More

    ಒಬಿಸಿಯಲ್ಲಿ ಮತ್ತೆರಡು ವರ್ಗ ವಿಂಗಡಣೆ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ನಿಗದಿ ವಿಚಾರ

    ಬೆಂಗಳೂರು: ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಶೇ.33 ರಷ್ಟು ರಾಜಕೀಯ ಮೀಸಲಾತಿ ಕೊಡಬೇಕು ಹಾಗೂ ಎ ಮತ್ತು ಬಿ ವರ್ಗೀಕರಣವನ್ನು ಮತ್ತೆರಡು ವರ್ಗಗಳಾಗಿ ವಿಂಗಡಿಸಬೇಕು ಎಂದು ಎಂದು ನ್ಯಾ. ಭಕ್ತವತ್ಸಲ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

    ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಇತರೆ ಹಿಂದುಳಿದ ವರ್ಗಗಳಿಗೆ ಯಾವ ಆಧಾರದಲ್ಲಿ ಮೀಸಲಾತಿ ನೀಡಲಾಗಿದೆ ಎಂದು ಪ್ರಶ್ನಿಸಿ ಸದಸ್ಯರ ಆಯ್ಕೆಯನ್ನೇ ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಸೂಕ್ತ ವೈಜ್ಞಾನಿಕ ಅಧ್ಯಯನ ನಡೆಸಿ ಮೀಸಲಾತಿ ನೀಡುವಂತೆ ಸೂಚಿಸಿತ್ತು. ಆದ್ದರಿಂದ ರಾಜ್ಯ ಸರ್ಕಾರ ನ್ಯಾ. ಭಕ್ತವತ್ಸಲ ಸಮಿತಿ ರಚನೆ ಮಾಡಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಾ. ಕೆ. ಭಕ್ತವತ್ಸಲ, ಸದಸ್ಯ ನಿವೃತ್ತ ಐಎಎಸ್ ಅಧಿಕಾರಿ ಸಿ.ಆರ್.ಚಿಕ್ಕಮಠ ವರದಿ ಸಲ್ಲಿಸಿದರು.

    ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ಜನರಿಗೆ ನಿಖರ ಅಂಕಿ-ಅಂಶಗಳ ಸಮೇತ ಪರಿಶೀಲನೆ ನಡೆಸಿ ರಾಜಕೀಯ ಮೀಸಲಾತಿ ನಿಗದಿ ಪಡಿಸಲು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದ ಅನ್ವಯ ಸರ್ಕಾರ ಈ ಆಯೋಗ ರಚಿಸಿತ್ತು. ಹಿಂದುಳಿದ ವರ್ಗಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ತಲರ್ಸ³ ಅಧ್ಯಯನ ಮಾಡಿ ಆಯೋಗ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದ್ದು, ಕೆಲ ಸಲಹೆಗಳನ್ನು ನೀಡಿದೆ.

    ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ವರ್ಗ ಎ ಮತ್ತು ವರ್ಗ ಬಿ ಅನ್ನು ಮತ್ತೆ ಎರಡು ವರ್ಗಗಳಾಗಿ ವರ್ಗೀಕರಿಸುವ ಬಗ್ಗೆ ಪರಿಶೀಲಿಸಬಹುದು ಎಂದು ವರದಿ ಹೇಳಿದೆ. 2027-2028ರಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಮೊದಲು ಅಲ್ಪಸಂಖ್ಯಾತರು ಮತ್ತು ಒಬಿಸಿಗಳ ಪರಿಣಾಮಕಾರಿ ಮೀಸಲಾತಿ ಉದ್ದೇಶಕ್ಕಾಗಿ ಇದು ಅಗತ್ಯ ಎಂದು ಅಭಿಪ್ರಾಯಪಟ್ಟಿದೆ.

    ಅಲ್ಪಸಂಖ್ಯಾತರು ಒಳಗೊಂಡಂತೆ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.44.4 ರಷ್ಟು ಸಮುದಾಯಗಳನ್ನು ಒಬಿಸಿ ಒಳಗೊಂಡಿದೆ ಎಂದು ವರದಿ ಪರಿಗಣಿಸಿದೆ. ಆದರೆ ಶೇ.33 ರಷ್ಟು ಮೀಸಲಾತಿ ನೀಡಬೇಕು. ಮೀಸಲಾತಿಯ ಪ್ರಮಾಣ ಶೇ.50 ರಷ್ಟು ಮೀರಬಾರದೆಂದು ಸ್ಪಷ್ಟಪಡಿಸಿದೆ.

    ಮುಸ್ಲಿಂ ಸಮುದಾಯಕ್ಕೆ ಲಾಭ: ಮುಸ್ಲಿಂ ಸಮುದಾಯವನ್ನು ಹೊರತುಪಡಿಸಿ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜಕೀಯ ಮೀಸಲಾತಿ ಲಾಭ ಪಡೆಯಲು ಸಾಧ್ಯವಾಗಿಲ್ಲ. 1996, 2001, 2010 ಮತ್ತು 2015ರಲ್ಲಿ ನಡೆದ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆತಿದೆ ಎಂಬ ಅಂಶವನ್ನು ಆಯೋಗ ಬಹಿರಂಗಪಡಿಸಿದೆ. ಇತರ ಹಿಂದುಳಿದ ವರ್ಗಗಳು ಇನ್ನೂ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿವೆ. ಆದ್ದರಿಂದ, ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಈ ವರ್ಗಗಳ ಪರವಾಗಿ (ಅಲ್ಪಸಂಖ್ಯಾತರನ್ನು ಒಳಗೊಂಡಂತೆ) ಒಟ್ಟು ಸ್ಥಾನಗಳ 1/3 (ಶೇ.33) ಮೀಸಲಾತಿ ಒದಗಿಸುವುದು ಸಮರ್ಥನೀಯ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

    ಆಯೋಗದ ಸಲಹೆಗಳು

    • ಒಬಿಸಿಗಳಿಗೆ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಟ್ಟು ಸ್ಥಾನಗಳ 1/3 (ಶೇ.33) ರಾಜಕೀಯ ಮೀಸಲಾತಿಯ ನೀತಿ ಒದಗಿಸುವುದನ್ನು ಮುಂದುವರಿಸಬೇಕು.
    • ಒಬಿಸಿ-ಎ ಮತ್ತು ಬಿ ಮತ್ತು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಸೇರಿ ಮೀಸಲಾತಿಯ ಒಟ್ಟು ಮೊತ್ತವು ಒಟ್ಟು ಸ್ಥಾನಗಳ ಶೇ.50 ಕ್ಕಿಂತ ಹೆಚ್ಚಿರಬಾರದು.
    • ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಗಳ ಪರವಾಗಿ ಬಿಬಿಎಂಪಿಯಲ್ಲಿ ಮೇಯರ್ ಮತ್ತು ಉಪಮೇಯರ್ ಹುದ್ದೆಗಳನ್ನು ಮೀಸಲಿಡುವುದನ್ನು ಪರಿಗಣಿಸಬೇಕು.
    • ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಭಾಗವನ್ನು ಡಿಪಿಎಆರ್ ನಿಯಂತ್ರಣಕ್ಕೆ ತರಬೇಕು.
    • ಬಿಬಿಎಂಪಿ ಕಾಯ್ದೆ ತಿದ್ದುಪಡಿ ತಂದು ಮೇಯರ್, ಉಪ ಮೇಯರ್ ಅವಧಿ 30 ತಿಂಗಳು ನಿಗದಿ ಮಾಡಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts