More

    ಚಿಂದಿ ಆಯುವ ಕೆಲಸಕ್ಕೆ ಅಪ್ರಾಪ್ತ ಮಕ್ಕಳ ಬಳಕೆ

    ಹುಣಸೂರು: ನಗರದಲ್ಲಿ ಗುಜರಿ ಮಳಿಗೆ ಮಾಲೀಕರು ಅಪ್ರಾಪ್ತ ಮಕ್ಕಳನ್ನು ಬಳಸಿಕೊಂಡು ಚಿಂದಿ ಆಯುವ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದು, ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಆಗ್ರಹಿಸಿದರು.

    ನಗರ ಠಾಣೆಯಲ್ಲಿ ಶುಕ್ರವಾರ ಆಯೋಜಿಸಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಹುಣಸೂರು ನಗರದಲ್ಲಿ ಸುಮಾರು 20 ಗುಜರಿ ಕೇಂದ್ರಗಳಿದ್ದು, ಈ ಗುಜರಿ ಕೇಂದ್ರಗಳ ಮಾಲೀಕರು ಅಪ್ರಾಪ್ತ ಮಕ್ಕಳನ್ನು ಚಿಂದಿ ಆಯಲು ಬಳಸಿಕೊಳ್ಳುತ್ತಿದ್ದು, ಅವರು ತರುವ ಪದಾರ್ಥಗಳಿಂದ ಲಾಭವನ್ನು ಪಡೆಯುತ್ತಾ ಮಕ್ಕಳನ್ನು ಶೋಷಣೆ ಮಾಡುತ್ತಿದ್ದಾರೆ. ಈ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಅನೇಕರು ಮಾದಕವ್ಯಸನಿಗಳಾಗಿ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಸುಮಾರು 25ಕ್ಕೂ ಹೆಚ್ಚು ಮಕ್ಕಳು ನಗರದಲ್ಲಿ ರಸ್ತೆ ಬದಿಗಳಲ್ಲಿ ಚಿಂದಿ ಆಯುತ್ತಾ ಗಾಂಜಾ ಮುಂತಾದ ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಾ ತಮಗೆ ಅರಿವಿಲ್ಲದಂತೆ ಶೋಷಣೆಗೊಳಗಾಗುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಸಭೆಗಳಲ್ಲಿ ಪ್ರಸ್ತಾಪಿಸಿದ್ದರೂ ಏನೂ ಪ್ರಯೋಜನವಾಗಿಲ್ಲ. ಕೂಡಲೇ ಈ ಮಕ್ಕಳನ್ನು ರಕ್ಷಣೆ ಮಾಡಿ ಶಾಲೆಗೆ ಸೇರಿಸಬೇಕು ಮತ್ತು ಗುಜರಿ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
    ನಗರದ ಕೆಲವು ಸ್ಥಳಗಳಲ್ಲಿ ರಾಷ್ಟ್ರನಾಯಕರ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಮುಂದೆ ಲೋಕಸಭಾ ಚುನಾವಣೆ ನಡೆಯಲಿದ್ದು, ಕಿಡಿಗೇಡಿಗಳು ಈ ಫ್ಲೆಕ್ಸ್‌ಗಳಿಗೆ ಹಾನಿ ಮಾಡಿ ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ಅಶಾಂತಿ ಉಂಟು ಮಾಡುವ ಸಾಧ್ಯತೆ ಇದೆ. ಆದ್ದರಿಂದ ಎಲ್ಲ ರಾಷ್ಟ್ರನಾಯಕರ ಹಾಗೂ ಜನಪ್ರತಿನಿಧಿಗಳ ಫ್ಲೆಕ್ಸ್‌ಗಳನ್ನು ತೆರವುಗೊಳಿಸಬೇಕು. ಯಾರು ಫ್ಲೆಕ್ಸ್‌ಗಳನ್ನು ಹಾಕಿರುತ್ತಾರೋ ಅವರೇ ನಗರಸಭೆ ಪೊಲೀಸ್ ಠಾಣೆಗಳಿಂದ ಕಾಲಮಿತಿಯಲ್ಲಿ ಅನುಮತಿ ಪಡೆಯಬೇಕು ಎಂದು ಒತ್ತಾಯಿಸಿದರು.

    ದಲಿತ ಮಹಿಳಾ ಒಕ್ಕೂಟದ ರೇಣುಕಮ್ಮ ಬನ್ನಿಬೀದಿ ಮಾತನಾಡಿ, ಹುಣಸೂರು ನಗರದ ಕೆಲವು ಭಾಗಗಳಲ್ಲಿ ವಾಹನ ಸವಾರರು ವ್ಹೀಲಿಂಗ್ ಮಾಡುತ್ತಿದ್ದು, ಹಾಗೂ ಗಾಂಜಾ ಸೇವನೆ ಅಧಿಕವಾಗಿ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿದೆ. ಮತ್ತು ದಲಿತರು ವಾಸ ಮಾಡುತ್ತಿರುವ ಕಾಲನಿಗಳಲ್ಲಿ ಅಕ್ರಮ ಮದ್ಯ ಮಾರಾಟ ಬೆಳಗ್ಗೆಯಿಂದಲೇ ನಡೆಯುತ್ತಿದೆ. ಇಂತಹವರ ವಿರುದ್ಧ ಕ್ರಮವಹಿಸಬೇಕು ಎಂದು ಹೇಳಿದರು.

    ಕಲ್ಕುಣಿಕೆ ಗ್ರಾಮದ ಮಯೂರನಾಯ್ಕ ಮಾತನಾಡಿ, ಕಲ್ಕುಣಿಕೆ ಗ್ರಾಮದಲ್ಲಿ ಸರ್ಕಾರ ಉಚಿತವಾಗಿ ಕೊಡುವ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಶಾಲೆಗೆ ಬರುವ ಹೆಣ್ಣು ಮಕ್ಕಳಿಗೆ ಪುಂಡರು ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಪೊಲೀಸರು ಬೀಟ್ ನಡೆಸಿ ಕಿಡಿಗೇಡಿಗಳ ವಿರುದ್ಧ ಕ್ರಮವಹಿಸಬೇಕೆಂದು ಕೋರಿದರು.

    ನಗರ ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್ ಮಾತನಾಡಿ, ಅಪ್ರಾಪ್ತ ಮಕ್ಕಳ ಬಳಕೆ ಸೇರಿದಂತೆ ಸಭೆಯಲ್ಲಿ ಗಮನಕ್ಕೆ ತಂದಿರುವ ವ್ಹೀಲಿಂಗ್, ಅಕ್ರಮ ಮದ್ಯ ಮಾರಾಟ, ಶಾಲಾ ಮಕ್ಕಳಿಗೆ ಕಿರಿಕಿರಿ ಉಂಟು ಮಾಡುವವರ ವಿರುದ್ಧ ಕ್ರಮವಹಿಸುವುದಾಗಿ ಹೇಳಿದರು.
    ಸಭೆಯಲ್ಲಿ ಪಿಎಸ್‌ಐ ತಾಜುದ್ದೀನ್, ಬನ್ನಿಕುಪ್ಪೆ ಚಿಕ್ಕಸ್ವಾಮಿ, ಬಲ್ಲೇನಹಳ್ಳಿ ಕೆಂಪರಾಜು, ಕಿರಿಜಾಜಿ ಗಜೇಂದ್ರ, ಸೋಮನಹಳ್ಳಿ ಕೆಂಪರಾಜು, ರತ್ನಪುರಿ ಅಪ್ಪಣ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts