More

    ಮೀಸಲಿಟ್ಟಿದ್ದ ಅನುದಾನ ಗ್ಯಾರಂಟಿಗೆ ಬಳಕೆ

    ಶಿವಮೊಗ್ಗ: ಧಾರ್ಮಿಕ ದತ್ತಿ ಕಾಯ್ದೆ ಮೂಲಕ ಶೇ.10 ಆದಾಯವನ್ನು ಸರ್ಕಾರದ ಖಜಾನೆ ತುಂಬಿಸಿಕೊಳ್ಳುವ ಕೆಲಸ ಮಾಡಿತ್ತು. ಆದರೆ ಮೇಲ್ಮನವಿಯಲ್ಲಿ ಅಂಗೀಕಾರ ಆಗದೆ ಮಸೂದೆ ಬಿದ್ದುಹೋಗಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ಮಕ್ಕಳು ಮತ್ತು ಮತದಾರರ ಮನಸ್ಸು ಒಡೆಯುವ ಕೆಲಸ ಮಾಡುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕಿಡಿಕಾರಿದರು.

    ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ಶಾಲೆ ಮತ್ತು ವಸತಿ ಶಾಲೆಗಳಲ್ಲಿ ಕುವೆಂಪು ಅವರ ಘೋಷಣೆ ತಿದ್ದುವ ಮೂಲಕ ಅವಮಾನ ಮಾಡಿದ್ದ ಕಾಂಗ್ರೆಸ್ ಇದೀಗ ಧಾರ್ಮಿಕ ದತ್ತಿ ಹಣಕ್ಕೆ ಕೈಹಾಕಲು ಮುಂದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಚುನಾವಣಾ ಪ್ರಣಾಳಿಕೆಯಲ್ಲಿ ನುಡಿದಂತೆ 10 ಕೆಜಿ ಅಕ್ಕಿ ಕೊಡಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ಕೆ ಹೋಲಿಕೆ ಮಾಡಿದರೆ ಕಾಂಗ್ರೆಸ್ ನಗೆಪಾಟಲಿಗೆ ಈಡಾಗುತ್ತದೆ. ಪಂಚ ಗ್ಯಾರೆಂಟಿ ಕೊಟ್ಟು ಪರಿಶಿಷ್ಟ ಜಾತಿಗೆ ಮೀಸಲಿಟ್ಟಿದ್ದ ಅನುದಾನವನ್ನು ಕಾಂಗ್ರೆಸ್ ದುರುಪಯೋಗ ಮಾಡಿಕೊಂಡಿದೆ. ಈ ಎಲ್ಲ ಕಾರಣಗಳಿಂದ ಲೋಕಸಭೆಯಲ್ಲಿ ಈ ಬಾರಿ 40 ಸೀಟು ಪಡೆಯುವುದೂ ಕಾಂಗ್ರೆಸ್‌ಗೆ ಕಷ್ಟವಾಗಲಿದೆ ಎಂದರು.
    ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಂದಿನ 10 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಆಳ್ವಿಕೆ ಇರಲಿದೆ ಎಂಬ ಮಾತಿಗೆ ಟಾಂಗ್ ನೀಡಿದ ರಾಘವೇಂದ್ರ, ಈಗ ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎಂಬುದನ್ನು ಹುಡುಕುವ ಪರಿಸ್ಥಿತಿ ಬಂದಿದೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಎಐಸಿಸಿ ನಾಯಕ ರಾಹುಲ್ ಗಾಂಧಿ ಪಾದಯಾತ್ರೆ ನಡೆಸಿದ್ದಾರೆ. ಮತ್ತೊಂದೆಡೆ ಸೋನಿಯಾ ಗಾಂಧಿ ಅವರು ಲೋಕಸಭೆಯಿಂದ ರಾಜ್ಯಸಭೆಗೆ ಬಂದಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲೂ ಅಸಮಾಧಾನಿತ ಕಾಂಗ್ರೆಸ್ ಶಾಸಕರೇ ಅಡ್ಡಮತದಾನ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕುಮಾರ್ ಬಂಗಾರಪ್ಪ ಬಿಜೆಪಿ ಬಿಡಲ್ಲ
    ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ. ಮಗನ ಚಲನಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು ಚುನಾವಣೆ ವೇಳೆಗೆ ನಮ್ಮೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು. ಕುಮಾರ್ ಬಂಗಾರಪ್ಪ ಅವರನ್ನು ಕಾಂಗ್ರೆಸ್‌ಗೆ ಕರೆತರಲು ಮಾತುಕತೆ ನಡೆಯುತ್ತಿದ್ದು ಅದಕ್ಕೆ ಬಿ.ಎಸ್.ಯಡಿಯೂರಪ್ಪ ಅಡ್ಡಿಯಾಗಿದ್ದಾರೆಂಬ ಶಾಸಕ ಬೇಳೂರು ಮಾತಿಗೂ ಪ್ರತಿಕ್ರಿಯಿಸಿದ ಅವರು, ಅದು ಅವರ ಹೇಳಿಕೆಯಾಗಿದೆ. ಆದರೆ ಕುಮಾರ್ ಬಂಗಾರಪ್ಪ ಲೋಕಸಭಾ ಚುನಾವಣೆಯಲ್ಲಿ ನಮ್ಮೊಂದಿಗೆ ಓಡಾಡಲಿದ್ದಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts