ಬಂಟ್ವಾಳ/ಕೋಟ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗುರುವಾರ ರಾತ್ರಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ.
ಬ್ರಹ್ಮಾವರ ತಾಲೂಕಿನ ವಂಡಾರಿನ ಬೋರ್ಡಕಲ್ಲಿನ ನಿವಾಸಿ ಸಾಫ್ಟ್‌ವೇರ್ ಇಂಜಿನಿಯರ್ ಚೇತನ್ (24) ಹಾಗೂ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಸಾರ್ಥಕೋಡಿ ನಿವಾಸಿ ಚಂದಪ್ಪ ಮೂಲ್ಯ(64) ಮೃತರು.
ಚೇತನ್ ಮನೆಯೊಳಗೆ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲಿನ ಆಘಾತವಾಗಿದ್ದು, ಗಂಭೀರವಾಗಿ ಅಸ್ವಸ್ಥಗೊಂಡವರನ್ನು ತಕ್ಷಣ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಿ ಮೃತಪಟ್ಟಿದ್ದರು. ಬೆಂಗಳೂರಿನ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಚೇತನ್, ಕರೊನಾ ಬಳಿಕ ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದರು.
ಚಂದಪ್ಪ ಮೂಲ್ಯ ಮನೆಯಲ್ಲಿ ಮಲಗಿದ್ದ ವೇಳೆ ರಾತ್ರಿ 12.30ರ ಸುಮಾರಿಗೆ ಸಿಡಿಲು ಬಡಿದಿದ್ದು, ಗಂಭೀರ ಗಾಯಗೊಂಡಿದ್ದರು. ಕೂಡಲೆ ಆಸ್ಪತ್ರೆಗೆ ಸಾಗಿಸಿದರೂ ಬದುಕಿಸುವುದು ಸಾಧ್ಯವಾಗಲಿಲ್ಲ. ಸಿಡಿಲಿನ ಹೊಡೆತಕ್ಕೆ ಮನೆಗೂ ಹಾನಿಯಾಗಿದೆ.