More

    ವರ್ಷದಲ್ಲಿ ಬಿಜೆಪಿಗೆ ಎರಡು ಅಗ್ನಿಪರೀಕ್ಷೆ!

    ಅರವಿಂದ ಅಕ್ಲಾಪುರ ಶಿವಮೊಗ್ಗ
    ರಾಜಕೀಯವೇ ಹಾಗೆ. ನಿನ್ನೆಯಂತೆ ಇಂದು, ಇಂದಿನಂತೆ ನಾಳೆಯಿರುತ್ತದೆ ಎನ್ನುವಂತಿಲ್ಲ. ಇಲ್ಲಿ ಬೆಳವಣಿಗೆಗಳು ನಿರಂತರ. ಇತಿಹಾಸ ಪುನರಾವರ್ತನೆಯಾಗುತ್ತದೆ ಎಂಬುದಕ್ಕೆ ಈ ಕ್ಷೇತ್ರದ ಹಲವು ಬೆಳವಣಿಗೆಗಳು ನಿದರ್ಶನ. ಜಿಲ್ಲಾ ಬಿಜೆಪಿ ವಿಷಯದಲ್ಲಿ ಈ ಎಲ್ಲ ವಿಷಯಗಳೂ ಅನ್ವಯವಾಗುತ್ತವೆ.
    ಕಳೆದ ವರ್ಷ ವಿಧಾನಸಭೆ ಚುನಾವಣೆ ಸಂದರ್ಭ ಉಂಟಾಗಿದ್ದ ಗೊಂದಲಗಳು ಈಗ ಲೋಕಸಭೆ ಚುನಾವಣೆಯಲ್ಲೂ ಪುನರಾವರ್ತನೆ ಆಗುತ್ತಿವೆ. ಆದರೆ ವ್ಯಕ್ತಿಗಳು ಬೇರೆ. ಪರಿಣಾಮ ಮಾತ್ರ ಒಂದೇ. ವರ್ಷದ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದೊಳಗೇ ಇದ್ದು ಆಯನೂರು ಮಂಜುನಾಥ್ ಬಿಜೆಪಿ ಮುಖಂಡರನ್ನು ಕಾಡಿದಂತೆ ಈಗ ಕೆ.ಎಸ್.ಈಶ್ವರಪ್ಪ ಅವರ ಮುನಿಸು ಬಿಜೆಪಿಯನ್ನು ಸುಡುತ್ತಿದೆ. ಪಕ್ಷದ ಮೊದಲ ಹಂತದ ನಾಯಕರ ನಡೆ ಪಕ್ಷದ ಪಾಲಿಗೆ ಬಿಸಿ ತುಪ್ಪ.
    ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಬಯಸಿದ್ದ ಆಯನೂರು ಮಂಜುನಾಥ್ ನೇರಾ ನೇರಾ ಪ್ರಹಾರ ನಡೆಸಿದ್ದು ಕೆ.ಎಸ್.ಈಶ್ವರಪ್ಪ ಅವರ ಮೇಲೆ. ಇವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಆಯನೂರು ಮಾಡಿದ್ದ ಪೋಸ್ಟ್‌ಗಳು ಸಾಕಷ್ಟು ಸದ್ದು ಮಾಡಿದ್ದವು.
    ಬಿಜೆಪಿಯಲ್ಲಿ ಇದ್ದುಕೊಂಡೇ ಪ್ರತ್ಯೇಕ ಕಚೇರಿ ತೆರೆದು ನಿರಂತರವಾಗಿ ಸುದ್ದಿಗೋಷ್ಠಿ ನಡೆಸಿ ಈಶ್ವರಪ್ಪ ಮೇಲೆ ಆಯನೂರು ಮಂಜುನಾಥ್ ಟೀಕೆಗಳ ಸುರಿಮಳೆಗೈದಿದ್ದರು. ಆಗಲೂ ಜಿಲ್ಲಾ ಬಿಜೆಪಿ ನಾಯಕರು ಅದನ್ನು ಅಸಹಾಯಕರಾಗಿ ನೋಡುವಂತಾಯಿತು. ಈಗಲೂ ಅದೇ ಕಾದು ನೋಡುವ ಸ್ಥಿತಿಯಿದೆ.
    ಆಯನೂರು ಮಂಜುನಾಥ್ ರಾಜಕೀಯ ಹಾದಿಗೂ ಈಶ್ವರಪ್ಪನವರು ಸಾಗಿ ಬಂದ ದಾರಿಗೂ ವ್ಯತ್ಯಾಸವಿದೆ. ಆಯನೂರು ಕಳೆದ ವರ್ಷ ಈಶ್ವರಪ್ಪ ವಿರುದ್ಧ ಸಮರ ಸಾರುವುದಕ್ಕೂ 20 ವರ್ಷಗಳ ಹಿಂದೆಯೇ ಒಮ್ಮೆ ಬಿಜೆಪಿಯಿಂದ ಹೊರ ಹೋಗಿ ಮತ್ತೆ ಬಿಜೆಪಿಗೆ ಮರಳಿದ್ದರು. ಆದರೆ ಈಶ್ವರಪ್ಪ ಅವರದು ಬಿಜೆಪಿಯೊಂದಿಗೆ ನಿಕಟ ಸಂಬಂಧ. ಹೀಗಾಗಿ ಅವರ ನಡೆ ಬಿಜೆಪಿಗೆ ಕೊಂಚ ಆಘಾತ ಉಂಟು ಮಾಡಿರುವುದು ನಿಜ.
    ಕ್ರಮ ಸಾಧ್ಯವಾಗಲೇ ಇಲ್ಲ: ಕಳೆದ ವರ್ಷ ವಿಧಾನಸಭೆ ಚುನಾವಣೆಗೂ ಮುನ್ನ ಪಕ್ಷದೊಳಗೆ ಇದ್ದುಕೊಂಡೇ ಕೆ.ಎಸ್.ಈಶ್ವರಪ್ಪ ಅವರನ್ನು ಇನ್ನಿಲ್ಲದಂತೆ ಟೀಕಿಸಿದ ಆಯನೂರು ಮಂಜುನಾಥ್ ವಿರುದ್ಧ ಕೊನೆಗೂ ಬಿಜೆಪಿ ಶಿಸ್ತುಕ್ರಮ ಕೈಗೊಳ್ಳಲೇ ಇಲ್ಲ. ಅವರೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಿದರು. ಈಶ್ವರಪ್ಪ ಅವರ ಕೆಲ ಆಪ್ತರಷ್ಟೇ ಆಯನೂರು ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದರು. ಪಕ್ಷದಿಂದ ಕಡೇಪಕ್ಷ ನೋಟಿಸ್ ಕೂಡಾ ಜಾರಿಯಾಗಲಿಲ್ಲ.
    ಈಗಲೂ ಅದೇ ಸ್ಥಿತಿ:ಕೆ.ಎಸ್.ಈಶ್ವರಪ್ಪ ಲೋಕಸಭೆ ಚುನಾವಣೆಗೆ ಪಕ್ಷೇತರವಾಗಿ ಕಣಕ್ಕಿಳಿಯುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಸಭೆಗಳನ್ನೂ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಮಾತ್ರ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ಬಹುಶಃ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ನಡೆಯುವವರೆಗೂ ಯಾವುದೇ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ಬಿಜೆಪಿಯಿಲ್ಲ. ಪಕ್ಷಕ್ಕೆ ಒಂದು ಚೌಕಟ್ಟಿದೆ ಎನ್ನುತ್ತಲೇ ಆ ಚೌಕಟ್ಟನ್ನು ವಿಸ್ತರಿಸಲಾಗುತ್ತಿದೆ.
    ಬಿಜೆಪಿಯ ಜಾಣ ನಡೆ:ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ನಾನು ಬರುವುದಿಲ್ಲ ಎಂದು ಈಶ್ವರಪ್ಪ ಬಹಿರಂಗವಾಗಿ ಹೇಳಿದ್ದರೂ ಬ್ಯಾನರ್‌ಗಳಲ್ಲಿ ಅವರ ಫೋಟೋ ಇರುವಂತೆ ನೋಡಿಕೊಳ್ಳಲಾಯಿತು. ಈಗಲೂ ಬಿಜೆಪಿ ಕಾರ್ಯಾಲಯದಲ್ಲಿ ದೊಡ್ಡ ಪೋಸ್ಟರ್‌ನಲ್ಲಿ ಈಶ್ವರಪ್ಪ ಭಾವಚಿತ್ರಕ್ಕೆ ಎರಡನೇ ಸ್ಥಾನ ನೀಡಲಾಗಿದೆ. ಆ ಮೂಲಕ ಬಿಜೆಪಿ ಮುಖಂಡರು ಜಾಣ ನಡೆ ಅನುಸರಿಸುತ್ತಿದ್ದಾರೆ. ಸಂಘಟನೆಗೆ ಈಶ್ವರಪ್ಪ ನೀಡಿದ ಕೊಡುಗೆ, ಅವರು ಪಕ್ಷವನ್ನು ಕಟ್ಟಿ ಬೆಳೆಸಿದ ಪರಿಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಅದೇ ರೀತಿ ಅವರ ಪಕ್ಷನಿಷ್ಠೆ, ತತ್ವ, ಸಿದ್ಧಾಂತದ ಪ್ರತಿಪಾದನೆಯೂ ಪ್ರಶ್ನಾತೀತ. ಹೀಗಾಗಿಯೇ ಬಿಜೆಪಿ ಮುಖಂಡರು ಕಾದು ನೋಡಲು ನಿರ್ಧರಿಸಿದ್ದಾರೆ. ಚುನಾವಣೆ ಪ್ರಕ್ರಿಯೆ ಆರಂಭದೊಳಗೆ ಸುಖಾಂತ್ಯವಾಗಲಿದೆ ಎಂಬ ವಿಶ್ವಾಸ ಆ ಪಕ್ಷದಲ್ಲಿದೆ. ನಿರೀಕ್ಷೆ ಎಷ್ಟರ ಮಟ್ಟಿಗೆ ಸಾಕಾರಗೊಳ್ಳಲಿದೆ ಎಂಬುದು ಸದ್ಯದ ಪ್ರಶ್ನೆ.
    ಪಾಲಿಕೆ ಮೇಲೆ ಪರಿಣಾಮ:ಕಳೆದ ವರ್ಷ ಆಯನೂರು ಮಂಜುನಾಥ್ ಬಿಜೆಪಿಯಿಂದ ಹೊರಬರುವಾಗ ಅವರೊಂದಿಗೆ ಪಕ್ಷ ತೊರೆದ ಪ್ರಮುಖ ಮುಖಂಡರ ಸಂಖ್ಯೆ ತೀರಾ ಕಡಿಮೆ. ಆದರೆ ಈಶ್ವರಪ್ಪ ಅವರ ವಿಷಯದಲ್ಲಿ ಹಾಗಿಲ್ಲ. ಈಗ ಅವರೊಟ್ಟಿಗೆ ಪಾಲಿಕೆಯ ಮಾಜಿ ಮೇಯರ್‌ಗಳು, ಮಾಜಿ ಉಪಮೇಯರ್‌ಗಳು, ಏಳೆಂಟು ಮಾಜಿ ಸದಸ್ಯರೂ ಇದ್ದಾರೆ. ಇದರಲ್ಲಿ ಅನೇಕರು ಪಕ್ಷದೊಳಗೆ ಜವಾಬ್ದಾರಿಯನ್ನೂ ಹೊಂದಿದ್ದಾರೆ. ಈಗ ಶಿಸ್ತು ಕ್ರಮ ಕೈಗೊಳ್ಳುವುದೇ ಆದರೆ ಇವರೆಲ್ಲರೂ ವ್ಯಾಪ್ತಿಯೊಳಗೆ ಬರುತ್ತಾರೆ. ಅದು ಇನ್ನು ಕೆಲವೇ ತಿಂಗಳಲ್ಲಿ ಎದುರಾಗಲಿರುವ ನಗರ ಪಾಲಿಕೆ ಚುನಾವಣೆ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಜಿಲ್ಲಾ ಬಿಜೆಪಿ ಧರ್ಮಸಂಕಟಕ್ಕೆ ಸಿಲುಕಿದೆ.
    ಕಾಲವೇ ನಿರ್ಣಯಿಸಲಿದೆ:ನಾನು ಕೂಡಾ ಈಶ್ವರಪ್ಪ ಅವರೊಂದಿಗೆ ಮಾತನಾಡಿದ್ದೇನೆ. ಅವರ ಅಭಿಪ್ರಾಯ ತಿಳಿಸಿದ್ದಾರೆ. ಅದನ್ನು ನಾನು ಪಕ್ಷದ ಹಿರಿಯರ ಜತೆ ಚರ್ಚಿಸಿದ್ದೇನೆ. ಅವರು ತೀರ್ಮಾನ ಬದಲಿಸಲು ಇನ್ನೂ ಕಾಲಾವಕಾಶವಿದೆ. ಒಂದೊಮ್ಮೆ ಅವರು ಸ್ವತಂತ್ರವಾಗಿ ಸ್ಪರ್ಧಿಸುವುದೇ ಆದರೆ ಪಕ್ಷ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ಅವರನ್ನು ನಮ್ಮ ಅನೇಕ ಮುಖಂಡರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಚುನಾವಣೆಗೂ ಮುನ್ನ ಎಲ್ಲವೂ ಸರಿಯಾಗಲಿದೆ ಎಂದು ಟಿ.ಡಿ.ಮೇಘರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts