More

    ಟ್ರಂಪ್ ಆಡಳಿತದಲ್ಲಿ ಭಾರತ- ಅಮೆರಿಕ ಸಂಬಂಧ…

    ‘ನಾನು ಅಧ್ಯಕ್ಷನಾದರೆ ಶ್ವೇತಭವನದಲ್ಲಿ ಭಾರತಕ್ಕೆ ನಿಜವಾದ ಮಿತ್ರನೊಬ್ಬನಿರುತ್ತಾನೆ.’

    -2016ರ ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ ಮಾತಿದು. ಅವರು ಅಧ್ಯಕ್ಷರಾದ ನಂತರದ ಈ ಮೂರು ವರ್ಷಗಳಲ್ಲಿ ಈ ಮಾತು ಬಹಳಷ್ಟು ನಿಜವಾಗಿರುವುದನ್ನು ಕಾಣಬಹುದು. ಹಾಗೆ ನೋಡಿದರೆ ಭಾರತ ಸ್ವತಂತ್ರವಾದಾಗಲೇ ಅಂದಿನ ಅಧ್ಯಕ್ಷರಾದ ಹ್ಯಾರಿ ಟ್ರೂಮನ್ ಮತ್ತವರ ಉತ್ತರಾಧಿಕಾರಿ ಡ್ವೈಟ್ ಡಿ. ಐಸೆನ್​ಹೋವರ್ ಸಹ ತಮ್ಮ ಜಾಗತಿಕ ರಕ್ಷಣಾ ಮತ್ತು ಸಾಮರಿಕ ಯೋಜನೆಗಳಲ್ಲಿ ಭಾರತವನ್ನು ದೊಡ್ಡದಾಗಿ ಪಾಲುದಾರನನ್ನಾಗಿಸಲು ಬಯಸಿದ್ದರು. ಆದರೆ ತಮ್ಮನ್ನು ತಾವು ಸಮಾಜವಾದ ಮತ್ತು ಅಲಿಪ್ತ ನೀತಿಗೆ ಬದ್ಧರಾಗಿಸಿಕೊಂಡಿದ್ದ ಪ್ರಧಾನಿ ಜವಾಹರ್​ಲಾಲ್ ನೆಹರೂ ಅಮೆರಿಕದ ಸಖ್ಯವನ್ನು ಅನಗತ್ಯ ಹೊರೆಯೆಂದು ಭಾವಿಸಿದರು. ಅಮೆರಿಕಾಗೆ ಹತ್ತಿರಾದಷ್ಟೂ ಭಾರತ ತನ್ನ ರಕ್ಷಣಾ ಮತ್ತು ವಿದೇಶನೀತಿಗಳನ್ನು ಇಡಿಯಾಗಿ ತಾನೇ ರೂಪಿಸುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತದೆಂದು ಅವರ ನಂಬಿಕೆಯಾಗಿತ್ತು. ಅವರು ಹಮ್ಮಿಕೊಂಡ ಸೋವಿಯೆತ್ ಸಖ್ಯವನ್ನು ಅವರ ಮಗಳು ಇಂದಿರಾ ಗಾಂಧಿ ಮತ್ತಷ್ಟು ಗಾಢವಾಗಿಸಿದರು. ಮೂರು ದಶಕಗಳ ಹಿಂದೆ ಸೋವಿಯೆತ್ ಯೂನಿಯನ್ ಕುಸಿದ ನಂತರ ನಿರ್ವಣವಾದ ಏಕಧ್ರುವ ಜಗತ್ತಿನಲ್ಲಿ ಅಮೆರಿಕಾದ ಜತೆಗಿನ ಸಂಬಂಧಗಳನ್ನು ಗಾಢವಾಗಿಸಿಕೊಳ್ಳುವ ಒತ್ತಡಕ್ಕೆ ಭಾರತ ಒಳಗಾಯಿತು. ಆದಾಗ್ಯೂ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ಕಾರಣಗಳಿಂದಾಗಿ ಜಗತ್ತಿನ ಅತಿ ದೊಡ್ಡ ಮತ್ತು ಅತಿ ಹಳೆಯ ಗಣರಾಜ್ಯಗಳ ನಡುವಿನ ಸಂಬಂಧಗಳು ಹಾವುಏಣಿಯಾಟದಂತೆ ಸಾಗಿದವು. ಅಮೆರಿಕಾದ ರಕ್ಷಣೆಗೆ ಅಫ್ಘಾನಿಸ್ತಾನದಲ್ಲಿ ಸವಾಲು ಉತ್ಪನ್ನವಾದ ಕಾರಣ ಅದನ್ನು ಪರಿಣಾಮಕಾರಿಯಾಗಿ ಎದುರಿಸಲು ಪಾಕಿಸ್ತಾನದ ಸಹಕಾರ ಅಗತ್ಯವಾದದ್ದು ವಾಷಿಂಗ್​ಟನ್ ಮತ್ತು ನವದೆಹಲಿಗಳ ನಡುವೆ ಗಾಢ ಸಾಮರಿಕ ಸಹಕಾರ ಏರ್ಪಡದಂತೆ ತಡೆಯಿತು. ಆದರೆ 2012ರ ನಂತರ ಪರಿಸ್ಥಿತಿ ಬದಲಾಗತೊಡಗಿತು. ಅದಕ್ಕನುಗುಣವಾಗಿ ಭಾರತದ ಮಹತ್ವವನ್ನು ಅಮೆರಿಕಾ ಅರಿಯಲು ವ್ಯವಹಾರಚತುರ ಟ್ರಂಪ್ ಶ್ವೇತಭವನ ಪ್ರವೇಶಿಸುವವರೆಗೆ ಕಾಯಬೇಕಾಯಿತು. ಇದು ಮನದಟ್ಟಾಗಬೇಕೆಂದರೆ ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ರಂಗದಲ್ಲಿ ಅಮೆರಿಕಾದ ಮುಂದೆ ಉದ್ಭವಿಸಿರುವ ಹೊಸ ಸವಾಲುಗಳು ಮತ್ತು ಅವುಗಳ ಪರಿಹಾರದಲ್ಲಿ ಭಾರತ ಪರಿಣಾಮಕಾರಿ ಸಹಯೋಗಿಯಾಗಬಲ್ಲುದು ಎಂದು ಟ್ರಂಪ್ ಗುರುತಿಸಿದ ಬಗೆಯ ಸೂಕ್ಷ್ಮ ಪರಿಚಯ ಅಗತ್ಯವಾಗುತ್ತದೆ.

    2010ರ ದಶಕದಲ್ಲಿ ಜಗತ್ತಿನಾದ್ಯಂತ ತನ್ನ ನವವಸಾಹತುಶಾಹಿ ನೀತಿಯನ್ನು ಅನುಷ್ಠಾನಗೊಳಿಸುವ ಮೂಲಕ ಜಾಗತಿಕ ಶಕ್ತಿಯಾಗಿ ಬೆಳೆದು ಅಮೆರಿಕದ ಸೇನಾ-ಆರ್ಥಿಕ ಶಕ್ತಿಗೆ ಸೆಡ್ಡುಹೊಡೆಯಲು ಚೀನಾ ಎದ್ದು ನಿಂತದ್ದನ್ನು ಕಂಡಿದ್ದೇವೆ. ಅಮೆರಿಕ ತನ್ನ ಸರೋವರ ಎಂದೇ ತಿಳಿದಿರುವ ಪೆಸಿಫಿಕ್ ಸಾಗರಕ್ಕೆ ಚೀನಾ 2012ರಿಂದೀಚೆಗೆ ಲಗ್ಗೆ ಹಾಕಲಾರಂಭಿಸಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಅಮೆರಿಕದ ಸಾಮರಿಕ ಸಹಯೋಗಿಗಳಾದ ಜಪಾನ್, ದಕ್ಷಿಣ ಕೊರಿಯಾ, ತೈವಾನ್ ಮುಂತಾದ ದೇಶಗಳ ಹಿತಾಸಕ್ತಿಗಳನ್ನು ಕಡೆಗಣಿಸಿ ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರಗಳಲ್ಲಿ ತನ್ನ ಸೇನಾ ಚಟುವಟಿಕೆಗಳನ್ನು ವ್ಯಾಪಕವಾಗಿ ವೃದ್ಧಿಸಿಕೊಂಡ ಚೀನಾ ವಿಮಾನವಾಹಕ ನೌಕೆಗಳ ಪಡೆಯೊಂದನ್ನೇ ಕಟ್ಟಿ ಪಶ್ಚಿಮ ಪೆಸಿಫಿಕ್ ಸಾಗರವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಶರವೇಗದಲ್ಲಿ ಅನುಷ್ಠಾನಗೊಳಿಸುತ್ತಿದೆ. ಅಮೆರಿಕಕ್ಕೆ ಆತಂಕ ನೀಡುವ ಈ ಸನ್ನಿವೇಶ ನಿರ್ವಣವಾಗತೊಡಗಿದ್ದು 2012-13ರಲ್ಲೇ ಆದರೂ ಅದಕ್ಕೆ ಪ್ರತಿತಂತ್ರ ಹೂಡುವುದರಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ವಿಫಲರಾದರು. ಇದನ್ನು ಗುರುತಿಸಿದ ಟ್ರಂಪ್​ರಿಗೆ ಅಧ್ಯಕ್ಷನಾಗಿ ತಾನು ಅಂತಾರಾಷ್ಟ್ರೀಯ ರಂಗದಲ್ಲಿ ಎಂತಹ ಪರಿಸ್ಥಿತಿಗೆ ಮುಖಾಮುಖಿಯಾಗಬಹುದು ಎನ್ನುವುದು ಚುನಾವಣಾ ಕಣದಲ್ಲಿದ್ದಾಗಲೇ ಅರಿವಾಗಿತ್ತು ಹಾಗೂ ಪರಿಸ್ಥಿತಿಯನ್ನೆದುರಿಸಲು ಯಾವ ಬಗೆಯ ನೀತಿ ತನಗೆ ಅನುಕೂಲವಾಗಬಹುದು ಹಾಗೂ ಅದರಲ್ಲಿ ನಂಬಿಗಸ್ತ ಸಹಯೋಗಿಗಳು ಯಾರಾಗಬಹುದೆಂಬ ಸ್ಪಷ್ಟ ತಿಳಿವಳಿಕೆಯೂ ಇತ್ತು. ಚೀನೀ ಅಧ್ಯಕ್ಷ ಜಿನ್​ಪಿಂಗ್​ರ ನಕಾರಾತ್ಮಕ ಹಾಗೂ ಶಾಂತಿಕಂಟಕ ಸ್ಪರ್ಧಾತ್ಮಕ ನೀತಿಗೆ ಸೂಕ್ತ ಪ್ರತಿತಂತ್ರ ರೂಪಿಸಲು ಅಂದೇ ಮನಸ್ಸು ಮಾಡಿದ ಟ್ರಂಪ್ ತಮ್ಮ ಯೋಜನೆಯಲ್ಲಿ ಭಾರತದ ಸ್ಥಾನದ ಮಹತ್ವವನ್ನು ಗುರುತಿಸಲು ಸಹಕಾರಿಯಾದದ್ದು ಹಿಂದೂ ಮಹಾಸಾಗರ ವಲಯದಲ್ಲಿ ಹೆಚ್ಚುತ್ತಿರುವ ಭಾರತದ ಸೇನಾ ಸಾಮರ್ಥ್ಯ ಮತ್ತು ಚೀನಾ ವಿರುದ್ಧ ಖಡಕ್ ನಿಲುವು ಪ್ರದರ್ಶಿಸತೊಡಗಿದ ಪ್ರಧಾನಿ ನರೇಂದ್ರ ಮೋದಿ.

    ಟ್ರಂಪ್​ರ ನೀತಿ ಮೂಲಭೂತವಾಗಿ ಅಮೆರಿಕದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡಿದೆಯಾದರೂ ಅದು ಭಾರತಕ್ಕೂ ಅನುಕೂಲವಾಗಬೇಕೆಂಬ ಉದ್ದೇಶವನ್ನು ಹೊಂದಿದೆ. ಹಿಂದೂ ಮಹಾಸಾಗರ ಹಾಗೂ ದಕ್ಷಿಣ ಏಷಿಯಾ ವಲಯಗಳಲ್ಲಿನ ತನ್ನ ಸೇನಾ ಹೊರೆಯನ್ನು ಭಾರತ ಹಂಚಿಕೊಳ್ಳಬೇಕು ಎನ್ನುವುದು ಟ್ರಂಪ್ ಆಡಳಿತದ ನಿರೀಕ್ಷೆ. ಅಫ್ಘಾನಿಸ್ತಾನದ ಅಶ್ರಫ್ ಘನಿ ಸರ್ಕಾರವನ್ನು ಸದೃಢಗೊಳಿಸಲು ಅಮೆರಿಕಾ ಹೆಣಗಿರುವಂತೇ ಅದನ್ನು ಉರುಳಿಸಲು ಪಾಕಿಸ್ತಾನ ಮತ್ತದರ ಬೆನ್ನಿಗಿರುವ ಚೀನಾ ನಿರಂತರವಾಗಿ ಹುನ್ನಾರಗಳನ್ನು ಹೂಡುತ್ತಲೇ ಇವೆ. ಅಫ್ಘಾನಿಸ್ತಾನದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು ಪಾಕಿಸ್ತಾನವನ್ನು ಮೊದಲು ಸರಿದಾರಿಗೆ ತರಬೇಕು ಮತ್ತು ಭಾರತದ ಸಹಕಾರವಿಲ್ಲದೇ ಅದು ಸಾಧ್ಯವಾಗದು ಎಂದು ಟ್ರಂಪ್ ಅರಿತಿದ್ದಾರೆ. ಹೀಗಾಗಿಯೇ ಅವರು ಪಾಕಿಸ್ತಾನಕ್ಕೆ ಆತಂಕ ಮೂಡಿಸುವ, ಭಾರತಕ್ಕೆ ಅನುಕೂಲವಾಗುವಂತಹ ತೀರ್ವನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿಯವರ ವಾಷಿಂಗ್​ಟನ್ ಭೇಟಿಯ ಸಮಯದಲ್ಲೇ, ಜೂನ್ 27, 2017ರಂದು, ಹಿಜ್ಬುಲ್ ಮುಜಾಹಿದೀನ್ ನಾಯಕ ಸೈಯದ್ ಸಲಾವುದ್ದೀನ್​ನನ್ನು ‘ಜಾಗತಿಕ ಭಯೋತ್ಪಾದಕ’ ಎಂದು ಅಮೆರಿಕ ಘೊಷಿಸುವುದರೊಂದಿಗೆ ಈ ಭಾರತಪರ ನಿಲುವು ಪ್ರಕಟಗೊಂಡಿತು. ನಂತರ, ಭಯೋತ್ಪಾದನೆಯ ವಿರುದ್ಧದ ಸಮರದ ಭಾಗವಾಗಿ ಪಾಕಿಸ್ತಾನಕ್ಕೆ ನೀಡಿದ 15 ಬಿಲಿಯನ್​ಗಿಂತಲೂ ಅಧಿಕ ಹಣಕ್ಕೆ ಪ್ರತಿಯಾಗಿ ನಮಗೆ ಸಿಕ್ಕಿದ್ದು ‘ಸುಳ್ಳುಗಳು ಮತ್ತು ಮೋಸ’ ಎಂದು 2018ರ ಆದಿಯಲ್ಲಿ ಘೊಷಿಸಿದ ಟ್ರಂಪ್, ಇಸ್ಲಾಮಾಬಾದ್​ಗೆ ವಾರ್ಷಿಕವಾಗಿ ನೀಡುತ್ತಿದ್ದ ಒಂದು ಬಿಲಿಯನ್​ಗಿಂತಲೂ ಹೆಚ್ಚು ಡಾಲರ್ ಹಣಕಾಸಿನ ನೆರವನ್ನು ಕೇವಲ 155 ಮಿಲಿಯನ್ ಡಾಲರ್​ಗಳಿಗೆ ಇಳಿಸಿಬಿಟ್ಟರು. ಇದಲ್ಲದೆ, ‘ತನ್ನ ಹಿತರಕ್ಷಣೆಗೆ ಅಗತ್ಯವಾದ ಯಾವುದೇ ಕ್ರಮಗಳನ್ನು ಕೈಗೊಳ್ಳುವ ಹಕ್ಕು ಭಾರತಕ್ಕಿದೆ’ ಎಂದು ಘೊಷಿಸುವ ಮೂಲಕ ಬಾಲಾಕೋಟ್ ಸರ್ಜಿಕಲ್ ದಾಳಿಯನ್ನು ಅಮೆರಿಕ ಬಹಿರಂಗವಾಗಿ ಸಮರ್ಥಿಸಿತು.

