More

    ಮಠಕ್ಕೆ ಉಚಿತ ಅಕ್ಕಿ: ವಿವಾದ ಬಳಿಕ ಮರುಪೂರೈಕೆಗೆ ಸಿಎಂ ಆದೇಶ

    ಬೆಂಗಳೂರು: ದಾಸೋಹ ಯೋಜನೆ ಅನ್ವಯ ತುಮಕೂರಿನ ಸಿದ್ದಗಂಗಾ ಮಠ ಸೇರಿ ರಾಜ್ಯದ 454 ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಅಕ್ಕಿ ಹಾಗೂ ಗೋಧಿ ಸರಬರಾಜಿಗೆ ರಾಜ್ಯ ಸರ್ಕಾರ ಕತ್ತರಿ ಹಾಕಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದು ವಿವಾದ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಅಕ್ಕಿ, ಗೋಧಿ ಪೂರೈಕೆ ಮುಂದುವರಿಸುವಂತೆ ಆದೇಶ ನೀಡಿದ್ದಾರೆ.

    ವಿವಿಧ ಮಠಗಳು, ವೃದ್ಧಾಶ್ರಮಗಳು ಹಾಗೂ ಅನಾಥಾಶ್ರಮಗಳಿಗೆ ಸರ್ಕಾರ ದಾಸೋಹ ಯೋಜನೆಯಡಿ ಅಕ್ಕಿ ಹಾಗೂ ಗೋಧಿ ವಿತರಣೆ ಮಾಡುತ್ತಿತ್ತು. ಆದರೆ ಇತ್ತೀಚೆಗೆ ಕಡಿತಗೊಳಿಸಿ ಆದೇಶ ಹೊರಬಿದ್ದಿತ್ತು. ಮಾಜಿ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಯಿತು.

    ಸಚಿವ ಸಂಪುಟ ಸಭೆಯಲ್ಲಿ ಆಹಾರ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಗರಂ ಆದ ಮುಖ್ಯಮಂತ್ರಿ ಯಡಿಯೂರಪ್ಪ, ಈ ರೀತಿ ಮಾಡಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಕಿಡಿಕಾರಿದರು. ಸಚಿವೆ ಜೊಲ್ಲೆ ಏನೇ ಸಮಜಾಯಿಷಿ ನೀಡಿದರೂ ಒಪ್ಪದ ಸಿಎಂ, ಎಂದಿನಂತೆ ಪಡಿತರ ಮುಂದುವರಿಸುವಂತೆ ಸೂಚಿಸಿ ವಿವಾದ ತಣ್ಣಗಾಗಿಸುವ ಪ್ರಯತ್ನ ಮಾಡಿದರು.ಮಠಮಾನ್ಯಗಳು ಉಚಿತ ದಾಸೋಹ ಮಾಡುತ್ತಿವೆ. ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿವೆ.

    ಅಂಥ ಸಂಸ್ಥೆಗಳಿಗೆ ಉಚಿತವಾಗಿ ಅಕ್ಕಿ ಮತ್ತು ಗೋಧಿ ನೀಡುವಂತೆ ನಿರ್ದೇಶನ ನೀಡಿದ್ದರೂ ಯಾಕೆ ಜಾರಿಯಾಗಿಲ್ಲ? ನಾವೆಲ್ಲರೂ ಮಠಗಳಿಗೆ ಹೋಗಿ ಸ್ವಾಮೀಜಿ ಕಾಲಿಗೆ ಬಿದ್ದು ಬರ್ತೀವಿ. ಇದೊಂದು ಸಣ್ಣ ಸಹಕಾರ ನಾವು ಮಾಡದಿದ್ದರೆ ಹೇಗೆ? ಎಂದು ಸಿಎಂ ಪ್ರಶ್ನಿಸಿದರು ಎನ್ನಲಾಗಿದೆ.

    ಯಾವ ಆದೇಶದಲ್ಲಿ ಯಾರಿಗೆ ಪಡಿತರ?

    2019ರ ನವೆಂಬರ್ 12ರ ಆದೇಶ

    1. ಅನುಮೋದಿತ 460 ಕಲ್ಯಾಣ ಸಂಸ್ಥೆಗಳು
    2. 41,384 ನಿವಾಸಿಗಳು
    3. ತಲಾ 10 ಕೆಜಿ ಅಕ್ಕಿ 5 ಕೆಜಿ ಗೋಧಿ

    ದಾಸೋಹ ಪ್ರಮಾಣ

    ಆದಿಚುಂಚನಗಿರಿ ಮಠ

    ಒಟ್ಟು ಮಕ್ಕಳು 2622 ಮಕ್ಕಳಿಗೆ 26,220 ಕೆಜಿ ಅಕ್ಕಿ 13,110 ಕೆಜಿ ಗೋಧಿ (ಪ್ರತಿ ತಿಂಗಳು )

    ಜೆಎಸ್​ಎಸ್ ವಿದ್ಯಾರ್ಥಿ ನಿಲಯ ಮೈಸೂರು, ಜೆಎಸ್​ಎಸ್ ಫಿಸಿಕಲ್ ಹ್ಯಾಂಡಿಕ್ಯಾಫ್ಟ್ ರ್ವಂಗ್ ವುಮನ್ ಆಂಡ್ ಸ್ಟೂಡೆಂಟ್ ಹಾಸ್ಟೆಲ್

    # ಒಟ್ಟು 149 ವಿದ್ಯಾರ್ಥಿಗಳು

    # 1,490 ಕೆಜಿ ಅಕ್ಕಿ

    # 745 ಕೆಜಿ ಗೋಧಿ

    (ಪ್ರತಿ ತಿಂಗಳು)

    2019 ಡಿಸೆಂಬರ್ 13ರ ಆದೇಶ

    1. ಅನುಮೋದಿತ ಒಟ್ಟು 176 ಕಲ್ಯಾಣ ಸಂಸ್ಥೆಗಳು
    2. 11,762 ನಿವಾಸಿಗಳು
    3. 10 ಕೆಜಿ ಅಕ್ಕಿ 5 ಕೆಜಿ ಗೋಧಿ

    2019ರ ಡಿಸೆಂಬರ್ 27ರ ಆದೇಶ

    1. ಅನುಮೋದಿತ 189 ಕಲ್ಯಾಣ ಸಂಸ್ಥೆಗಳು
    2. 13,785 ನಿವಾಸಿಗಳು
    3. ಒಟ್ಟು 10 ಕೆಜಿ ಅಕ್ಕಿ 5 ಕೆಜಿ ಗೋಧಿ

    ತುಮಕೂರು ಸಿದ್ದಗಂಗಾ ಮಠ

    # ಒಟ್ಟು 7,359 ವಿದ್ಯಾರ್ಥಿಗಳು

    # 73,590 ಕೆಜಿ ಅಕ್ಕಿ

    # 36,795 ಕೆಜಿ ಗೋಧಿ

    (ಪ್ರತಿ ತಿಂಗಳು)

    ಮೂರು ಮಠಗಳ ಪಡಿತರಕ್ಕೆ ಕತ್ತರಿ

    • ಸಿದ್ದಗಂಗಾ ಮಠ
    • ಆದಿಚುಂಚನಗಿರಿ ಮಠ
    • ಸುತ್ತೂರು ಮಠ

    ಸರ್ಕಾರಕ್ಕೆ ಎಷ್ಟೇ ಕಷ್ಟವಾದರೂ, ಆರ್ಥಿಕ ಹೊರೆಬಿದ್ದರೂ ಪರವಾಗಿಲ್ಲ. ಬುಧವಾರ ದಿಂದಲೇ ಯಥಾಸ್ಥಿತಿ ಮುಂದುವರೆಸುತ್ತೇವೆ. ಪಡಿತರ ಕಡಿತ ವಿಚಾರ ಸರ್ಕಾರದ ಗಮನಕ್ಕೆ ಬಂದಿಲ್ಲವೇ ಎಂಬುದು ಈಗ ಬೇಡ.

    | ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ

    ಏನಿದು ಯೋಜನೆ?

    ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಠಗಳು, ಅನಾಥಾಶ್ರಮಗಳು ಹಾಗೂ ವೃದ್ಧಾಶ್ರಮಗಳಿಗೆ ಅಕ್ಕಿ ಹಾಗೂ ಗೋಧಿ ನೀಡಲು ದಾಸೋಹ ಎಂಬ ಯೋಜನೆ ಆರಂಭಿಸಲಾಗಿತ್ತು. ಒಟ್ಟು 454 ಸಂಸ್ಥೆಗಳಲ್ಲಿರುವ ಪ್ರತಿಯೊಬ್ಬರಿಗೂ ತಿಂಗಳಿಗೆ ಹತ್ತು ಕೆಜಿ ಅಕ್ಕಿ ಹಾಗೂ 5 ಕೆಜಿ ಗೋಧಿ ನೀಡಲಾಗುತ್ತಿತ್ತು.

    3 ತಿಂಗಳಿಂದ ರೇಷನ್ ಬಂದಿಲ್ಲ

    ತುಮಕೂರು: ಸಿದ್ಧಗಂಗಾ ಮಠಕ್ಕೆ ಕೇಂದ್ರ ಸರ್ಕಾರ ಪೂರೈಸುತ್ತಿದ್ದ ಅಕ್ಕಿ ಹಾಗೂ ಗೋಧಿ ಕಳೆದ ಮೂರು ತಿಂಗಳಿನಿಂದ ಸ್ಥಗಿತ ಗೊಂಡಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರತಿ ತಿಂಗಳು 73,590 ಕೆ.ಜಿ.ಅಕ್ಕಿ ಹಾಗೂ 36,795 ಕೆ.ಜಿ.ಗೋಧಿ ಸರಬರಾಜು ಮಾಡುತ್ತಿತ್ತು. ಮಠಕ್ಕೆ ಪೂರೈಕೆಯಾಗುತ್ತಿದ್ದ ರೇಷನ್ ಎಷ್ಟು ಬಳಕೆಯಾಗುತ್ತಿದೆ ಎಂಬ ಬಗ್ಗೆ ಸರ್ಕಾರ ಮಾಹಿತಿ ಕೇಳಿತ್ತು, ಅದರಂತೆ ನಾವು ಸೂಕ್ತ ದಾಖಲೆ ಸಲ್ಲಿಸಿದ್ದೇವೆ ಎಂದು ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

    ಮಾಜಿ ಸಚಿವ ಯು.ಟಿ. ಖಾದರ್ ಆರೋಪ

    ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಯು.ಟಿ.ಖಾದರ್, ಪಡಿತರ ಕಡಿತದಿಂದ ವಿದ್ಯಾರ್ಥಿಗಳು, ವೃದ್ಧಾಶ್ರಮದಲ್ಲಿನ ವೃದ್ಧರಿಗೆ ತೊಂದರೆಯಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ನವೆಂಬರ್ 12ರಿಂದ ಡಿಸೆಂಬರ್ 27 ವರೆಗೆ ಸರ್ಕಾರ ಮೂರು ಬಾರಿ ಆದೇಶ ಬದಲಿಸಿದೆ. ಉಚಿತ ವಸತಿ, ಊಟ ನೀಡುವ ಸಂಸ್ಥೆಗಳಿಗೆ ಪ್ರತಿ ತಿಂಗಳಿಗೆ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಮತ್ತು 5 ಕೆಜಿ ಗೋಧಿಯಂತೆ ಒಟ್ಟು 15 ಕೆಜಿ ಆಹಾರ ಧಾನ್ಯ ಹಂಚಿಕೆ ಮಾಡಲಾಗುತ್ತಿತ್ತು. ಆದರೆ, ಬೇರೆ ಬೇರೆ ಆದೇಶಗಳ ಮೂಲಕ ಹಂತ ಹಂತವಾಗಿ 271 ಸಂಸ್ಥೆಗಳನ್ನು ಕೈ ಬಿಡಲಾಗಿದೆ. ದಾಸೋಹ ಯೋಜನೆ ರೀತಿಯಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿ ಪ್ರಮಾಣವನ್ನೂ 7 ಕೆ.ಜಿ.ಯಿಂದ 5 ಕೆ.ಜಿ.ಗೆ ಇಳಿಸಲು ಮುಂದಾಗಿದೆ. ಇದರ ವಿರುದ್ಧ ಹೋರಾಟ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ಖಾದರ್ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts