More

    ತುರುವೇಕೆರೆಯ ಮನಮೋಹಕ ಗಂಗಾಧರೇಶ್ವರ!

    ತುಮಕೂರು: ತುರುವೇಕೆರೆ ದೇವಾಲಯಗಳ ನಗರ ಎಂದೇ ಪ್ರಖ್ಯಾತವಾಗಿದೆ. ಹಳೇ ಪಟ್ಟಣದ ಅಗ್ರಹಾರದಲ್ಲಿರುವ ಎರಡು ಹೊಯ್ಸಳ ವಾಸ್ತುಶಿಲ್ಪಗಳಾದ ಚೆನ್ನಕೇಶವ ಹಾಗೂ ಮೂಲೇಶಂಕರೇಶ್ವರ ದೇವಾಲಯಗಳ ನಡುವೆ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಗಂಗಾಧರೇಶ್ವರ ದೇವಾಲಯ ಅನೇಕ ವೈಶಿಷ್ಟ್ಯಗಳಿಂದ ಕೂಡಿದೆ.

    16ನೇ ಶತಮಾನದಲ್ಲಿ ನಿರ್ಮಾಣವಾಗಿರುವ ದೇವಾಲಯ ಭಕ್ತರ ಪಾಲಿಗೆ ಬೇಡಿದ್ದನ್ನು ಈಡೇರಿಸುವ ಸ್ಥಳವಾಗಿದೆ. ನಿತ್ಯ ನೂರಾರು ಭಕ್ತರು ದರ್ಶನ ಪಡೆದು ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವುದು ವಾಡಿಕೆಯಾಗಿದೆ.ಹಾಗಲವಾಡಿ ಪಾಳೇಗಾರ ಅಯ್ಯಣ್ಣ ನಾಯಕ ದೇವಸ್ಥಾನ ಕಟ್ಟಿಸಿದನೆಂಬ ಉಲ್ಲೇಖವಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಯ್ಯಣ್ಣ ನಾಯಕ ದಂಪತಿ ವಿಗ್ರಹಗಳು ದೇವಾಲಯದ ಮುಂದಿರುವ ಕಲ್ಲಿನ ದೀಪಸ್ತಂಭದ ಮೇಲೆ ಈಗಲೂ ಇವೆ.

    ಗರ್ಭಗೃಹದಲ್ಲಿರುವ ಮೂಲಲಿಂಗ ಗಂಗಾಧರೇಶ್ವರ ಎಂದೇ ಪ್ರಖ್ಯಾತವಾಗಿದೆ. ಇಲ್ಲಿರುವ ಲಿಂಗ ವಿಶಿಷ್ಟ ರೀತಿಯಲ್ಲಿ ಕೆತ್ತಲ್ಪಟ್ಟಿದೆ. ಶಿವಲಿಂಗದ ಶಿಲ್ಪದಲ್ಲಿ ಗಂಗಾಧರೇಶ್ವರನನ್ನು ಅಕ್ಷರಶಃ ಗಂಗಾಧರನನ್ನಾಗಿಸಿದ ಮೂರ್ತ ರೂಪ ತುಂಬಾ ಅಪರೂಪ. ಪಾರ್ಶ್ವಗೋಲಾಕಾರದಲ್ಲಿ ಇರಬೇಕಾದ ಲಿಂಗದ ಮೇಲ್ಭಾಗದಲ್ಲಿ ಶಿವನ ಶಿರೋಭಾಗ ಜಟೆಯಿಂದ ಕೂಡಿದೆ. ಜಟೆಯ ಒಳಭಾಗ ಕಾಣುವ ಹಾಗೆ ಜಟೆಯನ್ನು ಗುಹೆಯಂತೆ ಕೆತ್ತಲಾಗಿದ್ದು, ಅದರೊಳಗೆ ಗಂಗೆಯು ಜಪ ಮಾಲೆ ಹಿಡಿದು ಧ್ಯಾನಸ್ಥಳಾಗಿದ್ದಾಳೆ. ಜಟೆಯಲ್ಲಿ 27 ಸುರುಳಿಗಳಿದ್ದು, ಅವು 27 ನಕ್ಷತ್ರಗಳನ್ನು ಸಂಕೇತಿಸುವಂತೆಯೂ, ಜಟೆಯ ಬಲಪಾರ್ಶ್ವದಲ್ಲಿ ಸೂರ್ಯನೂ, ಎಡಪಾರ್ಶ್ವದಲ್ಲಿ ಚಂದ್ರನೂ ಇರುವಂತೆಯೂ ಕೆತ್ತಲಾಗಿದೆ.
    ಗರ್ಭಗೃಹದ ಮುಂದಿನ ಸುಕನಾಸಿಯಲ್ಲಿ ಶಿವನ ಜತೆ ಪಾರ್ವತಿ ಮತ್ತು ದಾಕ್ಷಾಯಿಣಿ ವಿಗ್ರಹಗಳು ವಿರಾಜಮಾನರಾಗಿರುವ ಉತ್ಸವ ಮೂರ್ತಿಗಳಿವೆ.

    ಮುಖದ್ವಾರದ ಬಲಕ್ಕೆ ಭವಾನಿ ಅಮ್ಮನವರ ದೇವಾಲಯವಿದೆ. ಗಂಗಾಧರೇಶ್ವರ ಮತ್ತು ಭವಾನಿ ದೇವಾಲಯಗಳನ್ನು ಸ್ಥಳೀಯ ಸುರಭಿ ಸಂಗಮ ಎಂಬ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ಹಲವು ಇಲಾಖೆಗಳ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಜೀರ್ಣೋದ್ಧಾರ ಮಾಡಿದೆ. ಈಗ ಪುರಾತತ್ವ ಇಲಾಖೆ ಎರಡನೇ ಹಂತದ ಜೀರ್ಣೋದ್ಧಾರ ಕೈಗೆತ್ತಿಕೊಂಡಿದೆ. ಇಲ್ಲಿ ಸಾಕಷ್ಟು ಮೂಲಸೌಕರ್ಯ ಕಲ್ಪಿಸುವ ಜತೆಗೆ ಪ್ರವಾಸೋದ್ಯಮ ಇಲಾಖೆ ಪ್ರಚಾರಕ್ಕೆ ಒತ್ತು ನೀಡಬೇಕಿದೆ.

    ಗಂಟೆಯ ಕಂಚಿನ ಶಬ್ದ ತರಂಗಗಳು!
    ಶಿವನ ಬಲಪಾದದ ಮೇಲೆ ಒಂದು ಕಣ್ಣು ಇರುವಂತೆ ಕೆತ್ತಲಾಗಿದೆ, ನವರಂಗ ಮಂಟಪದ ಪೂರ್ವ ದಿಕ್ಕಿನಲ್ಲಿ ಗುಡಿಗೆ ಹೊಂದಿಕೊಂಡಂತೆ ಗಂಟೆ ಮಂಟಪವಿದೆ. ಇಲ್ಲಿರುವ ಬಳಪದ ಬೃಹತ್ ಗಂಟೆ ನೋಡುಗರನ್ನು ಅಚ್ಚರಿಗೊಳಿಸುತ್ತದೆ. ಇದನ್ನು ತಾಡನ ಮಾಡಿದರೆ ಉಂಟಾಗುವ ಕಂಚಿನ ಶಬ್ದ ಬೆರಗುಗೊಳಿಸುತ್ತದೆ.

    ಸಾಲಿಗ್ರಾಮ ಶಿಲೆಯ ‘ನಂದಿ’ ರೂಪ, ಅಪರೂಪ!
    ದೇವಾಲಯ ಪ್ರವೇಶಿಸಿದ ಕೂಡಲೇ ಕಾಣಿಸುವ ನಂದಿ ವಿಗ್ರಹ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಿರುವ ಹೊಳೆಯುವ ಕಪ್ಪು ಕಲ್ಲಿನ ಬೃಹತ್ ನಂದಿ ವಿಗ್ರಹ ಪ್ರಮುಖ ಆಕರ್ಷಣೆಯಾಗಿದೆ. ದೇವಾಲಯದ ಮುಂದಿನ ಪಾತಾಳ ಅಂಕಣದಲ್ಲಿ ಎತ್ತರದ ಜಗುಲಿಯ ಮೇಲೆ 7 ಅಡಿ ಉದ್ದ, 4.6 ಅಡಿ ಅಗಲ, 7 ಅಡಿ ಎತ್ತರ ಇರುವ ನಂದಿಯ ಶಿಲ್ಪದ ಮುಖ ಮತ್ತು ಕೊರಳಿನಲ್ಲಿ ಕುಸುರಿ ಮಾಡಿದ ಅನೇಕ ಶಿಲ್ಪಾಭರಣಗಳನ್ನು, ಮಾಲೆಯಲ್ಲಿ ಶಿವಲಿಂಗವನ್ನೂ ಕೆತ್ತಲಾಗಿದ್ದು, ಶಿಲ್ಪಿಯ ಕಲಾನೈಪುಣ್ಯಕ್ಕೆ ಸಾಕ್ಷಿಯಾಗಿದೆ

    ತಲುಪುವುದು ಹೇಗೆ?
    ಬೆಂಗಳೂರು-ಹಾಸನ ಹೆದ್ದಾರಿಯಲ್ಲಿ ಎಡೆಯೂರಿನಿಂದ ಬಲಕ್ಕೆ ತಿರುಗಿ 25 ಕಿಮೀ ಚಲಿಸಿದರೆ ತುರುವೇಕೆರೆ ತಲುಪಬಹುದು. ಬೆಂಗಳೂರು-ಹೊನ್ನಾವರ ಮಾರ್ಗದಲ್ಲಿ ಬರುವವರು ಕಿಬ್ಬನಹಳ್ಳಿ ಕ್ರಾಸ್‌ನಿಂದ ಮೈಸೂರು ಕಡೆಗೆ 17 ಕಿಮೀ ಸಾಗಿದರೆ ತುರುವೇಕೆರೆ ತಲುಪಬಹುದು. ಶಿವಮೊಗ್ಗ ಮಾರ್ಗವಾಗಿ ಸಂಚರಿಸುವ ಪ್ಯಾಸೆಂಜರ್ ರೈಲಿನಲ್ಲಿ ಬಾಣಸಂದ್ರದಲ್ಲಿ ಇಳಿದು 10 ಕಿಮೀ ಕ್ರಮಿಸಿದರೆ ದೇವಾಲಯಗಳ ನಗರ ತಲುಪಬಹುದು.

    ನೀವೂ ಮಾಹಿತಿ ನೀಡಿ: ಧಾರ್ಮಿಕ-ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವುಳ್ಳ ‘ದೇಗುಲಗಳ ದರ್ಶನ’ ವಿಜಯವಾಣಿ ಪ್ರತಿವಾರ ನಿಮಗೆ ನೀಡುತ್ತಿದೆ. ಈ ಬಗ್ಗೆ ನೀವೂ ನಮಗೆ ಮಾಹಿತಿ ನೀಡಬಹುದು. ಸಂಪರ್ಕಿಸಿ: 8884431912.

    ದೇವಾಲಯಗಳ ನಗರ ಎಂದೇ ಖ್ಯಾತಿ ಗಳಿಸಿರುವ ತುರುವೇಕೆರೆಯ ಪ್ರಮುಖ ಆಕರ್ಷಣೆಯಾಗಿ ಶ್ರೀಗಂಗಾಧರೇಶ್ವರ ದೇವಾಲಯ ಅನೇಕ ವೈಶಿಷ್ಟ್ಯಗಳ ಆಲಯ ಎನಿಸಿದೆ. ಸಾಲಿಗ್ರಾಮ ಶಿಲೆಯ ‘ನಂದಿ’ ರೂಪ, ಅಪರೂಪ, ಗಂಟೆ ಮಂಟಪದಲ್ಲಿ ಗಂಟೆಯ ಸದ್ದು ಕೇಳಲೇಬೇಕು. ಜನರು ಈ ದೇವಾಲಯದ ಸೌಂದರ್ಯ ಸವಿಯಬೇಕು.
    ತುರುವೇಕೆರೆ ಪ್ರಸಾದ್, ಸಾಹಿತಿ, ತುರುವೇಕೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts