More

    ಏ.10ರವರೆಗೆ ನೀರು ಹರಿಸಲು ಸ್ಪಂದನೆ: ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ದರೂರು ಹೇಳಿಕೆ

    ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಮಾ.31ರತನಕ ಬೇಸಿಗೆ ಬೆಳೆಗೆ ನೀರು ಹರಿಸಲು ಐಸಿಸಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಬದಲಾದ ಕಾಲಘಟ್ಟದಲ್ಲಿ ಬೆಳೆಗಳ ಅನುಕೂಲಕ್ಕಾಗಿ ಏ.10ರವರೆಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ದರೂರು ಹೇಳಿದರು.

    ಏ.10ರವರೆಗೆ ನೀರು ಬಿಡದಿದ್ದರೆ ಬಳ್ಳಾರಿ-ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಬೇಸಿಗೆ ಬೆಳೆ ಒಣಗುತ್ತದೆ. ಹೀಗಾಗಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಉಸ್ತುವಾರಿ ಸಚಿವ ಆನಂದ ಸಿಂಗ್, ತುಂಗಭದ್ರಾ ಮಂಡಳಿ ಮತ್ತು ಬೋರ್ಡ್ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರಿಂದ ಏ.10ರವರೆಗೆ ನೀರು ಬಿಡಲು ಮೌಖಿಕ ಒಪ್ಪಿಗೆ ನೀಡಿದ್ದಾರೆ. ಲಿಖಿತ ಒಪ್ಪಿಗೆಯನ್ನೂ ಶೀಘ್ರವೇ ನೀಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಪ್ರಸ್ತುತ ಜಲಾಶಯದಲ್ಲಿ 17 ಟಿಎಂಸಿ ಅಡಿ ನೀರಿದ್ದು, 2 ಟಿಎಂಸಿ ಅಡಿ ಡೆಡ್ ಸ್ಟೋರೇಜ್, 1 ಟಿಎಂಸಿ ಅಡಿ ಆವಿಯಾಗಲಿದೆ. 13 ಟಿಎಂಸಿ ಅಡಿ ನೀರು ಉಳಿಯಲಿದೆ. ಇದರಲ್ಲಿ 5.657 ಟಿಎಂಸಿ ಆಂಧ್ರದ ಪಾಲಿದ್ದು, ಕರ್ನಾಟಕಕ್ಕೆ 7.934 ಟಿಎಂಸಿ ಅಡಿ ಮಾತ್ರ ಉಳಿಯುತ್ತದೆ. ಇದರಿಂದ ಬೇಸಿಗೆ ಬೆಳೆ ಸಂರಕ್ಷಿಸಲಾಗುವುದಿಲ್ಲ. ಈಗ ಹೇಗಿದ್ದರೂ ಭದ್ರಾ ಜಲಾಶಯದಿಂದ 1.6 ಟಿಎಂಸಿ ನೀರು ಬರುತ್ತಿದೆ. ಅದರ ಜತೆಗೆ ಜಿಂದಾಲ್ ಸೇರಿ ನಾನಾ ಕಾರ್ಖಾನೆಗಳಿಗೆ ಪೂರೈಸುವ ನೀರನ್ನು ಕಡಿತಗೊಳಿಸಬೇಕು. ಇದರಿಂದ ಅರ್ಧ ಟಿಎಂಸಿ ನೀರು ಉಳಿಯಲಿದೆ.

    ಜತೆಗೆ ನದಿ ಮೂಲಕ ಆಂಧ್ರಕ್ಕೆ ಕೊಡಲಿರುವ ಅರ್ಧ ಟಿಎಂಸಿ ನೀರನ್ನು ತಡೆಯಲು ಆಂಧ್ರ ಸರ್ಕಾರದ ಮನವೊಲಿಸಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡಿದಾಗ ನೀರಿನ ಸದ್ಬಳಕೆಯಾಗಲಿದೆ. ಈ ಎಲ್ಲ ಕೆಲಸವನ್ನು ಅಧಿಕಾರಿಗಳು ಮಾಡುವುದಾಗಿ ತಿಳಿಸಿದ್ದಾರೆ ಎಂದರು. ರೈತ ಸಂಘದ ಜಾಲಿಹಾಳ್ ಶ್ರೀಧರಗೌಡ, ಗಂಗಾವತಿ ವೀರೇಶ, ಶ್ರೀಧರಗಡ್ಡೆ ವೀರನಗೌಡ, ಕಂಪ್ಲಿ ಸತ್ಯನಾರಾಯಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts