More

    ಅಹಿತಕರ ಏಕಾಏಕಿ ಘಟಿಸಲ್ಲ: ಜಿಲ್ಲಾಧಿಕಾರಿ ಸೆಲ್ವಮಣಿ

    ಶಿವಮೊಗ್ಗ: ಸಮಾಜದಲ್ಲಿ ಶಾಂತಿ ನೆಲಸುವಂತೆ ಮಾಡುವುದು ಕೇವಲ ಪೊಲೀಸ್ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ. ಅದು ಸಾರ್ವಜನಿಕರ ಜವಾಬ್ದಾರಿಯೂ ಆಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.

    ನಗರದ ಭಾನುವಾರ ಸಂಜೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಮಕ್ಕಳು, ಯುವಕರು ಹಾದಿ ತಪ್ಪುತ್ತಿರುವ ಬಗ್ಗೆ ಪಾಲಕರು ಅಥವಾ ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೆ ಅವರನ್ನು ಕರೆದು ಬುದ್ಧಿ ಹೇಳಬೇಕು. ಮುಂದೆ ಪೊಲೀಸರು ಬುದ್ಧಿ ಹೇಳುವಂತಹ ಹಂತಕ್ಕೆ ತಲುಪಿದಲ್ಲಿ ಅದರಿಂದ ಕಠಿಣ ಪರಿಣಾಮಗಳನ್ನು ಎದುರಿಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    ಒಳ್ಳೆಯವರು ನಮ್ಮ ಸುತ್ತ ನಡೆಯುವ ಕೆಟ್ಟದನ್ನು ಪ್ರಶ್ನೆ ಮಾಡದಿದ್ದಾಗ ಕೆಟ್ಟದ್ದು ಬೆಳೆಯುತ್ತ ಹೋಗುತ್ತದೆ. ಇದರಿಂದ ಯಾರೋ ಕೆಲವರು ಮಾಡುವ ಸಮಸ್ಯೆಗಳಿಂದ ಉಳಿದವರು ಅದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಯಾವುದೇ ಅಹಿತಕರ ಘಟನೆಗಳು ಏಕಾಏಕಿ ನಡೆಯುವುದಿಲ್ಲ. ಅದರ ಹಿನ್ನೆಲೆಯು ಬಹುಹಿಂದಿನಿಂದಲೂ ಇರುತ್ತದೆ. ಹಾಗಾಗಿ ಪಾಲಕರು ತಮ್ಮ ಮಕ್ಕಳ ಮೇಲೆ ಸದಾ ನಿಗಾ ಇಟ್ಟಿರಬೇಕು ಎಂದು ಸಲಹೆ ನೀಡಿದರು.
    ಮಾದಕ ದ್ರವ್ಯ ಮಾರಾಟ, ಸಾಗಣೆ ಮತ್ತು ಸೇವನೆಯ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಮಾದಕ ದ್ರವ್ಯ ಹಾಗೂ ಇತರ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಸಮಾಜದಲ್ಲಿನ ಎಲ್ಲರೂ ಕಿಡಿಗೇಡಿಗಳಲ್ಲ. ಸಾರ್ವಜನಿಕರು ಜಾಗರೂಕರಾದಲ್ಲಿ ದುಷ್ಕೃತ್ಯಗಳನ್ನು ತಡೆಯಬಹುದು. ದಾರಿ ತಪ್ಪುವವರಿಗೆ ಸಮಾಜದ ಉತ್ತಮ ನಾಗರಿಕರಾಗಿ ಬುದ್ಧಿವಾದ ಹೇಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ ಎಂದರು.
    ಎಎಸ್ಪಿ ಅನಿಲ್ಕುಮಾರ್ ಭೂಮರಡ್ಡಿ ಮಾತನಾಡಿ, ಸಮಸ್ಯೆಗೆ ಮೂಲದಲ್ಲಿಯೇ ಪರಿಹಾರ ಕಂಡುಕೊಂಡಲ್ಲಿ ಪೊಲೀಸ್ ಇಲಾಖೆ ಮಧ್ಯ ಪ್ರವೇಶಿಸುವ ಅಗತ್ಯತೆ ಇರಲ್ಲ ಎಂದರು. ಶಿವಮೊಗ್ಗ ಉಪ ವಿಭಾಗ-2ರ ಡಿವೈಎಸ್ಪಿ ಸುರೇಶ್, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಸತ್ಯನಾರಾಯಣ್, ಕಂದಾಯ ನಿರೀಕ್ಷಕ ನಾಗೇಂದ್ರ, ರಾಗಿಗುಡ್ಡದ ಪ್ರಮುಖರು ಉಪಸ್ಥಿತರಿದ್ದರು.

    ಅತಿರೇಕದ ಪ್ರತಿಕ್ರಿಯೆಯಿಂದ ಅನಾಹುತ
    ಕೆಲ ಸಂದರ್ಭಗಳಲ್ಲಿ ಸಣ್ಣ ಸಮಸ್ಯೆಗಳನ್ನು ದೊಡ್ಡದಾಗಿ ಮಾಡುತ್ತಾರೆ. ಯಾರೂ ಕೆಟ್ಟದ್ದು ಮಾಡಬೇಕೆಂದು ಕೃತ್ಯಗಳನ್ನು ಎಸಗುವುದಿಲ್ಲ. ಯುವಕರು ಆ ಸಮಯದಲ್ಲಿ ಅತಿರೇಕದ ಪ್ರತಿಕ್ರಿಯೆ ನೀಡುವುದರಿಂದ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಆ ಸಮಯದಲ್ಲಿ ಇದನ್ನು ನಿಯಂತ್ರಿಸಿದಲ್ಲಿ ಸಮಸ್ಯೆ ದೊಡ್ಡದಾಗುವುದನ್ನು ತಡೆಯಬಹುದು ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು. ರಾಗಿಗುಡ್ಡದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ಈಗಾಗಲೇ ಸ್ಥಳಗಳನ್ನು ಗುರುತಿಸಿದ್ದು ಕ್ಯಾಮರಾಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಬೀದಿ ದೀಪಗಳ ದುರಸ್ತಿ, ಹೊಸ ದೀಪಗಳ ಅಳವಡಿಕೆ, ಯುಜಿಡಿ ಮತ್ತು 24*7 ಕುಡಿಯು ನೀರಿನ ವ್ಯವಸ್ಥೆಯ ಕುರಿತಂತೆಯೂ ಸಂಬಂಧಪಟ್ಟ ಇಲಾಖೆಗೆ ಸೂಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts