More

    ಉಚಿತವೆಂದು ನೀರು ಪೋಲು ಮಾಡಬೇಡಿ: ಕಿರಿಯ ಇಂಜಿನಿಯರ್ ಜಿ.ಎನ್.ಕೆಂಪರಾಜು ಕಿವಿಮಾತು

    ಮಂಡ್ಯ: ಉಚಿತವಾಗಿ ದೊರಕುವ ಸಂಪನ್ಮೂಲವೆಂದು ನೀರನ್ನು ಪೋಲು ಮಾಡುತ್ತಾ ಹೋದರೆ ಭವಿಷ್ಯದಲ್ಲಿ ಯಾವುದೇ ಅತ್ಯುತ್ತಮ ನೀತಿ ಮತ್ತು ತಂತ್ರಜ್ಞಾನವೂ ಸಹಾಯ ಮಾಡಲಾರವು. ಆದ್ದರಿಂದ ಮಿತವಾಗಿ ಬಳಸುವುದರ ಜತೆಗೆ ಮಳೆ ನೀರಿನ ಸಂಗ್ರಹಣೆ ಮತ್ತು ನಿರ್ವಹಣೆ ನಮ್ಮೆಲ್ಲರ ಹೊಣೆ ಎಂದು ಕಾವೇರಿ ನೀರಾವರಿ ನಿಗಮದ ಕಿರಿಯ ಇಂಜಿನಿಯರ್ ಜಿ.ಎನ್.ಕೆಂಪರಾಜು ಸಲಹೆ ನೀಡಿದರು.
    ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಸಭಾಂಗಣದಲ್ಲಿ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಕಾವೇರಿ ನೀರಾವರಿ ನಿಗಮ ನಿಯಮಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಳೆ ನೀರಿನ ಸಂಗ್ರಹಣೆ ಮತ್ತು ನಿರ್ವಹಣೆ ಬಗ್ಗೆ ಉಪನ್ಯಾಸ ನೀಡಿದರು. ನೈಸರ್ಗಿಕವಾಗಿ ದೊರಕುವ ನೀರು ಭೂಮಿ ಮೇಲಿರುವ ಯಾವುದೇ ಕಾರ್ಖಾನೆಯಲ್ಲಿ ತಯಾರು ಮಾಡಲಾಗದ ವಸ್ತು. ಪ್ರಕೃತಿ ನಮಗೆ ನೀಡಿರುವ ದೊಡ್ಡ ವರವೇ ನೀರು. ಎಲ್ಲಿ ನೀರು ಇರುತ್ತೆ ಅಲ್ಲಿ ಮಾತ್ರ ಜೀವಿಗಳು, ಜೀವ ಮತ್ತು ಜೀವನ ಇರುತ್ತದೆ ಎಂದರು.
    ನೀರನ್ನ ತಯಾರು ಮಾಡಲು ಹಾಗೂ ಹೆಚ್ಚು ದಿನ ಸಂರಕ್ಷಿಸುವುದಕ್ಕೂ ಆಗುವುದಿಲ್ಲ. ನೀರಿನ ಮೂಲ ಮಳೆ. ಆದ್ದರಿಂದ ಮಳೆ ಬಿದ್ದಾಗ ನೀರನ್ನು ಹಿಡಿದಿಟ್ಟುಕೊಂಡು ಭೂಮಿಯ ಅಂತರ್ಜಲ ಮತ್ತು ಇನ್ನಿತರೆ ಜಲಕಾಯಗಳಲ್ಲಿ ನಾವು ಕೂಡಿಟ್ಟ ನೀರನ್ನು ಸದ್ಭಳಕೆ ಮಾಡುತ್ತಾ ಭೂಮಿಯ ಮೇಲಿನ ಎಲ್ಲ ಜೀವ ಪ್ರಭೇದಗಳಿಗೆ ಸುಸ್ಥಿರವಾದಂತಹ ನೀರನ್ನು ಹಂಚಿಕೊಂಡು ಬದುಕುವುದು ನಮ್ಮ ಮುಂದಿರುವ ದೊಡ್ಡ ಕೆಲಸ ಎಂದು ಹೇಳಿದರು.
    ಕಾರ್ಯಕ್ರಮ ಉದ್ಘಾಟಿಸಿದ ಕೆಆರ್‌ಎಸ್ ಆಧುನೀಕರಣ ಮತ್ತು ಮಧ್ಯಮ ನೀರಾವರಿ ವೃತ್ತದ ಅಧೀಕ್ಷಕ ಇಂಜಿನಿಯರ್ ಎಚ್.ಎಸ್.ಆನಂದ ಮಾತನಾಡಿ, ದೇಶದ ವಿವಿಧ ಪ್ರದೇಶಗಳ ಬರ ಪರಿಸ್ಥಿತಿಯಿಂದಾಗಿ ಕೋಟ್ಯಂತರ ಜನ ಮತ್ತು ಜಾನುವಾರುಗಳು ತೊಂದರೆ ಅನುಭವಿಸುತ್ತಿವೆ. ಕಳೆದ ನೂರು ವರ್ಷಗಳಲ್ಲಿ ಸಹಸ್ರಾರು ಸಂಖ್ಯೆಯ ಬಾವಿ, ಕೆರೆ, ಸರೋವರ ಮತ್ತು ನದಿಗಳು ಬತ್ತಿಹೋಗಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂಬರುವ ದಿನಗಳು ಭಯಾನಕವಾಗಲಿವೆ ಎಂದರು.
    ಕಾವೇರಿ ನೀರಾವರಿ ನಿಗಮದ ವಿಶ್ವೇಶ್ವರಯ್ಯ ನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎಚ್.ಎಸ್.ನಾಗರಾಜು, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಗಲ ಎಂ.ಯೋಗೀಶ್, ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಸಿ.ರವಿಚಂದ್ರನ್, ಸ್ವಯಂ ಸೇವಕ ಹರ್ಷ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts