More

    ಇನ್ನೂ ಎರಡು ದಿನ ಭಾರಿ ಮಳೆ ಮುನ್ನೆಚ್ಚರಿಕೆ

    ಕಾರವಾರ:
    ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯಲಾರಂಭಿಸಿವೆ. ಅಘನಾಶಿನಿ, ಕಾಳಿ ಹಾಗೂ ಗಂಗಾವಳಿ ನದಿ ತಟದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

    ಈ ನಡುವೆ ಜು.23 ಹಾಗೂ 24 ರಂದು ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ಘೋಷಿಸಿದೆ.
    ಜಿಲ್ಲೆಯಲ್ಲಿ ಮಳೆಯಿಂದ ಹಲವೆಡೆ ರಸ್ತೆ, ಮನೆಗಳ ಮೇಲೆ ಮರ ಮುರಿದು ಬಿದ್ದಿದೆ. ವಿದ್ಯುತ್, ಇಂಟರ್‌ನೆಟ್ ಸಂಪರ್ಕ ಕಡಿತವಾಗಿದೆ. ಕುಮಟಾ, ಜೊಯಿಡಾದಲ್ಲಿ ತಲಾ-2, ಕಾರವಾರ, ಅಂಕೋಲಾ, ಶಿರಸಿಯಲ್ಲಿ ತಲಾ 1 ಮನೆಗಳಿಗೆ ಹಾನಿಯಾಗಿದೆ. ಯಲ್ಲಾಪುರ-2, ಜೊಯಿಡಾ 1 ಜಾನುವಾರುಗಳು ಮೃತಪಟ್ಟಿವೆ.

    6 ಗೇಟ್‌ಗಳಿಂದ ನೀರು ಹೊರಗೆ:

    Kadra dam gate opened Kadra Dam gate open-1

    ಕದ್ರಾ ಅಣೆಕಟ್ಟೆಗೆ ಒಳಹರಿವು ಹೆಚ್ಚಿದ್ದು, ಶುಕ್ರವಾರ ಎರಡು ಗೇಟ್‌ಗಳ ಮೂಲಕ 5 ಸಾವಿರ ಕ್ಯೂಸೆಕ್ ನೀರು ಬಿಡಲಾಗಿತ್ತು. ಶನಿವಾರ ಒಳಹರಿವು 30,549 ಕ್ಯೂಸೆಕ್ ಇದ್ದು, ಒಟ್ಟು 6 ಗೇಟ್‌ಗಳನ್ನು ತೆರೆದು 29,242 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

    ವಿದ್ಯುತ್ ಉತ್ಪಾದನೆ ಮಾಡಿ 21,416 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಒಟ್ಟಾರೆ 50,658 ಕ್ಯೂಸೆಕ್ ನೀರು ಕಾಳಿ ನದಿಗೆ ಹರಿದು ಹೋಗುತ್ತಿದೆ.
    ಅಣೆಕಟ್ಟೆಯ ಗರಿಷ್ಠ ಮಟ್ಟ 34.50 ಮೀಟರ್ ಇದ್ದರೂ ಪ್ರವಾಹದ ಮುನ್ನೆಚ್ಚರಿಕೆಯ ಸಲುವಾಗಿ ಜಿಲ್ಲಾಡಳಿತ ಗರಿಷ್ಠ 31 ಮೀಟರ್ ನೀರು ಸಂಗ್ರಹಿಸಲು ಸೂಚಿಸಿದೆ.

    Kadra-Dam-Gate-open-scaled

    ಶನಿವಾರ ಬೆಳಗ್ಗೆ ಅಣೆಕಟ್ಟೆಯಲ್ಲಿ 31.53 ಮೀಟರ್ ನೀರು ಸಂಗ್ರಹವಾಗಿತ್ತು. ಕದ್ರಾ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದಲ್ಲಿ ಜು.23 ರಂದು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಇನ್ನೂ ಒಂದು ಗೇಟ್ ತೆರೆದು ನೀರು ಬಿಡುವ ಸಾಧ್ಯತೆ ಇದೆ.
    ಸದ್ಯ ನೀರು ಬಿಟ್ಟಿರುವುದರಿಂದ ಅಣೆಕಟ್ಟೆಯ ಎದುರಿನ ಸೇತುವೆ ಮುಳುಗಡೆಯಾಗಿದೆ. ಅಣೆಕಟ್ಟೆಯ ಮೇಲೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮಲ್ಲಾಪುರದ ತಗ್ಗು ಗದ್ದೆಗಳಿಗೆ ನೀರು ತುಂಬಿದ್ದು, ಕದ್ರಾ ಮಹಾಮಾಯಾ ಜಾತ್ರೆ ಕಟ್ಟೆಯ ಜಲಾವೃತವಾಗಿದೆ.

    ಕೆರವಡಿ -ಉಳಗಾ ನಡುವೆ ಬಾರ್ಜ್ ಸಂಚಾರ ಸ್ಥಗಿತಗೊಂಡಿದೆ. ಕಾಳಿ ನದಿ ಕೆಂಬಣ್ಣದಲ್ಲಿ ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದೆ. ನೀರು ಬಿಡುವಿಕೆಯ ಪ್ರಮಾಣವನ್ನು ಇನ್ನು ಸ್ವಲ್ಪವೇ ಹೆಚ್ಚು ಮಾಡಿದರೂ ಮಲ್ಲಾಪುರ, ಕದ್ರಾ, ಕೆರವಡಿ, ಕಿನ್ನರ, ವೈಲವಾಡ ಸೇರಿ ವಿವಿಧೆಡೆ ರಸ್ತೆಗಳಲ್ಲಿ ನೀರು ನಿಲ್ಲಲಿದೆ. ಮನೆಗಳಿಗೆ ನೀರು ನುಗ್ಗಲಿದೆ.

    ಉಕ್ಕಿದ ಗಂಗಾವಳಿ:

    ಘಟ್ಟದ ಮೇಲಿನ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಗಂಗಾವಳಿ ನದಿ ಉಕ್ಕಿದೆ. ಅಂಕೋಲಾ ತಾಲೂಕಿನಲ್ಲಿ ಗಂಗಾವಳಿ ನದಿ ತಟದ ರಸ್ತೆಗಳು ಜಲಾವೃತವಾಗಿದ್ದು, ಮನೆಯ ಮೆಟ್ಟಿಲವರೆಗೂ ನೀರು ತುಂಬಿಕೊಂಡಿದೆ. ರಾತ್ರಿ ಮಳೆ ಜಾಸ್ತಿಯಾದರೆ ನೀರು ನುಗ್ಗುವ ಸಾಧ್ಯತೆ ಇದೆ. ಅಘನಾಶಿನಿ ನದಿಯೂ ಉಕ್ಕಿ ಹರಿಯುತ್ತಿದೆ.

    ಮಳೆಯ ಪ್ರಮಾಣ:
    ಶನಿವಾರ ಬೆಳಗಿನ ವರದಿಯಂತೆ ಅಂಕೋಲಾ-48.4, ಭಟ್ಕಳ-63.7, ಹಳಿಯಾಳ-41.9, ಹೊನ್ನಾವರ-59.9, ಕಾರವಾರ-99.9, ಕುಮಟಾ-33.2, ಮುಂಡಗೋಡ-44.4, ಸಿದ್ದಾಪುರ-79.9, ಶಿರಸಿ-84.2, ಜೊಯಿಡಾ-95.7, ಯಲ್ಲಾಪುರ-66.8, ದಾಂಡೇಲಿ-63.2 ಮಿಮೀ ಮಳೆಯಾಗಿದೆ.

    ಇದನ್ನೂ ಓದಿ:ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಗಂಗಾವಳಿ ನದಿ

    ಮಳೆಯ ಹೈಲೈಟ್ಸ್

    • *ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಗಂಗಾವಳಿ ನದಿ
    • *ಕಾರವಾರ, ಶಿರಸಿ, ಸಿದ್ದಾಪುರ, ಜೊಯಿಡಾ ಭಾಗದಲ್ಲಿ ಭಾರಿ ಮಳೆ
    • *ಕೆರವಡಿ-ಉಳಗಾ ಬಾರ್ಜ್ ಸಂಚಾರ ಸ್ಥಗಿತ
    • *ಅಂಕೋಲಾದಲ್ಲಿ ಮನೆಯಂಗಳಕ್ಕೆ ಬಂದು ನಿಂತ ಗಂಗಾವಳಿ ನೀರು
    • *ಕಾಳಿ, ಗಂಗಾವಳಿ ನದಿ ತಟದಲ್ಲಿ ನೆರೆಯ ಭೀತಿ
    • *ಇನ್ನೂ ಎರಡು ದಿನ ಆರೇಂಜ್ ಅಲರ್ಟ್
    • *ಕದ್ರಾ ಅಣೆಕಟ್ಟೆಯಿಂದ ನಿರಂತರ ನೀರು ಹೊರಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts