More

    ವಚನಗಳಿಗಿದೆ ಸಮಾಜ ತಿದ್ದುವ ಶಕ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಅಭಿಮತ, ಯಂಟಗಾನಹಳ್ಳಿಯಲ್ಲಿ ದತ್ತಿ ಉಪನ್ಯಾಸ

    ನೆಲಮಂಗಲ: ಸಾಮಾನ್ಯ ಮಾನವನನ್ನು ಮಹಾಮಾನವನನ್ನಾಗಿ ಪರಿವರ್ತಿಸುವ ಶಕ್ತಿ ವಚನಗಳಿಗೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ. ರಮೇಶ್ ಅಭಿಪ್ರಾಯಪಟ್ಟರು.

    ತಾಲೂಕಿನ ಯಂಟಗಾನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಶುಕ್ರವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾವಂತರಿಂದ ವಚನ ಸಾಹಿತ್ಯ ಹುಟ್ಟಿದ್ದಲ್ಲ. ಬದಲಾಗಿ 12ನೇ ಶತಮಾನದಲ್ಲಿ ಸ್ವಂತ ಕಾಯಕದ ಅನುಭವದಿಂದ ಬೆಳೆದು ಬಂದುದ್ದಾಗಿದೆ ಎಂದರು.

    ವಚನ ಸಾಹಿತ್ಯದಲ್ಲಿರುವ ತತ್ವಾದರ್ಶಗಳು ಆಧುನಿಕ ಜಗತ್ತಿನ ಉನ್ನತಿಗೆ ಸಹಕಾರಿ. ನಗರಗಳಿಗೆ ಸೀಮಿತವಾಗಿದ್ದ ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಸರ್ಕಾರಿ ಶಾಲೆಯಮಟ್ಟಕ್ಕೆ ತಂದು ವಿದ್ಯಾರ್ಥಿಗಳಿಗೆ ವಚನ ಸಾಹಿತ್ಯ ಸಂಪತ್ತಿನ ಅರಿವು ಮೂಡಿಸುತ್ತಿರುವ ಶರಣ ಸಾಹಿತ್ಯ ಪರಿಷತ್‌ನ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.

    ಬಸವಾದಿ ಶರಣರ ಆಶಯದಂತೆ ಪ್ರತಿಯೊಬ್ಬರೂ ಕಾಯಕ ತತ್ವ ಆಧಾರಿತ ಜೀವನ ರೂಪಿಸಿಕೊಳ್ಳಬೇಕು. ಜತೆಗೆ ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿವಿಗೆ ನೀಡುವ ಸಮಯವನ್ನು ಸಾಹಿತ್ಯ ಅಧ್ಯಯನಕ್ಕೂ ನೀಡಬೇಕು ಎಂದರು.

    ನಿವೃತ್ತ ಮುಖ್ಯಶಿಕ್ಷಕ ಸಚ್ಚಿದಾನಂದಮೂರ್ತಿ ಮಾತನಾಡಿ, ವಚನ ಸಾಹಿತ್ಯವನ್ನು ತಳಮಟ್ಟದ ಪ್ರಾಥಮಿಕ ಶಿಕ್ಷಣದಿಂದಲೇ ನೀಡಬೇಕು. ತಿಂಗಳಿಗೊಂದು ಬಸವಾದಿ ಶರಣರ ವಚನಗಳನ್ನು ಮುಂದಿನ ಪೀಳಿಗೆಯ ಮಕ್ಕಳಿಗೆ ಕೊಡುಗೆಯಾಗಿ ನೀಡಬೇಕು ಎಂದು ಸಲಹೆ ನೀಡಿದರು.

    ಬಹುಮಾನ ವಿತರಣೆ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಿಂದ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಚನ ಪ್ರಬಂಧ ಸ್ಪರ್ಧೆ, ರಂಗೋಲಿ, ಚಿತ್ರರಚನೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ, ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಜತೆಗೆ 7ನೇ ತರಗತಿಯ 60 ವಿದ್ಯಾರ್ಥಿಗಳಿಗೆ ಶಬ್ಬಕೋಶವನ್ನು ಕೊಡಲಾಯಿತು.

    ಪರಿಷತ್‌ನ ತಾಲೂಕು ಅಧ್ಯಕ್ಷ ಕೆ.ಬಿ. ಶಿವಶಂಕರಯ್ಯ, ತಾಲೂಕಿನ ರಾಜ್ಯ ವೀರಶೈವ ಲಿಂಗಾಯತ ನಿವೃತ್ತ ನೌಕರರ ಸಂಘ ಅಧ್ಯಕ್ಷ ಆರ್. ನಾಗರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಕುಮಾರ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪರಮೇಶ್ವರಪ್ಪ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮುನಿಯಪ್ಪ, ಶಾಲಾ ಮುಖ್ಯಶಿಕ್ಷಕಿ ಎನ್.ಬಿ. ಸರೋಜಮ್ಮ, ಶಿಕ್ಷಕರಾದ ನಾಗೇಶ್, ಮುರಳಿ, ಪುಟ್ಟೇಗೌಡ, ನಿರಂಜನ್‌ಮೂರ್ತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts