More

    ಬಸಾಪುರ ಗ್ರಾಪಂನಲ್ಲಿ ಅವಿರೋಧ ಆಯ್ಕೆ!

    ಗುತ್ತಲ: ಬಸಾಪುರ ಗ್ರಾಮದಲ್ಲಿ ಗ್ರಾಪಂ ಚುನಾವಣೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಕಳೆದ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ, ಈ ಬಾರಿ ಗ್ರಾಮಸ್ಥರೆಲ್ಲ ಮುಖಂಡರ ಸಮ್ಮುಖದಲ್ಲಿ ಅವಿರೋಧ ಆಯ್ಕೆಗೆ ಒಲವು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಆಲದಮ್ಮ ದೇವಿ!

    ಗ್ರಾಮದಲ್ಲಿ ಆಲದಮ್ಮ ದೇವಿಯ ದೊಡ್ಡದಾದ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭವಾಗಿದೆ. ಸುಮಾರು 1.5 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಮುಂದಾಗಲಾಗಿದೆ. ಹೀಗಾಗಿ, ಗ್ರಾಪಂ ಚುನಾವಣೆಯಿಂದಾಗಿ ಪರಸ್ಪರ ವೈಮನಸ್ಸು ಬರಬಾರದು ಎಂಬ ಸದುದ್ದೇಶದಿಂದ ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ ಅಭ್ಯರ್ಥಿಗಳನ್ನು ಅವರೋಧವಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಈ ಮೂಲಕ ದೇವಸ್ಥಾನ ನಿರ್ಮಾಣ ಕಾರ್ಯ ಅಡ್ಡಿ ಆತಂಕವಿಲ್ಲದೆ, ಆದಷ್ಟು ಬೇಗ ಸುಸಜ್ಜಿತವಾಗಿ ನಿರ್ಮಾಣ ಮಾಡುವ ಸಂಕಲ್ಪವನ್ನು ತೊಟ್ಟಿದ್ದಾರೆ. ಈ ಕಾರಣದಿಂದಾಗಿ ಗ್ರಾಮಸ್ಥರೆಲ್ಲ ಸರಣಿ ಸಭೆಗಳನ್ನು ನಡೆಸಿ, ರಾಜಕೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಿರೋಧ ಆಯ್ಕೆ ಬಗ್ಗೆ ಅಂತಿಮ ನಿರ್ಣಯ ಕೈಗೊಂಡಿದ್ದಾರೆ.

    ಗ್ರಾಮಸ್ಥರ ನಿರ್ಣಯದಂತೆ ಬಿಜೆಪಿ ಬೆಂಬಲಿತ 5 ಸದಸ್ಯರನ್ನು, ಕಾಂಗ್ರೆಸ್ ಬೆಂಬಲಿತ 6 ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಬೇಕು. 5 ಸದಸ್ಯರನ್ನು ಹೊಂದಿದ ಬಿಜೆಪಿ ಬೆಂಬಲಿತ ಗುಂಪಿನವರನ್ನು ಮೊದಲ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ನಂತರ 6 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಬೆಂಬಲಿತ ಗುಂಪಿನವರಿಗೆ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಬಿಟ್ಟು ಕೊಡಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.

    ಇಲ್ಲಿ ಯಾವುದೇ ಮಿಸಲಾತಿ ಒಂದು ಕಡೆ ಇರದಂತೆ ಎರಡು ಗುಂಪಿನ ಕಡೆ ಸಮಾನವಾಗಿ ಇರುವಂತೆ ಜಾಣ ನಡೆಯನ್ನು ಗ್ರಾಮಸ್ಥರೇ ಮಾಡಿರುವುದು ಶ್ಲಾಘನೆಗೆ ಕಾರಣವಾಗಿದೆ.

    ಇನ್ನು 4 ಸದಸ್ಯರನ್ನು ಆಯ್ಕೆ ಮಾಡಬೇಕಾದ ಬಸಾಪುರ ಗ್ರಾಪಂ ವ್ಯಾಪ್ತಿಯ ಬಮ್ಮನಕಟ್ಟಿ ಗ್ರಾಮದಲ್ಲಿಯೂ ಬಸಾಪುರ ಗ್ರಾಮಸ್ಥರು ಹಾಗೂ ರಾಜಕೀಯ ಮುಂಡರು ಅವಿರೋಧ ಆಯ್ಕೆಗೆ ಪ್ರಯತ್ನಿಸುತ್ತಿದ್ದಾರೆ.

    ಒಟ್ಟಿನಲ್ಲಿ ರಾಜಕೀಯ ಜಿದ್ದಾಜಿದ್ದಿ ಹೋಗಲಾಡಿಸಲು ಬಸಾಪುರ ಗ್ರಾಮದ ಅದಿ ದೇವತೆ ಆಲದಮ್ಮಳ ದೇವಸ್ಥಾನ ನಿರ್ಮಾಣ ಕಾರಣವಾಗಿದೆ.

    ಮಾಜಿ- ಹಾಲಿ ಶಾಸಕರಿಂದಲೂ ಬೆಂಬಲ

    ಬಸಾಪುರ ಗ್ರಾಪಂನಲ್ಲಿ ಒಟ್ಟು 15 ಸದಸ್ಯ ಬಲವಿದೆ. ಬಸಾಪುರದಲ್ಲಿ 11, ಬಮ್ಮನಕಟ್ಟಿ ಗ್ರಾಮದಲ್ಲಿ 4 ಜನ ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಮಾಜಿ ಸಚಿವ ಬಸವರಾಜ ಶಿವಣ್ಣನವರ ಹಾಗೂ ಶಾಸಕ ನೆಹರು ಓಲೇಕಾರ ಈಗಾಗಲೇ ಗ್ರಾಮಕ್ಕೆ ಆಗಮಿಸಿ ತಮ್ಮ ತಮ್ಮ ಬೆಂಬಲಿಗರಿಗೆ ಗ್ರಾಮಸ್ಥರ ನಿರ್ಣಯದಂತೆ ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಲು ಸ್ಪಷ್ಟ ಸೂಚನೆ ನೀಡಿದ್ದಾರೆ.

    ಗ್ರಾಮಸ್ಥರೆಲ್ಲರೂ ಸೇರಿ ಆಲದಮ್ಮ ದೇವಿ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಗ್ರಾಮದಲ್ಲಿನ ಜನರ ನಡುವೆ ವೈಮನಸ್ಸು ಮೂಡ ಬಾರದೆಂದು ಹಾಗೂ ಗ್ರಾಮದಲ್ಲಿ ಶಾಂತಿ ವಾತಾವರಣ ನಿರ್ಮಾಣ ಆಗಲಿ ಎಂಬ ಸದುದ್ದೇಶದಿಂದ ನಿರ್ಣಯ ಕೈಗೊಂಡಿದ್ದಾರೆ. ಇದು ಉತ್ತಮ ಬೆಳವಣಿಗೆ. ನಾವೆಲ್ಲರೂ ಗ್ರಾಮಸ್ಥರ ನಿರ್ಣಯಕ್ಕೆ ಬದ್ಧರಾಗಿದ್ದೇವೆ. ಆಲದಮ್ಮ ಎಲ್ಲರಿಗೂ ಒಳ್ಳೆಯದನ್ನು ಮಾಡಲೆಂದು ಪ್ರಾರ್ಥಿಸುತ್ತೇವೆ.
    | ಬಸಣ್ಣ ಕಂಬಳಿ, ತಾ.ಪಂ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts