಸುಗಳಿಗೆ ಲಸಿಕೆ ಹಾಕಿ ಪೂರ್ಣ ಗುರಿ ಸಾಧಿಸಲಾಗುವುದು.
    ಡಾ. ಎಚ್. ಸಿದ್ದಪ್ಪ
    ನೆಲಮಂಗಲ ತಾಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts