More

    ನೆಮ್ಮದಿ ಕೆಡಿಸಿದ ಕೈಗಾರಿಕೆ ಕೊಳಚೆ, ರೈಸ್‌ಮಿಲ್ ಧೂಳು ; ತುಮಕೂರು 1ನೇ ವಾರ್ಡ್ ನಿವಾಸಿಗಳ ಗೋಳು

    | ಸೋರಲಮಾವು ಶ್ರೀಹರ್ಷ ತುಮಕೂರು

    ನಗರದ ಚಹರೆಯೂ ಇಲ್ಲದ, ಹಳ್ಳಿಯೂ ಅಲ್ಲದ ಪ್ರದೇಶಗಳೇ ತುಂಬಿರುವ ಮಹಾನಗರ ಪಾಲಿಕೆ 1ನೇ ವಾರ್ಡ್‌ನ ಶಾಶ್ವತ ಸಮಸ್ಯೆ ಎಂದರೆ ‘ಜೀವಜಲ ಸೇರುತ್ತಿರುವ ಕಾರ್ಖಾನೆಗಳ ರಾಸಾಯನಿಕ, ರೈಸ್‌ಮಿಲ್‌ನಿಂದ ಹೊರಹೊಮ್ಮುವ ಧೂಳು’.

    ಪ್ರಾಣಕ್ಕೆ ಸಂಚಕಾರ ತರುವ ಅಪಾಯಕಾರಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಜನರ ನೀರಿನ ದಾಹವನ್ನು ‘ಹೇಮೆ’ ತೀರಿಸಿದೆ. ಆದರೆ, 5 ವರ್ಷಗಳಿಂದ ನಡೆಯುತ್ತಿರುವ ಯುಜಿಡಿ ಕಾಮಗಾರಿಗೆ ಮುಕ್ತಿ ಸಿಕ್ಕಿಲ್ಲ, ಬೀದಿ ದೀಪಗಳು ಎಲ್ಲ ಕಂಬದಲ್ಲಿದ್ದರೂ ಉರಿಯುವುದು ಅಪರೂಪ.

    ಇಡೀ ವಾರ್ಡ್‌ನ ಪರಿಸರ ಮಾಲಿನ್ಯಕ್ಕೆ ಕಂಟಕ ತಂದೊಡ್ಡಿರುವುದು ವಾರ್ಡ್‌ಗೆ ಹೊಂದಿಕೊಂಡಿರುವ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳು, ರೈಸ್‌ಮಿಲ್‌ಗಳು, ನೂರಾರು ಗ್ರಾನೈಟ್ ಫ್ಯಾಕ್ಟರಿಗಳಿಂದ ಹೊರಹೊಮ್ಮುವ ಧೂಳು ಇಲ್ಲಿನ ಜನರ ನೆಮ್ಮದಿ ಕಿತ್ತುಕೊಂಡಿದೆ. ಕೈಗಾರಿಕೆಗಳಿಂದ ಬಿಡುಗಡೆಯಾಗುವ ವಿಷ ತ್ಯಾಜ್ಯ ಸಿದ್ದೇಕಟ್ಟೆ ಹಾಗೂ ಮರಳೇನಹಳ್ಳಿ ಕೆರೆಯಲ್ಲಿ ನಿಂತು ಗಬ್ಬು ನಾರುತ್ತಿದೆ.

    ಮರಳೇನಹಳ್ಳಿ, ಡಿ.ಎಂ.ಪಾಳ್ಯ, ರಂಗಾಪುರ, ಲಿಂಗಾಪುರ, ವಾಸವಿನಗರ, ಹೊನ್ನೇನಹಳ್ಳಿ, ಎಸ್‌ಎನ್ ಪಾಳ್ಯ, ಪಿಎನ್‌ಆರ್ ಪಾಳ್ಯ ಒಳಗೊಂಡು 1ನೇ ವಾರ್ಡ್ 10 ಸಾವಿರ ಜನಸಂಖ್ಯೆ ಹೊಂದಿದೆ. ಜನವಸತಿ ಪ್ರದೇಶಗಳಾದ ರಂಗಾಪುರ, ಲಿಂಗಾಪುರ, ಡಿಎಂ ಪಾಳ್ಯಗಳಲ್ಲಿ ರೈಸ್‌ಮಿಲ್‌ನಿಂದ ಹೊರಬರುವ ಕಪ್ಪುಕಿಟ್ಟ ಜನರ ಉಸಿರಾಟಕ್ಕೆ ತೊಂದರೆ ತಂದೊಡ್ಡಿದೆ.

    ಆರ್‌ಕೆ ಕಾಲುವೆ ಮೂಲಕ ಸಿದ್ದೇಕಟ್ಟೆ ಹಾಗೂ ಮರಳೇನಹಳ್ಳಿ ಕೆರೆ ಮೂಲಕ ಭೂಮಿ ಸೇರುತ್ತಿರುವ ರಾಸಾಯನಿಕ, ಗ್ರಾನೈಟ್ ಪೌಡರ್‌ನಿಂದ ವಾರ್ಡ್‌ನಲ್ಲಿರುವ ಬಹುತೇಕ ಕೊಳವೆಬಾವಿ ನೀರು ಕಲ್ಮಶಗೊಂಡಿದೆ. ಫ್ಲೋರೈಡ್, ನೈಟ್ರೇಟ್‌ಯುಕ್ತ ನೀರಿನಿಂದ ಶುದ್ಧ ನೀರು ಸಿಗದಂತಾಗಿದೆ. ಈ ದಶಕದ ಸಮಸ್ಯೆ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಣಮೌನವಹಿಸಿರುವ ಬಗ್ಗೆ ಜನರ ಖಂಡನೆಯಿದೆ.

    2014ರಲ್ಲಿ ವಾರ್ಡ್‌ಗೆ ಹೇಮಾವತಿ ನೀರಿನ ಸಂಪರ್ಕ ದೊರಕಿದ್ದು, ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ರಸ್ತೆ, ಚರಂಡಿ, ಬೀದಿದೀಪ, ರೇಷನ್‌ಕಾರ್ಡ್, ಘನತ್ಯಾಜ್ಯ ವಿಲೇವಾರಿ ಸಮಸ್ಯೆಗಳಿವೆ. ಚಿತ್ರನಟಿ ಮಂಜುಳಾ ಕೂಡ ಇದೇ ವಾರ್ಡ್ ಹೊನ್ನೇನಹಳ್ಳಿಯವರಾಗಿದ್ದು, ಅವರ ಸಮಾಧಿಯೂ ಅನಾಥವಾಗಿದೆ. ಇದನ್ನು ಅಭಿವೃದ್ಧಿಪಡಿಸಿ ಹಿರಿಯ ಕಲಾವಿದೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಪಾಲಿಕೆ ಮಾಡಬೇಕಿದೆ.

    ಆಗಬೇಕಾದ ಕೆಲಸಗಳೇನು : ಕೈಗಾರಿಕೆಗಳ ತ್ಯಾಜ್ಯಕ್ಕೆ ಕಡಿವಾಣ, ರೈಸ್‌ಮಿಸ್‌ಗಳ ಧೂಳಿನಿಂದ ಮುಕ್ತಿ, ಸುಸಜ್ಜಿತ ಆರೋಗ್ಯ ಕೇಂದ್ರ, ಊರುಗಳ ಸಂಪರ್ಕ ರಸ್ತೆ, ಸಾರ್ವಜನಿಕ ಶೌಚಗೃಹ

    ಕೈಗಾರಿಕೆಗಳಿಂದ ಸಂಸ್ಕರಿಸದೆ ಹರಿಯಬಿಡುತ್ತಿರುವ ವಿಷಯುಕ್ತ ನೀರು ಬಹುದೊಡ್ಡ ಸಮಸ್ಯೆಯಾಗಿದೆ, ಬೀದಿದೀಪ, ಕುಡಿಯುವ ನೀರಿಗೆ ದ್ಯತೆ ನೀಡಿದ್ದು ಎಲ್ಲಿಯೂ ಗಂಭೀರ ಸಮಸ್ಯೆಗಳಿಲ್ಲ. ಬಹುದಿನಗಳ ಬೇಡಿಕೆಯಾಗಿದ್ದ ಹೊನ್ನೇನಹಳ್ಳಿ ರಸ್ತೆ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಯುಜಿಡಿ ಯೋಜನೆಯಲ್ಲಿ ನಮ್ಮ ವಾರ್ಡ್‌ನ ಬಹುತೇಕ ಭಾಗ ಸೇರ್ಪಡೆಯಾಗಲಿದ್ದು, ಅನುಕೂಲವಾಗಲಿದೆ. ಕಾರ್ಖಾನೆಗಳಿಂದ ಬರುವ ರಾಸಾಯನಿಕ ತ್ಯಾಜ್ಯ, ರೈಸ್‌ಮಿಲ್‌ಗಳ ಧೂಳನ್ನು ತಡೆಗಟ್ಟಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮಕೈಗೊಂಡರಷ್ಟೇ ಇಲ್ಲಿನ ಜನರ ಬದುಕು.
    ನಳಿನಾ ಇಂದ್ರಕುಮಾರ್, 1ನೇ ವಾರ್ಡ್ ಪಾಲಿಕೆ ಸದಸ್ಯೆ (ಮೊ.9964502627)

     

    ಭಜಂತ್ರಿಪಾಳ್ಯ ಹಾಗೂ ಎಸ್‌ಎನ್ ಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ತುರ್ತು ಅಗತ್ಯವಿದೆ. ಸಿದ್ದೇಕಟ್ಟೆ ಕೆರೆ ಏರಿ ಹಿಂಭಾಗ ಯುಜಿಡಿ ಕಾಮಗಾರಿ ನಡೆದಿರುವ ರಸ್ತೆಯ ಜಾಗವನ್ನೇ ಉಳ್ಳವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನವಾಗಿರುವುದು ಆಶ್ಚರ್ಯ ಮೂಡಿಸಿದೆ.
    ಶಂಕರ್ ಎಸ್.ಎನ್.ಪಾಳ್ಯ ವಾಸಿ

    ರೈಸ್‌ಮಿಲ್‌ನಿಂದ ಹೊರಬರುವ ಧೂಳು ಮುಖದ ಮೇಲೆ ಕೂರುತ್ತಿದೆ. ಪ್ರತಿನಿತ್ಯ ಮನೆಯ ಮೇಲಿನ ಧೂಳು ಗುಡಿಸಲೇಬೇಕು. ಗಾಳಿಯಲ್ಲಿ ತೇಲಿಬರುವ ಧೂಳು ಅನ್ನ, ನೀರು ಸೇರುತ್ತಿದೆ. ಕೈಗಾರಿಕೆಗಳಿಂದ ರಾಸಾಯನಿಕಯುಕ್ತ ನೀರನ್ನು ನೇರವಾಗಿ ಕೆರೆಗಳಿಗೆ ಬಿಡುತ್ತಿರುವುದು ನಮ್ಮ ಆರೋಗ್ಯವನ್ನು ಹಾಳುಗೆಡವಿದೆ.
    ಲಕ್ಷ್ಮಣ್ ಡಿ.ಎಂ ಪಾಳ್ಯ ವಾಸಿ

    ಸಂಪರ್ಕಕ್ಕೆ : ಸಿವಿಲ್, ಯುಜಿಡಿ ಕಾಮಗಾರಿ: ಬಿ.ಕೆ.ಆಶಾ:9731124750
    ಯುಜಿಡಿ ನಿರ್ವಹಣೆ: ಡಿ.ಆಶ್ವಿನ್: 9480278391
    ನೀರು, ಬೀದಿದೀಪ ನಿರ್ವಹಣೆ: ಜಿ.ಪ್ರಕಾಶ್: 8317338862

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts