More

    ಯುಪಿಸಿಎಲ್ ಸುತ್ತಮುತ್ತ 15 ಹಳ್ಳಿಗಳಲ್ಲಿ ಕಾಯಿಲೆ!, ಹಸಿರು ಪೀಠಕ್ಕೆ ತಜ್ಞರ ವರದಿ ಸಲ್ಲಿಕೆ

    ಉಡುಪಿ: ಜಿಲ್ಲೆಯ ಯುಪಿಸಿಎಲ್ ಕಲ್ಲಿದ್ದಲು ಆಧರಿತ ಉಷ್ಣ ವಿದ್ಯುತ್ ಸ್ಥಾವರದ ಸುತ್ತಮುತ್ತ 15 ಹಳ್ಳಿಗಳಲ್ಲಿ ಶ್ವಾಸಕೋಶದ ತೀವ್ರ ಸೋಂಕು, ಅಸ್ತಮಾ ಹೆಚ್ಚಳವಾಗಿರುವ ಬಗ್ಗೆ ತಜ್ಞರ ಸಮಿತಿ ರಾಷ್ಟ್ರೀಯ ಹಸಿರು ಪೀಠಕ್ಕೆ ವರದಿ ಸಲ್ಲಿಸಿದೆ.

    ಈ ಹಿಂದೆ ರಾಷ್ಟ್ರೀಯ ಹಸಿರು ಪೀಠ ಈ ಉಷ್ಣ ವಿದ್ಯುತ್ ಸ್ಥಾವರ ಜನಸಾಮಾನ್ಯರ ಆರೋಗ್ಯ ಮೇಲೆ ಬೀರಿದ ಪರಿಣಾಮ ಬಗ್ಗೆ ತಜ್ಞರ ಸಮಿತಿ ನೇಮಿಸಿ, ಅಧ್ಯಯನ ವರದಿ ಸಲ್ಲಿಸುವಂತೆ ಸೂಚಿಸಿತ್ತು.
    ಯುಪಿಸಿಎಲ್ ಘಟಕದಿಂದ 10 ಕಿ.ಮೀ ವ್ಯಾಪ್ತಿಯ 15 ಗ್ರಾಮಗಳಲ್ಲಿ ಕ್ರಮವಾಗಿ ಶ್ವಾಸಕೋಶದ ತೀವ್ರ ಸೋಂಕು, ಅಸ್ತಮಾ ಕಾಯಿಲೆಯ ಪ್ರಮಾಣ ಶೇ.17, ಶೇ.171, ಶೇ.293ರಷ್ಟು ಹೆಚ್ಚಿದೆ ಎಂಬ ಅಂಶವನ್ನು ವರದಿ ಉಲ್ಲೇಖಿಸಿದೆ. ಇದು ಸರ್ಕಾರಿ ಆಸ್ಪತ್ರೆಗಳ ದಾಖಲೆ ಪ್ರಕಾರ ಲಭಿಸಿದ ಅಂಕಿಂಶಗಳು. ಖಾಸಗಿ ಆಸ್ಪತ್ರೆಗಳಲ್ಲಿ ಮಾಹಿತಿ ಆಧರಿಸಿ ಸಮೀಕ್ಷೆ ನಡೆದಿಲ್ಲ. 2010ರಿಂದ 2020ವರೆಗೆ ಚಿಕಿತ್ಸೆ ಮತ್ತು ಪರಿಸರ ಹಾನಿ ಪರಿಣಾಮಕ್ಕಾಗಿ ಸ್ಥಳೀಯರು 74.93 ಕೋಟಿ ರೂ.ವೆಚ್ಚ ಮಾಡಿದ್ದಾರೆ ಎಂಬುದಾಗಿ ಸಮಿತಿ ಅಭಿಪ್ರಾಯ ವ್ಯಕ್ತ ಪಡಿಸಿದೆ.

    ಡಿಸೆಂಬರ್‌ನಲ್ಲಿ ನಡೆದಿತ್ತು ಅಧ್ಯಯನ
    ತಜ್ಞರ ಸಮಿತಿ ಡಿಸೆಂಬರ್ ತಿಂಗಳಲ್ಲಿ ಎಲ್ಲೂರು ಗ್ರಾಮದ ಉಳ್ಳೂರು, ಕೊಳಚೂರು, ಮುದರಂಗಡಿ ಭಾಗಗಳಿಗೆ ಭೇಟಿ ನೀಡಿ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯಿಂದ ಗ್ರಾಮಸ್ಥರಿಗೆ, ಕೃಷಿಗೆ, ತೋಟಗಾರಿಕಾ ಬೆಳೆಗಳಿಗೆ, ಸಾಕುಪ್ರಾಣಿಗಳಿಗೆ ಹಾಗೂ ಪರಿಸರ, ಜನರ ಆರೋಗ್ಯದ ಕುರಿತಂತೆ ಉಂಟಾದ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಸುತ್ತಮುತ್ತಲ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ ತಂಡ ವೈದ್ಯಾಧಿಕಾರಿಗಳೊಂದಿಗೆ 2007ರ ನಂತರ ಜನರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮದ ಅಂಕಿಅಂಶ ಸಂಗ್ರಹಿಸಿ ದಾಖಲೆಗಳನ್ನು ಪಡೆದುಕೊಂಡಿದ್ದರು.

    ಮೇಲ್ಮನವಿ ಸಲ್ಲಿಸಿದ್ದ ಜನಜಾಗೃತಿ ಸಮಿತಿ
    ಪರಿಸರ ಹಾಗೂ ಆರೋಗ್ಯ ಹಾನಿ ಸಂಬಂಧಿಸಿ 2019ರಲ್ಲಿ ಸಲ್ಲಿಕೆಯಾಗಿದ್ದ ತಜ್ಞರ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ನಂದಿಕೂರು ಜನಜಾಗೃತಿ ಸಮಿತಿ ರಾಷ್ಟ್ರೀಯ ಹಸಿರು ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಈ ಹಿನ್ನೆಲೆ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯಿಂದಾಗಿ ಉಂಟಾಗಿರುವ ಪರಿಸರ ಹಾನಿ, ಸ್ಥಳೀಯರ ಆರೋಗ್ಯ ಸಮಸ್ಯೆ ಬಗ್ಗೆ ಮರು ಪರಿಶೀಲನೆ ನಡೆಸಿ ವರದಿ ನೀಡಲು ತಜ್ಞರ ಸಮಿತಿಯನ್ನು ಪೀಠ ನೇಮಕ ಮಾಡಿತ್ತು. ಹಸಿರು ಪೀಠದ ನಿರ್ದೇಶನದಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ತಜ್ಞರ ತಂಡ ಬೆಂಗಳೂರಿನ ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕ ತಿರುಮೂರ್ತಿ ನೇತೃತ್ವದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಸಂತ್ರಸ್ತರ ಅಹವಾಲುಗಳನ್ನೂ ಆಲಿಸಿತ್ತು. ಬೆಂಗಳೂರಿನ ಪ್ರೊ.ಡಾ.ಶ್ರೀಕಾಂತ್, ಐಎಸ್‌ಇಸಿ ಬೆಂಗಳೂರಿನ ಡಾ.ಕೃಷ್ಣರಾಜ್ ಸಮಿತಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts