More

    ಎಲ್ಲರನ್ನೂ ಒಗ್ಗೂಡಿಸುವ ಸಾಂಸ್ಕೃತಿಕ ಕಲೆ: ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಅಭಿಮತ

    ಮಂಡ್ಯ: ರಾಜಕಾರಣ ಹೊಸ ಸ್ವರೂಪ ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲೂ ಕಲೆ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಉತ್ಸವಗಳು ಎಲ್ಲರನ್ನೂ ಒಗ್ಗೂಡಿಸುತ್ತವೆ ಎಂದು ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷರೂ ಆದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಅಭಿಪ್ರಾಯಪಟ್ಟರು.
    ತಾಲೂಕಿನ ಬಸರಾಳು ಗ್ರಾಮದ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮಾಜಿ ಸಚಿವ ದಿ.ಎಸ್.ಡಿ.ಜಯರಾಂ ಹಾಗೂ ಪದ್ಮಶ್ರೀ ಪುರಸ್ಕೃತ ಗಾಯಕಿ ದಿ.ವಾಣಿ ಜಯರಾಂ ಸ್ಮರಣಾರ್ಥ ಬಸರಾಳು ಯುಗಾದಿ ಉತ್ಸವ, ಸಾಧಕರಿಗೆ ಅಭಿನಂದನೆ ಹಾಗೂ ಸಂಗೀತ ರಸಸಂಜೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಾಜಕಾರಣದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸವಾಗುತ್ತಿದೆ. ಆದರೆ, ಸಾಂಸ್ಕೃತಿಕ ಉತ್ಸವಗಳಿಂದ ಸಮಾಜ ಕಟ್ಟುವ ಕಾರ್ಯವಾಗುತ್ತಿದೆ. ಸಾಂಸ್ಕೃತಿಕ ಉತ್ಸವಗಳು ಮನೋಲ್ಲಾವವನ್ನು ಸೃಷ್ಟಿ ಮಾಡುತ್ತವೆ. ಸಮಾಜವನ್ನು ಒಗ್ಗೂಡಿಸಿ ಸೌಹಾರ್ದತೆಯನ್ನು ಹೆಚ್ಚಿಸುತ್ತವೆ. ಇಂತಹ ವಸಂತ ಕಾಲದ ಉತ್ಸವಗಳಿಗೆ ಎಲ್ಲರೂ ಸಾಕ್ಷಿಯಾಗುವ ಮೂಲಕ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.
    ನಮ್ಮ ತಂದೆ ಎಸ್.ಡಿ.ಜಯರಾಂ ಅವರು ರಾಜಕೀಯ ಕ್ಷೇತ್ರದಲ್ಲಿದ್ದರೂ ಕಲೆ, ಸಂಗೀತ, ಸಾಹಿತ್ಯ, ಕ್ರೆಡೆ, ಸಾಂಸ್ಕೃತಿಕ, ಗ್ರಾಮಾಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದರು. ಆ ಮೂಲಕ ಸಮಾಜ ಕಟ್ಟುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇದು ಅವರ ಜನಮನ್ನಣೆಗೆ ಕಾರಣವಾಗಿದೆ. ಅದನ್ನು ನಾವೂ ಮುಂದುವರಿಸುವ ನಿಟ್ಟಿನಲ್ಲಿ ಕಾರ‌್ಯೋನ್ಮುಖರಾಗಿದ್ದೇವೆ. ಇಂತಹ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡುತ್ತಾರೆಂಬುದಕ್ಕೆ ಇಂದು ಸೇರಿರುವ ಅಪಾರ ಜನಸ್ತೋಮವೇ ಸಾಕ್ಷಿಯಾಗಿದೆ ಎಂದು ಹೇಳಿದರು.
    ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಸ್ಥಾಪಕ ಡಾ.ಪರಮೇಶ್ ಮಾತನಾಡಿ, ಹೊಸ ಮನ್ಮಂತರಕ್ಕೆ ಕಾಲಿರಿಸಿದ್ದೇವೆ. ಯುಗಾದಿ ನಮ್ಮ ಬದುಕಿಗೊಂದು ಹೊಸತನದ ಸ್ಪರ್ಶವನ್ನು ನೀಡುತ್ತದೆ. ಸಂಭ್ರಮದಿಂದ ಯುಗಾದಿಯನ್ನು ಬರಮಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ವತಿಯಿಂದ ಬಸರಾಳು ಯುಗಾದಿ ಉತ್ಸವವನ್ನು ಮಾಡುವ ಮೂಲಕ ಈ ಭಾಗದ ಎಲ್ಲ ಜನರ ಆರ್ಥಿಕ ಬದಕು ಉತ್ತಮಗೊಳ್ಳಲಿ. ಒಳ್ಳೆಯ ಮಳೆ ಬಿದ್ದು, ಬೆಳೆ ಬಂದು ರೈತ ಸಂತಸದಿಂದ ಇರಲಿ, ಇದರೊಂದಿಗೆ ದೇಶ ಸುಭೀಕ್ಷವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
    ಮಾಜಿ ಶಾಸಕಿ ಪ್ರಭಾವತಿ ಜಯರಾಂ, ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ಸುಜಾತಾ ರಮೇಶ್, ಬಸರಾಳು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವು, ಗ್ರಾಮ ಪಂಚಾಯತಿ ಅಧ್ಯಕ್ಷೆ ಪದ್ಮಾ, ಬಿಜೆಪಿ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷ ಧನಂಜಯ್, ಪ್ರಧಾನ ಕಾರ್ಯದರ್ಶಿ ನಿರಂಜನ್, ಮಧುಸೂದನ್, ಮಹಿಳಾ ಮೋರ್ಚಾದ ಸದಸ್ಯರಾದ ಕಾವ್ಯ, ಸಾಕಮ್ಮ, ಡಾ.ಮಾದೇಶ್, ಕಾರಸವಾಡಿ ಮಹದೇವು, ಪುಟ್ಟಸ್ವಾಮಿ ಯರಹಳ್ಳಿ ಇತರರಿದ್ದರು.
    ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲಾ ತಂಡ ಮತ್ತು ಗಣ್ಯರ ಭಾವಚಿತ್ರ ಮೆರವಣಿಗೆ ಸಾಗಿ ಬಸರಾಳು ಯುಗಾದಿ ಉತ್ಸವಕ್ಕೆ ಹೊಸ ಮೆರುಗು ನೀಡಿತು. ವೇದಿಕೆಯಲ್ಲಿ ಜಾನಪದ ಮತ್ತು ಜನಪ್ರಿಯ ಸಿನಿಮಾ ಗೀತೆಗಳ ಗಾನಯಾನ ನಡೆಯಿತು. ಜತೆಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts