- ಚಾಮರಾಜನಗರ : ಗುಂಡ್ಲುಪೇಟೆ ತಾಲೂಕು ಕೇಂದ್ರ ಕಚೇರಿಯ ಸೇವಾ ಕೇಂದ್ರದಲ್ಲಿ ಪ್ರಿಂಟರ್ ಕೆಟ್ಟಿರುವುದರಿಂದ ಜಮೀನಿಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಪ್ರಿಂಟ್ ತೆಗೆದುಕೊಳ್ಳಲಾಗದೆ ತಾಲೂಕಿನ ರೈತರು ಪರದಾಡುವಂತಾಗಿದೆ.
ಇತ್ತೀಚೆಗೆ ಚಾಮರಾಜನಗರ ತಾಲೂಕನ್ನೂ ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಹಾಗಾಗಿ, ರೈತರು ಎಫ್‌ಐಡಿ ಸಂಖ್ಯೆ ಪಡೆಯಲು ಹಾಗೂ ಆರ್‌ಟಿಸಿ ಕಂದಾಯ ಇಲಾಖೆಯ ಆಸ್ತಿಗಳಿಗೆ ಸಂಬಂಧಿಸಿದ ಇಸಿ ಮತ್ತಿತರ ದಾಖಲೆಗಳನ್ನು ಪಡೆಯಲು ತಾಲೂಕು ಕಚೇರಿಗೆ ಎಡತಾಕುತ್ತಿದ್ದಾರೆ.
ಆದರೆ, ಅಲ್ಲಿನ ಪ್ರಿಂಟರ್ ಸಮಸ್ಯೆಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ನಾಳೆ ಬಾ ಎಂಬ ಉತ್ತರವನ್ನಷ್ಟೇ ನೀಡುತ್ತಿದ್ದಾರೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.- ತಾಲೂಕು ಕಚೇರಿಯಲ್ಲಿ 15 ರೂ. ಗೆ ದೊರೆಯುವ ಆರ್.ಟಿ.ಸಿಗೆ ಸೈಬರ್ ಸೆಂಟರ್‌ನಲ್ಲಿ 25 ರೂ. ನೀಡಬೇಕಿದೆ. ಕೂಲಿ ಕಾರ್ಮಿಕರು, ರೈತರಿಗೆ ಇಷ್ಟೊಂದು ಮೊತ್ತ ಭರಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಪಡಸಾಲೆ ವಿಭಾಗಕ್ಕೆ ಅಳವಡಿಸಿದ್ದ ಪ್ರಿಂಟರ್‌ನ ಕಾಲಮಿತಿ ಮುಗಿದಿರುವ ಕಾರಣ ರಿಪೇರಿಗೆ ಬಂದಿದೆ. ಇದರಿಂದ ಯಾವುದೇ ದಾಖಲೆಗಳನ್ನು ಮುದ್ರಿಸಲು ಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲೇ ಪ್ರಿಂಟರ್ ದುರಸ್ತಿ ಮಾಡಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು.
ಮಹೇಶ್, ಶಿರಸ್ತೇದಾರ್