    ಈ ನಡುವೆ ಭಾರತಕ್ಕೆ ಇರಿಸುಮುರಿಸಾಗುವಂತಹ ಸನ್ನಿವೇಶವೊಂದೂ ಸೃಷ್ಟಿಯಾಯಿತು. ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ಜತೆ ಮಾತುಕತೆಗಾಗಿ ಮಧ್ಯಸ್ಥಿಕೆ ವಹಿಸಬೇಕೆಂದು ಪ್ರಧಾನಿ ಮೋದಿ ತಮ್ಮನ್ನು ಕೇಳಿದ್ದಾರೆಂದು ಟ್ರಂಪ್ ಹೇಳಿದ್ದು ನವದೆಹಲಿಯಿಂದ ತೀವ್ರ ನಿರಾಕರಣೆ ಹಾಗೂ ಆಕ್ಷೇಪವನ್ನು ಹೊಮ್ಮಿಸಿತು. ಅಧ್ಯಕ್ಷ ಟ್ರಂಪ್​ರ ಮಾತು ಸತ್ಯದೂರವೆಂದೂ, ಅವರದನ್ನು ಅತ್ಯುತ್ಸಾಹದ ಭರದಲ್ಲಿ ಬಾಯಿತಪ್ಪಿ ಹೇಳಿದ್ದಾಗಿಯೂ, ಆ ಬಗ್ಗೆ ಖೇದ ವ್ಯಕ್ತಪಡಿಸುವುದಾಗಿಯೂ ಅಮೆರಿಕಾದಿಂದ ವಿವರಣೆ ಬಂದಾಗ ಪರಿಸ್ಥಿತಿ ತಿಳಿಯಾಯಿತು.

    ಈ ಹಿನ್ನೆಲೆಯಲ್ಲಿ, ಅಧ್ಯಕ್ಷ ಟ್ರಂಪ್​ರ ಪ್ರಥಮ ಅಧಿಕೃತ ಭಾರತ ಭೇಟಿ ಸಂಬಂಧಗಳನ್ನು ಯಾವ ಮಜಲಿಗೆ ಕೊಂಡೊಯ್ಯಬಹುದು ಎಂಬ ಕುತೂಹಲ ಸಹಜ. ಟ್ರಂಪ್​ರ

    ಅಮೆರಿಕ ಮತ್ತು ಮೋದಿಯವರ ಭಾರತಗಳೆರಡೂ ಪರಸ್ಪರರಿಂದ ತಮಗೇನು ಬೇಕು, ಪ್ರತಿಯಾಗಿ ತಾವೇನು ಕೊಡಬಲ್ಲೆವು ಎಂದು ಸ್ಪಷ್ಟವಾಗಿ ಅರಿತಿವೆ. ಜತೆಗೆ, ಈ ಕೊಡುಕೊಳ್ಳುವಿಕೆಯಲ್ಲಿ ಪರಸ್ಪರರಿಗೆ ಎದುರಾಗುವ ಇಕ್ಕಟ್ಟುಗಳ ಅರಿವೂ ಇಬ್ಬರು ನಾಯಕರಿಗೂ ಇದೆ. ರಕ್ಷಣೆ ಮತ್ತು ಸಾಮರಿಕ ಸಹಯೋಗ ಮಾತುಕತೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳಲಿದೆ ಎಂಬ ಸೂಚನೆ ಹಿನ್ನೆಲೆಯಲ್ಲಿ ಪ್ರಸಕ್ತ ಭೇಟಿ ಉಭಯ ದೇಶಗಳ ನಡುವೆ ಅಭೂತಪೂರ್ವ ಸೇನಾ-ಸಾಮರಿಕ ಸಹಯೋಗದ ಹೊಚ್ಚಹೊಸ ಯುಗವೊಂದಕ್ಕೆ ನಾಂದಿಯಾಗುವ ಆಶಯ ಹಾಗೂ ನಿರೀಕ್ಷೆಯನ್ನು ಉಂಟುಮಾಡಿದೆ.

    ಟ್ರಂಪ್ ಆಡಳಿತದಲ್ಲಿ ಭಾರತ- ಅಮೆರಿಕ ಸಂಬಂಧ...

    ಪ್ರೇಮಶೇಖರ (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts