More

    ಅವೈಜ್ಞಾನಿಕ ಕಿರು ಜಲ ವಿದ್ಯುತ್ ಯೋಜನೆ

    ಕೆ.ಆರ್.ಸಾಗರ: ಮಜ್ಜಿಗೆಪುರ ಸಮೀಪದ ಎಡಮುರಿ ಪ್ರವಾಸಿ ತಾಣದ ಬಳಿ ನದಿ ಪಾತ್ರ ಮತ್ತು ವಿರಿಜಾ ನಾಲೆ ಏರಿ ಅಗೆದು ಕಿರು ಜಲ ವಿದ್ಯುತ್ ಯೋಜನೆ ಎಂದು ಹೇಳಿ ವ್ಯಕ್ತಿಯೊಬ್ಬರು ಕಾಮಗಾರಿ ನಡೆಸುತ್ತಿದ್ದು, ಕೂಡಲೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಹುಲಿಕೆರೆ ಗ್ರಾಪಂ ಸದಸ್ಯ ಮಜ್ಜಿಗೆಪುರ ಮಂಜುನಾಥ್ ನೇತೃತ್ವದಲ್ಲಿ ಸ್ಥಳೀಯರು ಇತ್ತೀಚೆಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

    ಕಿರು ಜಲವಿದ್ಯುತ್ ಯೋಜನೆ ಅವೈಜ್ಞಾನಿಕವಾಗಿದ್ದು, ಸ್ಥಳೀಯರ ಅಭಿಪ್ರಾಯ ಪಡೆಯದೆ ಹಲವು ವರ್ಷಗಳ ಹಿಂದೆ ಯೋಜನೆಗೆ ಅನುಮತಿ ನೀಡಲಾಗಿದೆ. ಯೋಜನೆಯನ್ನು ಹಲವು ವರ್ಷಗಳಿಂದಲೂ ವಿರೋಧಿಸಲಾಗಿತ್ತು. ಖಾಸಗಿ ವ್ಯಕ್ತಿ ಯೋಜನೆ ಪ್ರಾರಂಭಿಸಲು ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದಿಲ್ಲ. ಆತ ನಾಲೆ ಏರಿ ಒಡೆದು ಕಾಮಗಾರಿ ಮತ್ತು ನದಿ ಪಾತ್ರದಲ್ಲಿ ಯಾರೂ ಬರದಂತೆ ತಡೆಗೋಡೆ ನಿರ್ಮಿಸುವ ಕೆಲಸ ಮಾಡುತ್ತಿದ್ದಾನೆ. ಇದರಿಂದ ಜನ-ಜಾನುವಾರುಗಳಿಗೆ ತೊಂದರೆಯಾಗಲಿದೆ.

    ಎಡಮುರಿ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ದಿನನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಸುಮಾರು ನೂರಾರು ವರ್ಷ ಹಿಂದೆ ನಿರ್ಮಿಸಿರುವ ಸೇತುವೆ ಇಲ್ಲಿದೆ. ಈ ಯೋಜನೆ ಮಾಡುವುದರಿಂದ ಈ ಭಾಗದಲ್ಲಿ ವಾಸಿಸುವ ನೀರುನಾಯಿಗಳು, ನವಿಲುಗಳು, ಇತರ ಪ್ರಾಣಿ, ಪಕ್ಷಿ ಸಂಕುಲಕ್ಕೆ ತೊಂದರೆಯಾಗಲಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಮಜ್ಜಿಗೆಪುರ ಮಂಜುನಾಥ್ ನೇತೃತ್ವದಲ್ಲಿ ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಜಯಂತ್ ಅವರಿಗೆ ಮನವಿ ನೀಡಲಾಯಿತು.

    ಮನವಿ ಸ್ವೀಕರಿಸಿದ ಜಯಂತ್ ಅವರು ಮಾತನಾಡಿ, ಎಡಮುರಿ ಬಳಿ ಕಾವೇರಿ ನದಿ ಪಾತ್ರದಲ್ಲಿ ಕಿರು ಜಲ ವಿದ್ಯುತ್ ಯೋಜನೆ ಕಾಮಗಾರಿಯನ್ನು ತಕ್ಷಣ ನಿಲ್ಲಿಸಲು ಸೂಚಿಸಲಾಗಿದೆ. ಯೋಜನೆಗೆ ಅನುಮತಿ ಪಡೆದಿರುವ ವ್ಯಕ್ತಿಗೆ ಪೂರ್ಣ ದಾಖಲಾತಿ ನೀಡುವಂತೆ ಸೂಚಿಸಲಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ನದಿಗೆ ಮತ್ತು ನಾಲೆಗೆ ತೊಂದರೆ ಆಗುವಂತಹ ಕಾಮಗಾರಿ ಮಾಡಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

    ಮುಖಂಡರಾದ ಮಜ್ಜಿಗೆಪುರ ಪುಟ್ಟೇಗೌಡ, ಕೆ.ಆರ್.ಸಾಗರ ಗ್ರಾಪಂ ಉಪಾಧ್ಯಕ್ಷ ರವಿಶಂಕರೇಗೌಡ, ಮಾಜಿ ಅಧ್ಯಕ್ಷರಾದ ನಾಗೇಂದ್ರಕುಮಾರ್, ನರಸಿಂಹ , ಸದಸ್ಯರಾದ ಪಾಪಣ್ಣ, ಮಂಜುನಾಥ್, ಹುಲಿಕೆರೆ ಗ್ರಾಪಂ ಸದಸ್ಯ ಬಂಗಾರಪ್ಪ, ರಮೇಶ ಹೊಸಉಂಡವಾಡಿ ನಂಜುಂಡ, ಮನು, ಮಜ್ಜಿಗೆಪುರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts