More

    ವಹಿವಾಟು ಹೆಚ್ಚಿಸಲು ಕೆಎಂಎಫ್ ಸಂಕಲ್ಪ

    ಬೆಳಗಾವಿ: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)ಯ ವಾರ್ಷಿಕ ಆರ್ಥಿಕ ವಹಿವಾಟನ್ನು 25 ಸಾವಿರ ಕೋಟಿ ರೂಪಾಯಿಗೆ ಹೆಚ್ಚಿಸಲು ಸಂಕಲ್ಪ ಮಾಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

    ಇಲ್ಲಿನ ಮಹಾಂತೇಶ ನಗರದ ಜಿಲ್ಲಾ ಹಾಲು ಒಕ್ಕೂಟದ ಡೇರಿ ಆವರಣದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ನೇತೃತ್ವದಲ್ಲಿ ಆಯೋಜಿಸಿದ್ದ ಅಖಿಲ ಭಾರತ 67ನೇ ಸಹಕಾರ ಸಪ್ತಾಹ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದ್ಯಕ್ಕೆ ಕೆಎಂಎಫ್ ವಾರ್ಷಿಕ 15 ಸಾವಿರ ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿದೆ. ಈ ವಹಿವಾಟನ್ನು ಮುಂದಿನ ನಾಲ್ಕು ವರ್ಷದ ಅವಧಿಯಲ್ಲಿ 25 ಸಾವಿರ ಕೋಟಿ ರೂ.ಗೆ ಹೆಚ್ಚಿಸಲಾಗುವುದು. ಇದಕ್ಕೆ ಸಹಕಾರ ನೀಡಬೇಕು ಎಂದರು.

    ಕರ್ನಾಟಕ ಕೆಎಂಎಫ್ ಮತ್ತು ಗುಜರಾತ್‌ನ ಅಮುಲ್ ಮಾತ್ರ ಸಹಕಾರ ಕ್ಷೇತ್ರದಲ್ಲಿ ಗಟ್ಟಿಯಾಗಿ ಉಳಿದುಕೊಂಡಿವೆ. ದಕ್ಷಿಣ ಕರ್ನಾಟಕ ಭಾಗದಲ್ಲಿನ ರೈತರು ಹೈನುಗಾರಿಕೆಯನ್ನೇ ಹೆಚ್ಚು ಅವಲಂಬಿಸಿದ್ದರಿಂದ ಆರ್ಥಿಕವಾಗಿ ಸದೃಢಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ರೈತರು ಕೇವಲ ಕಬ್ಬು ಬೆಳೆಗೆ ಮಾತ್ರ ಜೋತು ಬೀಳದೆ ಹೈನುಗಾರಿಕೆಯತ್ತವೂ ಚಿತ್ತ ಹರಿಸಬೇಕು ಎಂದು ಮನವಿ ಮಾಡಿದರು.

    ಕೆಎಂಎಫ್‌ನಲ್ಲಿ ಪ್ರತಿದಿನ 83 ಲಕ್ಷ ಲೀಟರ್ ಹಾಲು ಸಂಗ್ರಹಣೆಯ ದಾಖಲೆ ಇತ್ತು. ಇದೀಗ ಅದು 89 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಕೆಎಂಎಫ್
    ಸೇರಿದಂತೆ 14 ಹಾಲು ಒಕ್ಕೂಟಗಳಲ್ಲಿ 1,000 ಉದ್ಯೋಗ ಸೃಷ್ಟಿ ಮಾಡುತ್ತೇವೆ.

    12 ಲಕ್ಷ ಹಸುಗಳಿಗೆ ವಿಮೆ ನೀಡುತ್ತಿದ್ದೇವೆ. ಇದರಿಂದ ಹಸು ಮೃತಪಟ್ಟರೆ 40 ರಿಂದ 50 ಸಾವಿರ ರೂ. ಪರಿಹಾರ ಸಿಗಲಿದೆ. ಬೆಳಗಾವಿ ಜಿಲ್ಲೆಯಲ್ಲಿ 100 ಎಕರೆ ಪ್ರದೇಶದಲ್ಲಿ ಮೇಘಾ ಡೈರಿ ನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

    15,300 ಕೋಟಿ ರೂ. ಸಾಲ: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿ, 2020-21ನೇ ಸಾಲಿನಲ್ಲಿ ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್ ಮೂಲಕ ರೈತರಿಗೆ 15,300 ಕೋಟಿ ರೂ. ಸಾಲ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಯೋಜನೆಯಡಿ 630 ಕೋಟಿ ರ. ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

    ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರ ಕ್ಷೇತ್ರ ದೊಡ್ಡ ಪ್ರಮಾಣ ಕೊಡುಗೆ ನೀಡಿಕೊಂಡು ಬರುತ್ತಿದೆ. ಲಕ್ಷಾಂತರ ಜನರಿಗೆ ಉದ್ಯೋಗ, ಕೋಟ್ಯಂತರ ರೂಪಾಯಿ ಸಾಲ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ನಬಾರ್ಡ್‌ನಿಂದ ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‌ಗಳಿಗೆ 1,750 ಕೋಟಿ ರೂ. ಸಾಲ ನೀಡಲಾಗಿದೆ. ಅಲ್ಲದೆ, ಡಿಸಿಸಿ ಬ್ಯಾಂಕ್‌ಗಳು ರೈತರಿಗೆ, ಸ್ತ್ರೀ ಸಂಘಗಳಿಗೆ, ಬೀದಿಬದಿ ವ್ಯಾಪಾರಿಗಳಿಗೆ ಸೇರಿದಂತೆ ಇನ್ನಿತರರಿಗೆ ಸಾಲ ಸೌಲಭ್ಯ ಕಲ್ಪಿಸಿದೆ ಎಂದು ತಿಳಿಸಿದರು. ಕೋವಿಡ್-19 ಲಾಕ್‌ಡೌನ್ ಬಳಿಕ ಕೆಎಂಎಫ್ ವ್ಯವಹಾರ ಚೇತರಿಸಿಕೊಳ್ಳುತ್ತಿದ್ದು, ಸದ್ಯ 130 ಕೋಟಿ ರೂ. ಲಾಭದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದು ಹೆಮ್ಮೆಯ ವಿಷಯಾಗಿದೆ. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಹಕಾರಿ ಸಂಸ್ಥೆಗಳು ಲಾಭದಾಯಕ ಆಗುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕೆಎಂಎಫ್ ಉತ್ಪನ್ನ ಬಿಡುಗಡೆ: ಕೆಎಂಎಫ್ ಬ್ರಾೃಂಡಿನ ನಂದಿನಿ ಚಾಕ್‌ಲೆಟ್, ಬಾದಾಮ್ ಹಲ್ವಾ, ಐದು ಬಗೆಯ ಬ್ರೆಡ್, ಐಸ್‌ಕ್ರೀಂ ಮತ್ತಿತರ ಹೊಸ ಉತ್ಪನ್ನಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ವೇದಿಕೆಯ ಮೇಲೆಯೇ ಐಸ್‌ಕ್ರೀಂ ತಿಂದು ಗಮನ ಸೆಳೆದರು.

    ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಹಾಗೂ ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ವಿವೇಕರಾವ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅನಿಲ ಬೆನಕೆ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ರಾಜ್ಯ ಸಹಕಾರ ಸಂಘಗಳ ನಿಬಂಧಕ ಎಸ್. ಜಿಯಾವುಲ್ಲಾ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ ಇನ್ನಿತರರು ಇದ್ದರು.

    ಕೃಷಿ ಪ್ರಧಾನವಾಗಿರುವ ಭಾರತದಲ್ಲಿ ಗೋಮಾತೆಯ ರಕ್ಷಣೆಯ ಮೂಲಕ ಹೈನೋದ್ಯಮಕ್ಕೆ ಉತ್ತೇಜನ ನೀಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗುವುದು. ಗೋಮಾತೆ ಎಲ್ಲರ ಮನೆಯಲ್ಲಿ ಇರಬೇಕು. ಅದೇ ಕಾರಣದಿಂದ ಪ್ರಾಣಿ ಕಲ್ಯಾಣ ಮಂಡಳಿ ಮಾಡಿ 196 ಆ್ಯಂಬುಲೆನ್ಸ್ ಕೊಟ್ಟಿದ್ದೇವೆ.
    | ಪ್ರಭು ಚವ್ಹಾಣ ಪಶುಸಂಗೋಪನಾ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts