More

    ಸಲ್ಲಿಕೆಯಾಗಲಿಲ್ಲ ನಾಮಪತ್ರ ; ಪಟ್ಟಣ ಪಂಚಾಯಿತಿಗೆ ತ್ಯಾಮಗೊಂಡ್ಲು ಗ್ರಾಮಸ್ಥರು ಪಟ್ಟು

    ತ್ಯಾಮಗೊಂಡ್ಲು: ತ್ಯಾಮಗೊಂಡ್ಲು ಗ್ರಾಪಂ ಚುನಾವಣೆಯನ್ನು ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ ಬಹಿಷ್ಕರಿಸಿದ್ದೇವೆ, ಕೂಡಲೇ ಗ್ರಾಪಂನಿಂದ ಪಪಂಗೆ ಮೇಲ್ದರ್ಜೆಗೇರಿಸಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿರುವ ಗ್ರಾಮಸ್ಥರು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಶುಕ್ರವಾರ ಕೂಡ ಒಂದೂ ನಾಮಪತ್ರ ಸಲ್ಲಿಸದೆ ಬೇಡಿಕೆ ಈಡೇರಿಕೆಗೆ ಪಟ್ಟು ಮುಂದುವರಿಸಿದ್ದಾರೆ.

    ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದ ತ್ಯಾಮಗೊಂಡ್ಲು ಜನತೆಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿರಲಿಲ್ಲ. ಆದ್ದರಿಂದ ಎರಡನೇ ಬಾರಿಯೂ ಚುನಾವಣೆ ಬಹಿಷ್ಕರಿಸಿರುವ ಗ್ರಾಮಸ್ಥರು ನಾಮಪತ್ರ ಸಲ್ಲಿಸದೇ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

    ಸಾರ್ವಜನಿಕರ ಬೇಡಿಕೆಗೆ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ. ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆ ಸೇರಿ ಯಾವುದೇ ಚುನಾವಣೆಯಲ್ಲೂ ಭಾಗವಹಿಸದೆ ಬಹಿಷ್ಕರಿಸಲಾಗುವುದು. ಇಂದಿಗೆ ಒಂದು ಹಂತ ಮುಕ್ತಾಯವಾಗಿದೆ. ನಾಳೆಯಿಂದ ನಮ್ಮ ಕೋರಿಕೆ ಈಡೇರಿಸುವಂತೆ ಸರದಿ ಪ್ರಕಾರ ಗ್ರಾಪಂ ಮುಂದೆ ಧರಣಿ ನಡೆಸಲಾಗುವುದು ಎಂದು ಮುಖಂಡ ಮಹಿಮಣ್ಣ ತಿಳಿಸಿದರು.

    ಪಟ್ಟಣ ಪಂಚಾಯಿತಿಯಾಗಲು ಅರ್ಹತೆ ಹೊಂದಿರುವ ತ್ಯಾಮಗೊಂಡ್ಲು ಇನ್ನೂ ಗ್ರಾಮ ಪಂಚಾಯಿತಿಯಾಗಿರುವುದು ದುರಾದೃಷ್ಟ. ಈಗಲಾದರೂ ಸರ್ಕಾರ ಎಚ್ಚೆತ್ತು ಬೇಡಿಕೆ ಈಡೇರಿಸಬೇಕು, ಪಕ್ಷಾತೀತವಾಗಿ ನಾವೆಲ್ಲ ಸೇರಿ ಹೋರಾಟ ಮಾಡಿಕೊಂಡು ಬಂದಿದ್ದೇವೆ ಮುಂದೆಯೂ ಕೂಡ ಪಪಂ ಆಗುವವರೆಗೂ ನಮ್ಮ ನಿಲುವು ಬದಲಾಗಲ್ಲ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎನ್.ಹನುಮಂತರಾಜು ಹೇಳಿದರು.

    ಎಲ್ಲ ಪಕ್ಷದವರ ಸಂಘಟಿತ ಹೋರಾಟದಿಂದ ಉತ್ತಮ ಫಲಿತಾಂಶ ಸಿಗುವ ಆಶಾಭಾವವಿದೆ, ಸರ್ಕಾರದಿಂದ ಮೇಲ್ದರ್ಜೆಗೇರಿಸುವ ಆದೇಶ ಸಿಗಬಹುದು. ಏನೇ ಆದರೂ ನಮ್ಮ ಪಟ್ಟಣದಲ್ಲಿ ಚುನಾವಣೆಯಾದರೆ ಅದು ಪಪಂಗೆ ಮಾತ್ರ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಸಾದತ್ ಉಲ್ಲಾ ಹೇಳಿದರು. ಗ್ರಾಪಂ ಮಾಜಿ ಸದಸ್ಯ ಜಗದೀಶ್ ಪ್ರಸಾದ್ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಹೋರಾಟ ಮಾಡಲಾಗುವುದು. ಚುನಾವಣೆಯಲ್ಲಿ ಮಾತ್ರ ರಾಜಕೀಯ. ನಂತರ ನಾವೆಲ್ಲರೂ ಒಂದೇ. ಪಟ್ಟಣದ ಪ್ರಶ್ನೆ ಬಂದಾಗ ಸಂಘಟಿತ ಹೋರಾಟಕ್ಕೆ ಮುಂದಿರುತ್ತೇವೆ ಎಂದು ಹೇಳಿದರು.

    ವರ್ತಕರ ಸಂಘದ ಅಧ್ಯಕ್ಷ ಟಿ.ಎಸ್.ಮಂಜುನಾಥ್, ಡೇರಿ ಮಾಜಿ ಅಧ್ಯಕ್ಷ ಶಂಕರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ವಾಸುದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ಜಗದೀಶ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಿ.ಮಂಜುನಾಥ್, ಗ್ರಾಪಂ ಮಾಜಿ ಸದಸ್ಯ ಸುಂದರರಾಜ್, ಕುಮಾರ, ಪ್ರಕಾಶ್ ಬಾಬು, ಮಲ್ಲೇಶ್, ಅನೀಸ್, ಕೃಷ್ಣಮೂರ್ತಿ ಹಾಗು ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts