ತುಮಕೂರು : ಮಹಾನಗರ ಪಾಲಿಕೆ ಬಜೆಟ್ ಕುರಿತ ಜನರ ನಿರೀಕ್ಷೆ ಠುಸ್ಸೆಂದಿದೆ. ಅಭಿವೃದ್ಧಿ ನಿರೀಕ್ಷೆಯಲ್ಲಿದ್ದ ನಗರವಾಸಿಗಳ ಪಾಲಿಗೆ ಹೊಸ ಯೋಜನೆಗಳು ಘೋಷಣೆಯಾಗಿಲ್ಲ. ಮೂಲಸೌಕರ್ಯ, ಹೊಸ ಯೋಜನೆ, ಆದಾಯ ಹೆಚ್ಚಳಕ್ಕೆ ಅಗತ್ಯ ಕ್ರಮಕೈಗೊಳ್ಳುವ ದೂರದೃಷ್ಟಿಯುಳ್ಳ ಬಜೆಟ್ ಮಂಡನೆ ಮಾಡುವಲ್ಲಿ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ನಳಿನಾ ಎಡವಿದ್ದಾರೆ.
ಪಾಲಿಕೆ ಇತಿಹಾಸದಲ್ಲಿ ಮಹಿಳೆಯೊಬ್ಬರು ಮಂಡಿಸಿದ ಚೊಚ್ಚಲ ಬಜೆಟ್ ಎಂಬ ಹೆಗ್ಗಳಿಕೆಗೆ ನಳಿನಾ ಪಾತ್ರರಾಗಿದ್ದು, ಶುಕ್ರವಾರ ಬೆಳಗ್ಗೆ 11.30ಕ್ಕೆ ಬಜೆಟ್ ಮಂಡನೆಯಾಯಿತು. ಗಂಟೆಗೂ ಹೆಚ್ಚು ಕಾಲ ನಿರರ್ಗಳವಾಗಿ ಬಜೆಟ್ ಪ್ರತಿಯನ್ನು ಓದಿದರಾದರೂ ಬಜೆಟ್‌ನಲ್ಲಿ ದೂರದೃಷ್ಟಿಯ ಅಂಶಗಳಿರಲಿಲ್ಲ, ಇ-ಬಜೆಟ್ ಕಾರಣಕ್ಕೆ ಎಲ್ಲ ಸದಸ್ಯರಿಗೂ ಲ್ಯಾಪ್‌ಟಾಪ್ ವ್ಯವಸ್ಥೆ ಮಾಡಲಾಗಿತ್ತು.
ಪ್ರಾರಂಭಿಕ ಶಿಲ್ಕು 20.45 ಕೋಟಿ ರೂ. ಹಾಗೂ 2020-21ನೇ ಸಾಲಿನ ನಿರೀಕ್ಷಿತ ಆದಾಯ 209.65 ಕೋಟಿ ರೂ. ಸೇರಿ ಒಟ್ಟು 229.10 ಕೋಟಿ ರೂ. ಗಾತ್ರದ ಬಜೆಟ್‌ನಲ್ಲಿ ವಿವಿಧ ಬಾಬ್ತುಗಳಿಗೆ 227.44 ಕೋಟಿ ರೂ. ಖರ್ಚಿಗೆ ಮೀಸಲಿಟ್ಟು 2.50 ಕೋಟಿ ರೂ. ಉಳಿತಾಯ ಆಯವ್ಯಯ ಮಂಡಿಸಿದರು.
ಅಧಿಕಾರಿಗಳು ನೀಡಿದ ಅಂಕಿ-ಅಂಶಗಳನ್ನು ಬಜೆಟ್‌ನಲ್ಲಿ ನೀಡಿದ್ದಾರೆಯೇ ಹೊರತು ಬಜೆಟ್‌ನಲ್ಲಿ ಯಾವುದೇ ಜನಪರ ಯೋಜನೆಗಳನ್ನು ಘೋಷಿಸಿಲ್ಲ. ಪಾಲಿಕೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಸೂಕ್ತ ಕಾರ್ಯಕ್ರಮಗಳಿಲ್ಲ. ಆದರೆ, ಇದರಿಂದ ಪಾಲಿಕೆಗೆ ಬರುತ್ತಿರುವ ಆದಾಯವೆಷ್ಟು ? ಈ ಬಗ್ಗೆ ಗಮನಹರಿಸಿ ಆದಾಯ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ ಎಂದು ವಿರೋಧ ಪಕ್ಷಗಳು ಅಸಮಾಧಾನ ಹೊರಹಾಕಿದವು.
ಮೇಯರ್ ಹಾಗೂ ಉಪಮೇಯರ್ ವಿವೇಚನಾಧಿಕಾರದ ವಿಶೇಷ ಅನುದಾನ ಮೀಸಲಿಡಲಾಗಿದೆಯಾದರೂ ಈ ಹಿಂದೆ ಸಮರ್ಪಕವಾಗಿ ಬಳಕೆಯಾಗಿಲ್ಲ. ಈ ವರ್ಷವೂ 1.50 ಕೋಟಿ ರೂ. ಮೀಸಲಿಡಲಾಗಿದ್ದು ಏನು ಉಪಯೋಗ ಎಂದು ಕೆಲ ಸದಸ್ಯರು ಅಸಮಾಧಾನ ಹೊರಹಾಕಿದರು. ಪಾಲಿಕೆ ಸದಸ್ಯರ ಅಧ್ಯಯನ ಪ್ರವಾಸಕ್ಕೆ 20 ಲಕ್ಷ ರೂ. ಮೀಸಲಿಡಲಾಗಿದೆ.
ವಿರೋಧ ಪಕ್ಷದ ಸದಸ್ಯರ ವಿರೋಧದ ನಡುವೆ ಕೆಲವು ತಿದ್ದುಪಡಿಗಳೊಂದಿಗೆ ಉಳಿತಾಯ ಬಜೆಟ್‌ಗೆ ಅನುಮೋದನೆ ನೀಡಲಾಯಿತು. ಮೇಯರ್ ಬಿ.ಕೆ.ಕೃಷ್ಣಪ್ಪ, ಉಪಮೇಯರ್, ಸಂಸದ ಜಿ.ಎಸ್.ಬಸವರಾಜು, ಆಯುಕ್ತೆ ರೇಣುಕಾ ಇದ್ದರು.
ಪತ್ರಕರ್ತರ ಮೂಗಿಗೆ ತುಪ್ಪ : ಈ ಹಿಂದಿನ ಸತತ ಎರಡು ಬಜೆಟ್‌ನಲ್ಲಿ ಪತ್ರಕರ್ತರ ಬಡಾವಣೆ ನಿರ್ಮಿಸುವ ಭರವಸೆಯೊಂದಿಗೆ ಬರೋಬ್ಬರಿ 2 ಕೋಟಿ ರೂ. ಮೀಸಲಿಟ್ಟು ಹೆಚ್ಚು ಪ್ರಚಾರಗಿಟ್ಟಿಸಿಕೊಂಡಿದ್ದ ಪಾಲಿಕೆಯ ಹಳೆಯ ಮಾಸ್ಟರ್ ಪ್ಲಾನ್ ಈ ಬಜೆಟ್‌ನಲ್ಲಿಯೂ ಮುಂದುವರಿದಿದೆ. ಪಾಲಿಕೆಯ ಪೌರಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರು ಹಾಗೂ ಪತ್ರಕರ್ತರಿಗೆ ಆರೋಗ್ಯ ಕೇಂದ್ರ ಸ್ಥಾಪನೆಗೆ 15 ಲಕ್ಷ ರೂ. ಮೀಸಲಿಡಲಾಗಿದೆ. ಸಾಕಷ್ಟು ಸರ್ಕಾರಿ ಆಸ್ಪತ್ರೆಗಳೇ ತುಂಬಿರುವ ನಗರದಲ್ಲಿ ಪಾಲಿಕೆಯ ಆರೋಗ್ಯ ಕೇಂದ್ರದಿಂದ ಯಾವುದೇ ಉಪಯೋಗವಿಲ್ಲ.
ಬಯೋ ಡೀಸೆಲ್ ಘಟಕ : ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ಉತ್ಪಾದನೆಯಾಗುವ ಕೇಂದ್ರಗಳಿಂದ ತ್ಯಾಜ್ಯ ಸಂಗ್ರಹಿಸಿ ಬಯೋ ಡೀಸೆಲ್ ಘಟಕ ಸ್ಥಾಪನೆಗೆ 1 ಕೋಟಿ ರೂ. ಮೀಸಲಿಡಲಾಗಿದೆ. ನಗರದ ದೇವಸ್ಥಾನಗಳಲ್ಲಿ ಸಿಗುವ ತ್ಯಾಜ್ಯ ಹೂಗಳಿಂದ ಪ್ರಾಯೋಗಿಕ ಅಗರಬತ್ತಿ ತಯಾರಿಕಾ ಘಟಕ ಸ್ಥಾಪನೆಗೆ 5 ಲಕ್ಷ ರೂ. ಮೀಸಲಿಡಲಾಗಿದೆ. ಸಣ್ಣ ಚರಂಡಿ ಸ್ವಚ್ಛಗೊಳಿಸುವ ಎಸ್ಕಲೇಟರ್ ಖರೀದಿಗೆ 20 ಲಕ್ಷ ರೂ. ಮೀಸಲಿಡಲಾಗಿದೆ.
ಮಹಿಳಾ ಸಬಲೀಕರಣಕ್ಕೆ ಒತ್ತು : ಪಾಲಿಕೆಯ ವಿವಿಧ ಕಾರ್ಯಕ್ರಮಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಭರವಸೆ ನೀಡಲಾಗಿದೆ. ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡಲು 10 ಲಕ್ಷ ರೂ.ಕಾಯ್ದಿರಿಸಲಾಗಿದೆ. ಅಂಗನವಾಡಿ ನಿರ್ವಹಣೆ, ಕ್ರೀಡೆಗೆ, ದಿವ್ಯಾಂಗ ಚೇತನರಿಗೆ ನೆರವು, ಆಸ್ತಿಗಳ ನಿರ್ಮಾಣ ಮತ್ತು ನಿರ್ವಹಣೆ, ಉದ್ಯಾನವನ ಅಭಿವೃದ್ಧಿ, ಮಾರುಕಟ್ಟೆ ಅಭಿವೃದ್ಧಿ, ಒಳಚರಂಡಿ ನಿರ್ವಹಣೆ, ಶುದ್ಧ ನೀರಿನ ಘಟಕ ಸ್ಥಾಪನೆ, ಪೌರಕಾರ್ಮಿಕರಿಗೆ ಗೃಹಭಾಗ್ಯ ಮತ್ತಿತರ ಯೋಜನೆಗಳನ್ನು ಈ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದಂತೆಯೇ ಘೋಷಿಸಿ ಹಣ ಮೀಸಲಿಡಲಾಗಿದೆ.
2021-22ನೇ ಸಾಲಿನ ಆಯವ್ಯಯದ ವಿವರ : ಆರಂಭಿಕ ಶಿಲ್ಕು -ರೂ. 2091 ಲಕ್ಷಗಳು, ಆದಾಯ ಸ್ವೀಕೃತಿಗಳು-ರೂ. 20904 ಲಕ್ಷಗಳು, ಒಟ್ಟು ಆದಾಯ ಸ್ವೀಕೃತಿ-ರೂ. 22996 ಲಕ್ಷಗಳು,
ಆದಾಯ ವೆಚ್ಚ-ರೂ. 22745 ಲಕ್ಷಗಳು, ಉಳಿತಾಯ-ರೂ.250 ಲಕ್ಷಗಳು.