More

    ಎರಡು ದಿನ ದಲಿತ ಸಾಹಿತ್ಯ ಸಮ್ಮೇಳನ

    ವಿಜಯಪುರ: ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29,30ರಂದು ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಹೇಳಿದರು.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಉಪನ್ಯಾಸಕರು ಹಾಗೂ ನಾಡಿನ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಚಿಂತನೆಯ ಲೇಖಕರು, ಸಾಹಿತಿಗಳು ವಿವಿಧ ಗೋಷ್ಠಿಯಲ್ಲಿ ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ. ದಲಿತ ಸಾಹಿತ್ಯ ಪರಿಷತ್ ಯಾವುದೇ ಒಂದು ಸಮಾಜಕ್ಕೆ ಸೀಮಿತವಾದುದ್ದಲ್ಲ. ಇದು ತುಳಿತಕ್ಕೊಳಗಾದ ಎಲ್ಲ ಸಮಾಜಗಳ ಧ್ವನಿಯಾಗಿ ಕೆಲಸ ಮಾಡುತ್ತದೆ. 29 ವರ್ಷದಿಂದ ನಿರಂತರ ರಾಜ್ಯದಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಚಿಂತನೆ ಪ್ರಸಾರ ಮಾಡುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಬೆಳ್ಳಿ ಸಂಭ್ರಮದ ನಿಮಿತ್ತ ವಿಜಯಪುರದಲ್ಲಿ ಎರಡು ದಿನ ಹಮ್ಮಿಕೊಂಡಿರುವ ಸಮ್ಮೇಳನ ಬಹು ವೈಶಿಷ್ಟೃ ಹೊಂದಿದೆ ಎಂದರು.
    ಸಮ್ಮೇಳನದ ಮೊದಲ ದಿನ ಜು.29ರಂದು ಬೆಳಗ್ಗೆ 8 ಗಂಟೆಗೆ ಕಂದಗಲ್ ಹನುಮಂತರಾಯ ರಂಗಮಂದಿರದ ಮುಂದೆ ಸಾಹಿತಿ ದೊಡ್ಡಣ್ಣ ಭಜಂತ್ರಿ ಪರಿಷತ್ ಧ್ವಜಾರೋಹಣ ನೆರವೇರಿಸಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ರಮೇಶ ಆಸಂಗಿ, ಅಭಿಷೇಕ ಚಕ್ರವರ್ತಿ ಭಾಗವಹಿಸಲಿದ್ದಾರೆ ಎಂದರು.

    ಅಂದು ಬೆಳಗ್ಗೆ 8.30ಕ್ಕೆ ನಗರದ ಗಾಂಧಿ ವೃತ್ತದಿಂದ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ನಡೆಯಲಿರುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ನಾಗಠಾಣ ಕ್ಷೇತ್ರದ ಮಾಜಿ ಶಾಸಕ ರಾಜು ಆಲಗೂರ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿ ಸಂಚಾಲಕ ಅಡಿವೆಪ್ಪ ಸಾಲಗಲ್, ಚಂದ್ರಕಾಂತ ಸಿಂಗೆ, ಶೇಷರಾವ್ ಮಾನೆ ಭಾಗವಹಿಸಲಿದ್ದಾರೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಮ್ಮೇಳನದ ಉದ್ಘಾಟನೆ ನೆರವೇರಿಸಲಿದ್ದಾರೆ. ಬುದ್ಧ ವಿಹಾರದ ಸಂಘಪಾಲ ಬಂತೇಜಿ ನೇತೃತ್ವ ವಹಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರು ರಮಾಸಾಹೇಬ ಕಿರು ಚಿತ್ರ ಹಾಗೂ ಪರಿಷತ್ ಗ್ರಂಥ ಬಿಡುಗಡೆ ಮಾಡಲಿದ್ದಾರೆ ಎಂದರು.

    ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ. ಸಾಗರ ಸರ್ವಾಧ್ಯಕ್ಷರ ಪುಸ್ತಕ ಮಳಿಗೆ ಉದ್ಘಾಟನೆ ನೆರವೇರಿಸಲಿದ್ದಾರೆ. ದ.ಸಾ.ಪ. ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುಕಾರಾಮ ಚಂಚಲಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ಲೇಖಕಿಯರ ಸಂಘದ ಅಧ್ಯಕ್ಷೆ ಹೇಮಲತಾ ವಸದ ಭಾಗವಹಿಸಲಿದ್ದಾರೆ ಎಂದರು.
    ಜು.30ರಂದು ಬೆಳಗ್ಗೆ 10 ಗಂಟೆಗೆ ಬೆಳ್ಳಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

    ಕನ್ನಡ ವಿವಿ ಪ್ರಾಧ್ಯಾಪಕ ಡಾ. ಚಲುವರಾಜು ಅಭಿನಂದನ ನುಡಿ ಆಡಲಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನ ವಿವಿಧ ಭಾಗದ ಸಾಹಿತಿಗಳಾದ ಆರ್. ದೊಡ್ಡೇಗೌಡ, ವೀರ ಹನುಮಾನ, ಶ್ರೀಶೈಲ ನಾಗರಾಳ, ಡಾ. ಗವಿಸಿದ್ದಪ್ಪ ಪಾಟೀಲ, ಮುರ್ತುಜಾ ಬೇಗಂ ಕೊಡಗಲಿ, ಹಾರೋಹಳ್ಳಿ ರವೀಂದ್ರ, ಪರುಶರಾಮ ಶಿವಶರಣ, ನರೇಂದ್ರ ನಾಗವಾಲ, ಮಳ್ಳೂರ ಶಿವಮಲ್ಲು, ಡಾ. ಸಂಜೀವಕುಮಾರ ಮಾಲಗತ್ತಿ, ರಾಜು ವಿಜಯಪುರ, ಸೌಜನ್ಯ ಕರಡೋಣಿ, ಸಿ.ಆರ್. ನಟರಾಜ, ದೇವು ಅಂಬಿಗ ಅವರಿಗೆ ದಲಿತ ಸಾಹಿತ್ಯ ಪರಿಷತ್ ಬೆಳ್ಳಿ ಸಂಭ್ರಮದ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಂಜೆ 7 ಗಂಟೆಗೆ ಜೀವನ ಸಿನಿ ಕ್ರಿಯೇಷನ್ಸ್ ಅರ್ಪಿಸುವ ರಮಾಸಾಹೇಬ ಕಿರುಚಿತ್ರ ಪ್ರದರ್ಶನ ಜರುಗಲಿದೆ ಎಂದರು.

    ಮಧ್ಯಾಹ್ನ 1 ಗಂಟೆಗೆ ಹೊಸ ತಲೆಮಾರಿನ ದಲಿತ ಸಾಹಿತ್ಯ, ಸಂಸ್ಕೃತಿ, ಸಮಸ್ಯೆ, ಸವಾಲುಗಳ ವಿಚಾರ ಸಂಕಿರಣ ನಡೆಯಲಿದೆ.
    ಮಧ್ಯಾಹ್ನ 2-30ಕ್ಕೆ ಕಾವ್ಯ ಸಂಭ್ರಮ 2 ನಡೆಯಲಿದೆ. ಅಧ್ಯಕ್ಷತೆಯನ್ನು ಡಾ. ಜಯದೇವಿ ಗಾಯಕವಾಡ ವಹಿಸಲಿದ್ದಾರೆ ಎಂದರು.
    ದ.ಸಾ.ಪ ರಾಜ್ಯ ಘಟಕದ ಖಜಾಂಚಿ ಡಾ.ಎಚ್. ಬಿ. ಕೋಲಕಾರ, ಕಾರ್ಯದರ್ಶಿ ಸುಭಾಷ ಹುದ್ಲೂರ, ಸಮ್ಮೇಳನದ ಸಂಯೋಜ, ದ.ಸಾ.ಪ ಜಿಲ್ಲಾಧ್ಯಕ್ಷ ಬಸವರಾಜ ಜಾಲವಾದಿ, ತಾಲೂಕು ದ.ಸಾ.ಪ ಅಧ್ಯಕ್ಷೆ ಡಾ. ಪೂರ್ಣಿಮಾ ದಾಮಣ್ಣವರ, ವಿಭಾಗೀಯ ಅಧ್ಯಕ್ಷೆ ಡಾ. ಸುಜಾತಾ ಚಲವಾದಿ, ಸಾಹಿತಿ ದೊಡ್ಡಣ್ಣ ಭಜಂತ್ರಿ, ಎಸ್‌ಸಿ,ಎಸ್‌ಟಿ ನೌಕರ ಸಂಘದ ಅಧ್ಯಕ್ಷ ಬಿ.ಎಚ್. ನಾಡಗೇರಿ, ಸುರೇಖಾ ರಾಠೋಡ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts