More

  ಕೃಷ್ಣನೂರಲ್ಲಿ ವೈಭವದ ಪರ್ಯಾಯ ಮೆರವಣಿಗೆ

  ಉಡುಪಿ: ಶ್ರೀಕೃಷ್ಣಮಠದಲ್ಲಿ ಶನಿವಾರ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯ ಪೀಠಾರೋಹಣ ಸಂಭ್ರಮದಿಂದ ಜರುಗಿತು. ಇದಕ್ಕೂ ಪೂರ್ವಭಾವಿಯಾಗಿ ಕಾಪು ದಂಡ ತೀರ್ಥದಿಂದ ರಥಬೀದಿ ವರೆಗೆ ನಡೆದ ವೈಭವದ ಮೆರವಣಿಗೆಯನ್ನು ಲಕ್ಷಾಂತರ ಮಂದಿ ಭಕ್ತರು ಕಣ್ತುಂಬಿಕೊಂಡರು. ವಿವಿಧ ಕಲಾತಂಡಗಳು, ಭಜನಾತಂಡಗಳು, ಅಷ್ಟಮಠಗಳ ಸ್ವಾಮೀಜಿ ಅವರನ್ನು ಹೊತ್ತ ಪಲ್ಲಕ್ಕಿಗಳು ಮೆರವಣಿಗೆಯಲ್ಲಿ ಸಾಗಿಬಂದವು. ಮೆರವಣಿಗೆಯುದ್ದಕ್ಕೂ ಸ್ವಚ್ಛತೆಗೆ ಆದ್ಯತೆ ನೀಡಿದ್ದು ಗಮನಸೆಳೆಯಿತು.

  ಪರ್ಯಾಯ ಶ್ರೀ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿಯವರ ಪರ್ಯಾಯ ಮೆರವಣಿಗೆಗೆ ವಿವಿಧ ಕಲಾತಂಡಗಳು ಮೆರುಗು ನೀಡಿದವು. ಶನಿವಾರ ಮುಂಜಾನೆ 2.30ಕ್ಕೆ ಆರಂಭಗೊಂಡ ಮೆರವಣಿಗೆ ಸುಮಾರು ಎರಡು ಕಿ.ಮೀ. ಸಾಗಿ ಬೆಳಗಿನ ಜಾವ 6ಕ್ಕೆ ರಥಬೀದಿ ತಲುಪಿತು. ಕಾಪು ದಂಡತೀರ್ಥದಲ್ಲಿ ಸ್ನಾನ ಮುಗಿಸಿ, ಜೋಡುಕಟ್ಟೆಗೆ ಆಗಮಿಸಿದ ಪರ್ಯಾಯ ಶ್ರೀಗಳು ಅಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಆರಂಭಗೊಂಡಿತು. ವಿವಿಧ ಜಿಲ್ಲೆಗಳ, ಹೊರ ರಾಜ್ಯಗಳ ಹಾಗೂ ಸ್ಥಳೀಯ 60ಕ್ಕೂ ಅಧಿಕ ಜಾನಪದ ತಂಡಗಳು, ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಸಂದೇಶ ಸಾರುವ ಟ್ಯಾಬ್ಲೋ ಹಾಗೂ 1500ಕ್ಕೂ ಅಧಿಕ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

  ಕಲಾತಂಡಗಳು: ಮೆರವಣಿಗೆಯಲ್ಲಿ ಬಾರಕೂರಿನ ಡೋಲು, ಮಠದ ತಟ್ಟಿರಾಯ, ಬಿರುದಾವಳಿ, ಗೊಂಬೆಸೆಟ್ ವೇದಘೋಷ, ಜಗ್ಗಲಿಗೆ ವಾದ್ಯ, ಚೆಂಡೆ, ತಾಲೀಮು, ಸೋಮನ ಕುಣಿತ, ಗೊರವರ ಕುಣಿತ, ಕೊಂಬು, ಮರಕಾಲು ಕುಣಿತ, ನಾಗಸ್ವರ, ಕರಡಿಮಜಲು, ಕಂಗೀಲು ಕುಣಿತ, ಹೋಳಿ ನೃತ್ಯ, ಚಿಟ್ಟೆ ಮೇಳ, ಇಸ್ಕಾನ್ ಭಜನಾ ತಂಡಗಳು, ಪೂರ್ಣ ಕುಂಭ, ಲಕ್ಷ್ಮೀ ಸೋಭಾನೆ, ಮಠದ ರಣಕಹಳೆ, ಡೋಲು, ಬಾರ‌್ತಂಬೂರಿ, ಬ್ಯಾಂಡ್ ಸೆಟ್, 6 ಬಣ್ಣದ ಕೊಡೆಗಳು, ಮಠದ ಉದ್ದದ ನಾಗಸ್ವರ, ಪಟಾವು, 2 ಕೊಂಬು, ಶಂಖದಾಸರು, ನಡೆ ಚಪ್ಪರ. ಬಳಿಕ ಭಜನೆ ತಂಡ, ತಟ್ಟಿರಾಯ, 4 ಬಿರುದಾವಳಿ, 6 ಬಣ್ಣದ ಕೊಡೆ, ನಾಗಸ್ವರ, ಕ್ಲಾರಿನೆಟ್, ಪಟಾವು, ಉಡುಪಿ ಯುವ ಬ್ರಾಹ್ಮಣ ಪರಿಷತ್‌ನಿಂದ ಘಂಟೆ ಶಂಖ ಸೆಟ್, 2 ಕೊಂಬು, ಪಂಚ ವಾದ್ಯ, 4 ಇಲಾಲಿ ನಂತರದಲ್ಲಿ ಪರ್ಯಾಯ ಅದಮಾರು ಶ್ರೀ ಗಳು ಸಾಗಿದರು.

  ಬಳಿಕ ಸರದಿಯಂತೆ ಕೃಷ್ಣಾಪುರ ಶ್ರೀ, ಪೇಜಾವರ ಶ್ರೀ, ಕಾಣಿಯೂರು ಶ್ರೀ, ಕೊನೆಗೆ ಸೋದೆ ಶ್ರೀಗಳು ಸಾಗಿದರು. ನಂತರದಲ್ಲಿ ಬಳ್ಳಾರಿಯ ಹಕ್ಕಿಪಿಕ್ಕಿ ನೃತ್ಯತಂಡ, ಭಜನಾ ಸಂಕೀರ್ತನೆ, ಟ್ಯಾಬ್ಲೋದಲ್ಲಿ ಕಾಳಿಯಮರ್ದನ, ಕಾರ್ಕಳ ಭಜನೆ, ರಾಮಮಂದಿರ, ಆಂಜನೇಯ, ನವದುರ್ಗೆಯರು, ಕುಂಜಾರುಬೆಟ್ಟ, ಗೋವಿನ ತಳಿ, ಹಳ್ಳಿ ಜೀವನ, ಪ್ಲಾಸ್ಟಿಕ್ ಭೂತ, ಇಸ್ರೋ ವೀಕ್ಷಣೆ, ನಾಡದೋಣಿ, ಕೃಷಿ ಇಲಾಖೆ, ನಗರ ಸಭೆಯ ಸ್ತಬ್ಧ ಚಿತ್ರ, ಪ್ರವಾಸೋದ್ಯಮ ಇಲಾಖೆಯ ಪರಶುರಾಮ, ಮಾಹೆಯ ತುಳುನಾಡ ವೈಭವ ಗಮನ ಸೆಳೆಯಿತು. ಜತೆಗೆ ತಮಟೆ ನಗಾರಿ ತಂಡ, ಗಾರುಡಿ ಗೊಂಬೆ, ಭಾರತ ಸೇವಾದಳ, ವೀರಗಾಸೆ, ಅಗ್ನಿಶಾಮಕ ದಳದ ವಾಹನ, ಪೊಲೀಸ್ ವಾಹನ ಮತ್ತು ಆಂಬುಲೆನ್ಸ್ ಮೆರವಣಿಗೆಯಲ್ಲಿತ್ತು.

  ಗಣ್ಯರ ಉಪಸ್ಥಿತಿ: ಜೋಡುಕಟ್ಟೆಯಿಂದ ಆರಂಭವಾದ ಮೆರವಣಿಗೆ ಕೋರ್ಟ್ ರಸ್ತೆ, ಡಯನಾ ಸರ್ಕಲ್, ತೆಂಕಪೇಟೆ ಮೂಲಕ ರಥ ಬೀದಿ ಪ್ರವೇಶಿಸಿತು. ದ.ಕ. ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಮೆರವಣಿಗೆ ತಂಡಗಳ ಉಸ್ತುವಾರಿ ವಹಿಸಿದ್ದರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ಮಾಜಿ ಶಾಸಕರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಮೆರವಣಿಗೆಯಲ್ಲಿ ಸಾಗಿದರು.
   
  ಸ್ವಚ್ಛತೆಗೆ ಆದ್ಯತೆ: ಮೆರವಣಿಗೆ ಮುಂದೆ ಸಾಗುತ್ತಿದ್ದಂತೆ ಗಾಂಧಿ ಆಸ್ಪತ್ರೆ ಸ್ವಯಂಸೇವಕರ ತಂಡ ರಸ್ತೆ ಸ್ವಚ್ಛಗೊಳಿಸುವ ಮೂಲಕ ಶ್ರೀಗಳು ಸಾಗುವ ಹಾದಿಯಲ್ಲಿ ಕಸ ಇಲ್ಲದಂತೆ ಮಾಡಿತು. 30ಕ್ಕೂ ಅಧಿಕ ಸ್ವಯಂಸೇವಕರು ರಸ್ತೆಯಲ್ಲಿ ಬಿದ್ದಿದ್ದ ಕಸವನ್ನು ತೆಗೆದು, ರಸ್ತೆಗೆ ನೀರು ಚಿಮುಕಿಸಿ, ಶುದ್ಧಗೊಳಿಸಿದರು. ಮೆರವಣಿಗೆ ಸಂಪನ್ನಗೊಂಡ ಬಳಿಕ ಉಡುಪಿ ನಗರ ಸಭೆಯ ಸ್ವಚ್ಛತಾ ಸಿಬ್ಬಂದಿ ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತರಾದರು. ಹೆಚ್ಚುವರಿಯಾಗಿ 50ರಷ್ಟು ಸಿಬ್ಬಂದಿಯನ್ನು ನಗರಸಭೆ ಸ್ವಚ್ಛತೆಗೆ ನಿಯೋಜಿಸಿತ್ತು. ಬೆಳಗ್ಗೆ 6ಕ್ಕೆ ನಗರ ಮತ್ತೆ ಹಿಂದಿನಂತೆ ಸ್ವಚ್ಛಗೊಂಡಿತ್ತು.

  ಭಕ್ತ ಸಾಗರ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಲಕ್ಷಾಂತರ ಮಂದಿ ಭಕ್ತರು ವೈಭವದ ಶೋಭಾಯಾತ್ರೆ ಕಣ್ತುಂಬಿಕೊಳ್ಳಲು ಶುಕ್ರವಾರ ರಾತ್ರಿ 10 ಗಂಟೆಯಿಂದಲೇ ನಗರದಲ್ಲಿ ನೆರೆದಿದ್ದರು.
  ಪರ್ಯಾಯ ಮೆರವಣಿಗೆ ಜೋಡುಕಟ್ಟೆಯಿಂದ, ಕೋರ್ಟ್ ರಸ್ತೆ, ಡಯಾನ ಸರ್ಕಲ್, ಐಡಿಯಲ್ ಸರ್ಕಲ್, ತೆಂಕಪೇಟೆ ಮೂಲಕ ರಥಬೀದಿ ಪ್ರವೇಶಿಸಿತು. ಈ ಬಾರಿ ಹಲವೆಡೆ ಸಾರ್ವಜನಿಕರಿಗೆ ಕುಳಿತು ಮೆರವಣಿಗೆ ಕಣ್ತುಂಬಿಕೊಳ್ಳಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿತ್ತು.

  ಭಕ್ತರಿಂದ ಜಾಗರಣೆ: ಚಿತ್ತರಂಜನ್ ಸರ್ಕಲ್, ಡಯಾನ ಸರ್ಕಲ್, ತಾಲೂಕು ಕಚೇರಿ, ರಥಬೀದಿ, ತೆಂಕಪೇಟೆ, ಬಡಗುಪೇಟೆ, ಸಿಟಿಬಸ್ ನಿಲ್ದಾಣ, ಸರ್ವೀಸ್ ಬಸ್ ನಿಲ್ದಾಣ, ಕೆ.ಎಂ. ಮಾರ್ಗದಲ್ಲಿ ಲಕ್ಷಾಂತರ ಮಂದಿ ಜನರು ಅತ್ತಿಂದಿತ್ತ ಓಡಾಡುತ್ತ, ರಾತ್ರಿಯಿಡೀ ಜಾಗರಣೆ ಮಾಡುವ ಮೂಲಕ ಅದಮಾರು ಪರ್ಯಾಯ ವೈಭವ ಸಂಭ್ರಮಿಸಿದರು. ಪಲಿಮಾರು ಪರ್ಯಾಯೋತ್ಸವದಲ್ಲಿ ಪಾಲ್ಗೊಳ್ಳಲು ದೂರದ ಊರುಗಳಿಂದ ಸಾವಿರಾರು ಭಕ್ತರು ಉಡುಪಿಗೆ ಧಾವಿಸಿದ್ದರಿಂದ, ನಗರದ ಲಾಡ್ಜ್ , ವಸತಿಗೃಹ, ಶ್ರೀಕೃಷ್ಣಮಠ ಛತ್ರಗಳು ಭರ್ತಿಯಾಗಿದ್ದವು.

  ಸಂಗೀತ, ಸಾಂಸ್ಕೃತಿಕ ವೈಭವ: ರಾತ್ರಿ 10ರಿಂದ ನಗರದ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಂಡು ಮಧ್ಯರಾತ್ರಿ 12, 1 ರ ಸುಮಾರಿಗೆ ಮುಕ್ತಾಯಗೊಂಡಿತು. ಶುಕ್ರವಾರ ರಾತ್ರಿ 8-9 ಗಂಟೆಯಿಂದ ನಗರದ ವಿವಿಧ ಭಾಗದಲ್ಲಿ ಸಂಘ, ಸಂಸ್ಥೆಗಳು ವಿವಿಧ ಕಾರ್ಯಕ್ರಮ ಆಯೋಜಿಸಿದ್ದವು. ಕ್ರಿಶ್ಚಿಯನ್ ಪಿಯು ಕಾಲೇಜು ಮಿಶನ್‌ಕಾಂಪೌಂಡ್‌ನಲ್ಲಿ ಸ್ಟಾರ್‌ನೈಟ್, ಕಿನ್ನಿಮುಲ್ಕಿಯಲ್ಲಿ ಶ್ರೀಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್‌ನ ಸಾಂಸ್ಕೃತಿಕ ಕಲಾ ವೈಭವ, ಗೀತಾಂಜಲಿ ಸಿಲ್ಕ್ಸ್ ಎದುರು ಸಂಗೀತ ಕಾರ್ಯಕ್ರಮ, ಅಜ್ಜರಕಾಡು ಟೌನ್‌ಹಾಲ್‌ನಲ್ಲಿ ಹರ್ಷ ಪ್ರಸ್ತುತಪಡಿಸಿದ ಸ್ವರಾಂಜಲಿ ಸಂಗೀತ ಗಾಯನವನ್ನು ಲಕ್ಷಾಂತರ ಅಭಿಮಾನಿಗಳು ಆಸ್ವಾದಿಸಿದರು.

  24 ಗಂಟೆ ಕಣ್ಗಾವಲು: ಸಹಸ್ರ ಸಂಖ್ಯೆಯಲ್ಲಿ ಭಕ್ತರು ಸೇರುವ ಪರ್ಯಾಯ ಮಹೋತ್ಸವಕ್ಕೆ 24 ಗಂಟೆ ಕಣ್ಗಾವಲು ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮಾಡಲಾಗಿತ್ತು. 5 ವಿಧ್ವಂಸಕ ಕೃತ್ಯ ಪತ್ತೆ ತಂಡ ನಗರದಲ್ಲಿ ನಿಯೋಜನೆಗೊಂಡಿತ್ತು. ಕೃಷ್ಣ ಮಠದ ಸುತ್ತಮುತ್ತ, ಪ್ರಮುಖ ಜನನಿಬೀಡ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಸಾರ್ವಜನಿಕರ ಮಾಹಿತಿಗಾಗಿ ಕೃಷ್ಣಮಠ ವಠಾರ ಮತ್ತು ಸರ್ವೀಸ್ ಬಸ್ ನಿಲ್ದಾಣದ ಬಳಿ ಹೊರಠಾಣೆ ತೆರೆಯಲಾಗಿತ್ತು. ಅಂಬಾಗಿಲು, ಇಂದ್ರಾಳಿ, ಕುಕ್ಕಿಕಟ್ಟೆ. ಬಲಾಯಿಪಾದೆ ಕ್ರಾಸ್‌ನಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿತ್ತು.

  ಅದಮಾರು ಪರ್ಯಾಯ ಭೋಜನ: ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಹಿನ್ನೆಲೆಯಲ್ಲಿ ಮೊದಲ ದಿನ ಭಕ್ತರಿಗೆ ವಿಶೇಷ ಸಂತರ್ಪಣೆ ಆಯೋಜಿಸಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ಬೆಳಗ್ಗೆ 10.30ರಿಂದಲೇ ಆರಂಭವಾದ ಅನ್ನಸಂತರ್ಪಣೆ ಸಾಯಂಕಾಲ 4 ರವರೆಗೂ ಮುಂದುವರಿದಿತ್ತು. 50ಸಾವಿರಕ್ಕೂ ಅಧಿಕ ಮಂದಿ ಕೃಷ್ಣ ಪ್ರಸಾದ ಸ್ವೀಕರಿಸಿದರು.

  ಬೈಲಕೆರೆ ಪಾರ್ಕಿಂಗ್ ಪ್ರದೇಶ, ಮಠದ ಅನ್ನಬ್ರಹ್ಮ, ಮಧ್ವಾಂಗಣ, ಟೂರಿಸ್ಟ್ ಹಾಲ್ ಸೇರಿದಂತೆ ಸುಮಾರು 9 ಕಡೆಗಳಲ್ಲಿ ಭಕ್ತರಿಗೆ ಭೋಜನ ಸ್ವೀಕಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪಾರ್ಕಿಂಗ್ ಪ್ರದೇಶದಲ್ಲಿ ಒಂದು ಬಾರಿಗೆ ಸಾವಿರ ಮಂದಿಗೆ ಟೇಬಲ್ ಊಟದ ವ್ಯವಸ್ಥೆ ಇತ್ತು. ಜತೆಗೆ ಬಫೆಯೂ ಇತ್ತು. ಉದ್ಯಾವರ ವಿಷ್ಣುಮೂರ್ತಿ ಭಟ್ ಮತ್ತು ಬದ್ರಿ ನಾರಾಯಣ ನೇತೃತ್ವದ 70 ಮಂದಿ ಬಾಣಸಿಗರು ಮತ್ತು ಸಹಾಯಕರು ಶುಕ್ರವಾರ ರಾತ್ರಿಯಿಂದಲೇ ಅನ್ನಸಂತರ್ಪಣೆಗೆ ಸಿದ್ಧತೆ ನಡೆಸಿದ್ದರು. ಕಟೀಲು, ಪಡುಬಿದ್ರೆ ಹಾಗೂ ಉಡುಪಿಯ ವಿವಿಧೆಡೆಯ ವಿವಿಧ ಸಂಘ ಸಂಸ್ಥೆಗಳ ಸುಮಾರು 400ಕ್ಕೂ ಅಧಿಕ ಮಂದಿ ಸ್ವಯಂಸೇವಕರಾಗಿ ಅಡುಗೆ ಬಡಿಸುವ ಹಾಗೂ ಸ್ವಚ್ಛತಾ ಕಾರ್ಯದಲ್ಲಿ ಸಹಕರಿಸಿದರು.

  ಊಟದ ವಿಶೇಷತೆ: ಅದಮಾರು ಪರ್ಯಾಯದ ಮೊದಲ ಊಟದಲ್ಲಿ ಉಪ್ಪಿನಕಾಯಿ, ಕೋಸಂಬರಿ, ಅಲಸಂಡೆ-ಕಡ್ಲೆ ಪಲ್ಯ, ಸುವರ್ಣಗಡ್ಡೆ-ಕಡ್ಲೆ ಪಲ್ಯ, ಸೌತೆಕಾಯಿ ಹುಳಿ, ಮಟ್ಟುಗುಳ್ಳ ಹುಳಿ, ಅನ್ನ, ಸಾರು, ಮಜ್ಜಿಗೆ, ಪುಳಿಯೊಗರೆ, ಗೋಧಿ ಹಿಟ್ಟಿನ ಕಡಿ, ಬೂಂದಿ ಲಾಡು, ಸಜ್ಜಿಗೆ ವಡೆ, ಗೋಧಿ ಪಾಯಸ ವಿಶೇಷವಾಗಿತ್ತು.
   
  ವಿಐಪಿಗಳಿಗೆ ವಿಶೇಷ ವ್ಯವಸ್ಥೆ: ಪರ್ಯಾಯ ದರ್ಬಾರಿಗೆ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಠದಲ್ಲಿ ವಿಐಪಿಗಳ ಊಟದ ಹಾಲ್‌ನಲ್ಲಿ ಪ್ರಸಾದ ಸ್ವೀಕರಿಸಿದರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಜಿ.ಜಗದೀಶ್ ಜತೆಗಿದ್ದರು. ವಿವಿಧ ಇಲಾಖೆಗಳ ಅಧಿಕಾರಿ, ನಗರದ ಸಭೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಊಟ ಮಾಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts