More

    ಅನಂತಮೂರ್ತಿ ಜನ್ಮದಿನಾಚರಣೆ

    ಬೆಂಗಳೂರು: ಸಂಪ್ರದಾಯವಾದಿಯ ಕರ್ಮಟತನವಾದಂತೆ ಪರಂಪರೆಯ ಅರಿವಿಲ್ಲದ ಆಧುನಿಕತೆಯೂ ತಿರಸ್ಕಾರ ಯೋಗ್ಯವೆಂದು ಪ್ರತಿಪಾದಿಸಿ ವೈಚಾರಿಕ ಹರಹನ್ನು ವಿಸ್ತರಿಸಿದವರು ಡಾ. ಯು.ಆರ್. ಅನಂತ ಮೂರ್ತಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಬಣ್ಣಿಸಿದರು.

    ಪರಿಷತ್ತು ಗುರುವಾರ ಏರ್ಪಡಿಸಿದ್ದ ಡಾ. ಯು. ಆರ್. ಅನಂತಮೂರ್ತಿ ಅವರ 92ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

    ತಮ್ಮ ಕೃತಿಗಳ ಮೂಲಕ ನಮ್ಮನ್ನು ನಾವೇ ಒಳಹೊಕ್ಕು ನೋಡುವಂತೆ ಮಾಡಿದವರು ಅನಂತಮೂರ್ತಿ. ಕನ್ನಡ ಸಂಸ್ಕೃತಿ ಕಂಡ ವಿಶಿಷ್ಟ ಪ್ರತಿಭೆ. ಅವರ ಸಂಸ್ಕಾರ ಕಾದಂಬರಿ 1970ರಲ್ಲಿ ಪಟ್ಟಾಭಿರಾಮ ರೆಡ್ಡಿ ನಿರ್ದೇಶನದಲ್ಲಿ ಚಲನಚಿತ್ರವಾಗಿ ನಾಡಿನಾದ್ಯಂತ ವಿಚಾರ ಕ್ರಾಂತಿಯನ್ನೆಬ್ಬಿಸಿತು ಎಂದು ಅನಂತಮೂರ್ತಿ ಅವರ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಹೊಂದಿದ್ದ ನಿಕಟ ಸಂಬಂಧವನ್ನು ಸ್ಮರಿಸಿದರು.

    ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಪ್ರೊ. ಎನ್.ಎಸ್. ಶ್ರೀಧರಮೂರ್ತಿ ಮಾತನಾಡಿ, ಸಮಾಜ ಎದುರಿಸುತ್ತಿರುವ ಸಾಂಸ್ಕೃತಿಕ ಸಂಘರ್ಷದ ಸ್ವರೂಪವನ್ನು ಅನಂತಮೂರ್ತಿ ತಮ್ಮ ಕತೆಗಳ ಮೂಲಕ ವಿಶ್ಲೇಷಿಸಿದರು. ಸಂಸ್ಕಾರ, ಅವಸ್ಥೆ ಕಾದಂಬರಿ ಮತ್ತು ಬರ, ಘಟಶ್ರಾದ್ಧ, ಮೌನಿ ಕತೆಗಳನ್ನು ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿವೆ. ಇವೆಲ್ಲವೂ ಮಹತ್ವದ ಚಿತ್ರಗಳಾಗಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ ಎಂದರು.

    ಕಸಾಪ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts