More

    VIDEO | ಐಪಿಎಲ್ ಪಂದ್ಯದ ವೇಳೆ ಚೆಂಡಿಗೆ ಎಂಜಲು ಹಚ್ಚಿ ಎಡವಟ್ಟು ಮಾಡಿದ ರಾಬಿನ್​ ಉತ್ತಪ್ಪ!

    ದುಬೈ: ಐಪಿಎಲ್ 13ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಕರ್ನಾಟಕದ ಅನುಭವಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಎಡವಟ್ಟು ಒಂದನ್ನು ಮಾಡಿದ್ದಾರೆ. ಕರೊನಾ ವೈರಸ್ ಹಾವಳಿಯ ನಡುವೆ ಐಸಿಸಿ ಈಗಾಗಲೆ ಚೆಂಡಿಗೆ ಎಂಜಲು ಹಚ್ಚುವುದನ್ನು ನಿಷೇಧಿಸಿದೆ. ಹಾಗಿದ್ದರೂ ರಾಬಿನ್ ಉತ್ತಪ್ಪ ಅವರು ಬುಧವಾರ ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ಚೆಂಡಿಗೆ ಎಂಜಲು ಹಚ್ಚಿದ್ದಾರೆ.

    ದುಬೈನಲ್ಲಿ ನಡೆದ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಅವರು 3ನೇ ಓವರ್‌ನ 5ನೇ ಎಸೆತದಲ್ಲಿ ಸುನೀಲ್ ನಾರಾಯಣ್ ಅವರ ಕ್ಯಾಚ್ ಒಂದನ್ನು ಕೈಚೆಲ್ಲಿದರು. ಅದರ ಬೆನ್ನಲ್ಲೇ ಮಿಡ್-ಆನ್‌ನಿಂದ ಚೆಂಡನ್ನು ಪಡೆದುಕೊಂಡ ರಾಬಿನ್ ಉತ್ತಪ್ಪ, ಎಂಜಲು ತೆಗೆದು ಚೆಂಡಿನ ಮೇಲೆ ಹಚ್ಚಿದರು. ಇದರ ವಿಡಿಯೋ ಮತ್ತು ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಈ ಘಟನೆಯ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಇದುವರೆಗೆ ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ. ಐಸಿಸಿ ನಿಯಮದನ್ವಯ ಕೋವಿಡ್-19 ಸೋಂಕು ಹರಡುವ ಭೀತಿಯಿಂದಾಗಿ ಚೆಂಡಿಗೆ ಎಂಜಲು ಹಚ್ಚುವುದನ್ನು ನಿಷೇಧಿಸಲಾಗಿದೆ.

    ಇದನ್ನು ಓದಿ: ಆಸ್ಟ್ರೇಲಿಯಾದ ಸರ್ಫಿಂಗ್ ಕ್ರೀಡಾಪಟು ಈಗ ನೀಲಿಚಿತ್ರ ತಾರೆ!

    ಉತ್ತಪ್ಪ ಚೆಂಡಿಗೆ ಎಂಜಲು ಹಚ್ಚಿದ ಬಳಿಕ ಅದನ್ನು ಸ್ಯಾನಿಟೈಸರ್ ಬಳಸಿ ಶುಚಿಗೊಳಿಸಲಾಗಿಲ್ಲ. ಈ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಆಟಗಾರರು ಆಕಸ್ಮಿಕವಾಗಿ ಎಂಜಲು ಹಚ್ಚಿದಾಗ ಚೆಂಡನ್ನು ಸ್ಯಾನಿಟೈಸರ್‌ನಿಂದ ಶುಚಿಗೊಳಿಸಲಾಗಿತ್ತು. ಉತ್ತಪ್ಪ ಅವರಿಗೆ ಅಂಪೈರ್ ಕನಿಷ್ಠ ಎಚ್ಚರಿಕೆಯನ್ನೂ ನೀಡಿಲ್ಲ.

    ಐಸಿಸಿ ನಿಯಮದನ್ವಯ ಆಟಗಾರನೊಬ್ಬ ಎಂಜಲು ಹಚ್ಚಿದಾಗ ಅಂಪೈರ್ ಅದನ್ನು ಸ್ಯಾನಿಟೈಸರ್‌ನಿಂದ ಶುಚಿಗೊಳಿಸಬೇಕು. ಅದರ ಬೆನ್ನಲ್ಲೇ ಆ ಆಟಗಾರನ ತಂಡಕ್ಕೆ ಎಚ್ಚರಿಕೆ ನೀಡಲಾಗುತ್ತದೆ. ಈ ರೀತಿ 2 ಬಾರಿ ಎಚ್ಚರಿಕೆ ನೀಡಲಾದ ಬಳಿಕ 3ನೇ ಬಾರಿ ಅದೇ ತಪ್ಪು ಮಾಡಿದರೆ 5 ರನ್ ದಂಡ ವಿಧಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts