More

    ಇಂದ್ರಾಣಿ ನದಿಗೆ ಕೊಳಚೆ ನೀರು, ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಕ್ರೋಶ

    ಉಡುಪಿ: ನಗರದಲ್ಲಿ ಹರಿಯುವ ಇಂದ್ರಾಣಿ ನದಿಗೆ ಒಳಚರಂಡಿ, ಕೊಳಚೆ ನೀರು ಬಿಡುತ್ತಿದ್ದರೂ ನಗರಸಭೆ ಅಧಿಕಾರಿಗಳು ಈವರೆಗೆ ವ್ಯವಸ್ಥಿತ ಕ್ರಮಕೈಗೊಳ್ಳದ ಬಗ್ಗೆ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕೊಡವೂರು ವಾರ್ಡ್ ಸದಸ್ಯ ವಿಜಯ ಕೊಡವೂರು ವಿಷಯ ಪ್ರಸ್ತಾಪಿಸಿ ಇಂದ್ರಾಣಿ ತೀರ್ಥ ನದಿಯನ್ನು ಕಲಷಿತಗೊಳಿಸದಂತೆ, ನದಿಯನ್ನು ಶುದ್ಧಗೊಳಿಸುವ ಉದ್ದೇಶದಿಂದ ಹಲವಾರು ಪ್ರತಿಭಟನೆ, ಜಾಗೃತಿ ಕಾರ್ಯಕ್ರಮಗಳು ನಡೆದಿವೆ. ಇದಕ್ಕೆ ಪೂರಕವಾಗಿ ನಗರಸಭೆ ವತಿಯಿಂದ ಸೂಕ್ತ ಕ್ರಮಗಳು ಜರುಗಿಲ್ಲ. ಹಲವಾರು ಕಡೆ ಕೊಳಚೆ ನೀರು ಇಂದ್ರಾಣಿ ಒಡಲು ಸೇರುತ್ತಿದೆ. ಈ ಬಗ್ಗೆ ವ್ಯವಸ್ಥಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸದಸ್ಯರಾದ ಪ್ರಭಾಕರ ಪೂಜಾರಿ, ಸವಿತಾ ಹರೀಶ್ ದನಿಗೂಡಿಸಿ, ಕಲ್ಸಂಕ ಮಥುರಾ ಛತ್ರದಿಂದ ಈಚೆಗೆ ಒಳಚರಂಡಿ ಕೊಳಚೆ ನೀರನ್ನು ಬಿಡಲಾಗುತ್ತಿದೆ. ಅಡ್ಕದಕಟ್ಟೆಯಲ್ಲಿ ಮೂರು ನಾಲ್ಕು ಕಡೆ ಕೊಳಚೆ ನೀರು ಓವರ್‌ಫ್ಲೋ ಆಗುತ್ತಿದೆ ಎಂದರು. ಸದಸ್ಯರಾದ ಕೃಷ್ಣ ರಾವ್ ಕೊಡಂಚ ಮಾತನಾಡಿ, ಖಾಸಗಿಯಾಗಿ ಅನುಮತಿಯಿಲ್ಲದೆ ಡ್ರೈನೇಜ್ ನೀರನ್ನು ಚರಂಡಿಗೆ ಬಿಡಲಾಗುತ್ತಿದೆ. ಈ ನೀರು ಕೊಳಂಬೆ ಕೆರೆ ಸೇರಿ ಇಡೀ ಪರಿಸರದ ಅಂತರ್ಜಲ ಕಲುಷಿತಗೊಂಡಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಒಳಚರಂಡಿ ಅವ್ಯವಸ್ಥೆ ಬಗ್ಗೆ ಅಮೃತಾ ಕೃಷ್ಣಮೂರ್ತಿ ಗಮನ ಸೆಳೆದರು. ಈ ಬಗ್ಗೆ ಇಂಜಿನಿಯರ್‌ಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಸೂಚಿಸಿದರು. ಶಾಸಕ ಕೆ.ರಘುಪತಿ ಭಟ್ ಪ್ರತಿಕ್ರಿಯಿಸಿ, ಈ ಹಿಂದೆ ಆಡಳಿತದಲ್ಲಿದ್ದವರು ಯುಜಿಡಿ ಕಾಮಗಾರಿಗಾಗಿ ಬಿಡುಗಡೆಯಾಗಿದ್ದ 200 ಕೋಟಿ ರೂಪಾಯಿಯಲ್ಲಿ ವಾರಾಹಿ ಕುಡಿಯುವ ನೀರು ಯೋಜನೆಗಾಗಿ ಮಾತ್ರ ಹಣ ಬಳಸಿಕೊಂಡು ಉಳಿದ ಮೊತ್ತ ಹಿಂದಕ್ಕೆ ಹೋಗುವಂತಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ನಗರಸಭೆ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಇದ್ದರು. ಸಭೆಗೂ ಮುನ್ನ ಉಡುಪಿ- ಮಣಿಪಾಲ- ಮಲ್ಪೆ ಸ್ಮಾರ್ಟ್ ಯೋಜನೆ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು.

    130 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಸಿಟಿ
    130 ಕೋಟಿ ರೂ. ವೆಚ್ಚದ ಉಡುಪಿ ಸ್ಮಾರ್ಟ್ ಸಿಟಿ ಯೋಜನೆ, ಅನುಷ್ಠಾನದ ಕುರಿತು ನಗರಸಭೆ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಸಿಸಿ ಕ್ಯಾಮೆರಾ, 5ಜಿ ತಂತ್ರಜ್ಞಾನ, ವೈಫೈ ವ್ಯವಸ್ಥೆ ಮತ್ತು ಡ್ರೋನ್ ಚಾರ್ಜರ್‌ಗಳನ್ನೊಂಡ 3000 ಸ್ಮಾರ್ಟ್ ಪೋಲ್‌ಗಳನ್ನು ನಗರದಲ್ಲಿ ಆಳವಡಿಸಲಾಗುವುದು. ಅದೇ ರೀತಿ ಅತ್ಯಾಧುನಿಕ ರೀತಿಯ ಬಸ್ ಬೇ, ರಿಕ್ಷಾ ಬೇ, ಬೈಕ್ ಬೇ ಮತ್ತು ಶೌಚಗೃಹಗಳನ್ನು ನಿರ್ಮಿಸಲಾಗುವುದು ಎಂದು ಯೋಜನೆಯಾಧಿಕಾರಿಗಳು ಸಭೆಗೆ ತಿಳಿಸಿದರು. ಈ ಬಗ್ಗೆ ಮಾತನಾಡಿದ ಶಾಸಕ ರಘುಪತಿ ಭಟ್, ಡಿಪಿಆರ್ ಖಾಸಗಿ ಸಂಸ್ಥೆಯವರು ತಯಾರಿಸಿದ್ದು, ನಗರಸಭೆಯಿಂದ ಟೆಂಡರ್ ಕರೆಯಲಾಗುತ್ತದೆ. ಇದಕ್ಕೆ ನಗರಸಭೆಯಿಂದ ಯಾವುದೇ ಹಣ ಹೂಡಿಕೆ ಮಾಡಬೇಕಾಗಿಲ್ಲ. ಗುತ್ತಿಗೆ ವಹಿಸುವವರೇ ಸೇವಾ ಶುಲ್ಕ ಮತ್ತು ಜಾಹೀರಾತು ಮೂಲಕ ತಮ್ಮ ಹೂಡಿಕೆ ಹಣವನ್ನು ಪಡೆದುೆಕೊಳ್ಳಬೇಕು. ಈ ಕುರಿತು ನಗರಸಭೆಯಿಂದ ಒಪ್ಪಿಗೆ ಪಡೆದು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts