More

    ರಕ್ಷಣೆ ನೀಡಬೇಕಾದ ಪೊಲೀಸರಿಂದಲೇ ಅತ್ಯಾಚಾರ: 20 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿದ ಪೊಲೀಸರು

    ಗೋರಖ್​ಪುರ: ಸಮಾಜದಲ್ಲಿ ರಕ್ಷಣೆ ನೀಡಬೇಕಾದ ಪೊಲೀಸರಿಂದಲೇ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಗೋರಖ್​ಪುರದಲ್ಲಿ 20 ವರ್ಷದ ಯುತಿಯ ಮೇಲೆ ಇಬ್ಬರು ಪೊಲೀಸರು ಅತ್ಯಾಚಾರವೆಸಗಿದ್ದು ಎಫ್​ಐಆರ್​ ದಾಖಲಾಗಿದೆ.

    ಗುರುವಾರದಂದು ಗೋರಖ್​ಪುರದ ರೈಲ್ವೆ ನಿಲ್ದಾಣದ ಹೋಟೆಲ್​ ಒಂದರಲ್ಲಿ 20 ವರ್ಷದ ಯುವತಿಯ ಮೇಲೆ ಇಬ್ಬರು ಪೊಲೀಸರು ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಇಬ್ಬರು ಪೊಲೀಸರ ಮೇಲೆ ದೂರು ನೀಡಿರುವ ಯುವತಿ ಅವರಿಬ್ಬರನ್ನು ಮತ್ತು ತನ್ನನ್ನು ಅತ್ಯಾಚಾರ ಮಾಡಿದ ಹೋಟೆಲ್​ನ ರೂಮನ್ನು ಗುರುತಿಸುವುದಾಗಿ ತಿಳಿಸಿದ್ದಾಳೆ. ಮೊದಲು ವೇಶ್ಯಾವಾಟಿಕೆ ನಡೆಸುತ್ತಿದ್ದೀಯಾ ಎಂದು ಗದರಿಸಿದ ಪೊಲೀಸರು ನಂತರ ಆಕೆಯ ಮೇಲೆ ಎರಗಿ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ದಾಖಲಿಸಿದ್ದಾಳೆ.

    ಅತ್ಯಾಚಾರ ನಡೆದ ಹೋಟೆಲ್​ನಲ್ಲಿ ಸಿಸಿಟಿವಿ ಇದ್ದು, ಅದನ್ನು ಪರಿಶೀಲಿಸುತ್ತಿರುವುದಾಗಿ ಗೋರಖ್​ಪುರದ ಎಸ್​ಎಸ್​ಪಿ ಸುನಿಲ್​ ಕುಮಾರ್​ ತಿಳಿಸಿದ್ದಾರೆ. ಯುವತಿ ಹೋಟೆಲ್​ ಒಳಗೆ ಸ್ವಇಚ್ಛೆಯಿಂದಲೇ ಕೆಲವು ಪುರುಷರ ಜತೆ ಹೋಗಿದ್ದಾಳೆ ಎಂದು ಅವರು ತಿಳಿಸಿದ್ದಾರೆ. ಹೋಟೆಲ್​ನ ಗಾರ್ಡ್​ನ ತನಿಖೆಯನ್ನೂ ಸಹ ನಡೆಸಲಾಗಿದೆ ಎಂದು ಹೇಳಲಾಗಿದೆ.

    ಈ ವಿಚಾರವಾಗಿ ಕಾಂಗ್ರೆಸ್​, ಸಮಾಜವಾದಿ ಪಕ್ಷ, ಬಿಎಸ್​ಪಿ ಮತ್ತು ಪೂರ್ವಂಚಲ್​ ಸೇನಾ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ಜಿಲ್ಲಾ ಮ್ಯಾಜಿಸ್ಟ್ರೇಟ್​ ಕಚೇರಿಯ ಎದುರು ಧರಣಿ ನಡೆಸಿದ್ದು ಕೂಡಲೇ ಗೋರಖ್​ಪುರದ ಪೊಲೀಸ್​ ಠಾಣೆಯ ಎಲ್ಲ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    ಗ್ಯಾಂಗ್​ ರೇಪ್​ ಸೇರಿ ಐಪಿಸಿಯ ಹಲವು ಸೆಕ್ಷನ್​ಗಳ ಅಡಿಯಲ್ಲಿ ದೂರು ದಾಖಲಾಗಿದೆ. ಶುಕ್ರವಾರದಂದು ಪ್ರಕರಣದ ಎಫ್​ಐಆರ್​ ದಾಖಲಾಗಿದ್ದು, ಯುವತಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts