More

    9 ಸಿಬ್ಬಂದಿ ಸುರಕ್ಷಿತವಾಗಿ ದಡಕ್ಕೆ

    ಮಂಗಳೂರು/ಪಡುಬಿದ್ರಿ: ತೌಕ್ತೆ ಚಂಡಮಾರುತದ ಹೊಡೆತದಿಂದ ಕಾಪು ಕಡಲಿನಲ್ಲಿ 40 ಗಂಟೆ ಸಿಲುಕಿದ್ದ ಕೋರಮಂಡಲ್ ಟಗ್‌ನ ಎಲ್ಲ 9 ಸಿಬ್ಬಂದಿಯನ್ನೂ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಯ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಮಂಗಳೂರಿಗೆ ಕರೆತರಲಾಗಿದೆ.

    ಶನಿವಾರ ಎನ್‌ಎಂಪಿಟಿಯ ಹೊರ ಆ್ಯಂಕರೇಜ್ ಪ್ರದೇಶದಿಂದ ಈ ಟಗ್ ಆ್ಯಂಕರ್ ತುಂಡಾಗಿ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಉತ್ತರದ ಕಡೆಗೆ ಸೆಳೆದೊಯ್ಯಲ್ಪಟ್ಟಿತ್ತು. ಶನಿವಾರ ರಾತ್ರಿ ವೇಳೆಗೆ ಕಾಪುವಿನ ಸಮುದ್ರ ಬಂಡೆಯ ನಡುವೆ ಸಿಲುಕಿಕೊಂಡಿತ್ತು. ಶನಿವಾರ ರಾತ್ರಿಯನ್ನು ಅಲ್ಲಿಯೇ ಕಳೆದಿದ್ದ ಸಿಬ್ಬಂದಿ ಭಾನುವಾರ ತಮ್ಮ ರಕ್ಷಣೆಯ ನಿರೀಕ್ಷೆಯಲ್ಲಿದ್ದರು. ಆದರೆ ಭಾನುವಾರ ಚಂಡಮಾರುತದ ಅಬ್ಬರ ಹೆಚ್ಚಿದ್ದರಿಂದ ಕೋಸ್ಟ್‌ಗಾರ್ಡ್ ಪ್ರಯತ್ನ ಫಲಕಾರಿಯಾಗಲಿಲ್ಲ. ಸ್ಥಳೀಯ ಮೀನುಗಾರರು, ಕೋಸ್ಟ್‌ಗಾರ್ಡ್ ತಮ್ಮ ಪ್ರಯತ್ನವನ್ನು ಭಾನುವಾರ ಸಂಜೆ ಸ್ಥಗಿತಗೊಳಿಸಿದ್ದರು.

    ಸೋಮವಾರ ಬೆಳಗ್ಗೆ 6 ಗಂಟೆಗೆ ಕೊಚ್ಚಿನ್‌ನಿಂದ ನೌಕಾಪಡೆಯ ಹೆಲಿಕಾಪ್ಟರ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅಲ್ಲಿಂದ ಘಟನಾ ಸ್ಥಳಕ್ಕೆ ತೆರಳಿತ್ತು. ಐದು ಜನರನ್ನು ಕೋಸ್ಟ್‌ಗಾರ್ಡ್‌ನ ನೌಕೆ ವರಾಹ ರಕ್ಷಣೆ ಮಾಡಿದ್ದು, ಉಳಿದ ನಾಲ್ಕು ಜನರನ್ನು ಹೆಲಿಕಾಪ್ಟರ್ ಬಳಸಿ ಏರ್‌ಲಿಫ್ಟ್ ಮಾಡಿ ಮಂಗಳೂರು ವಿಮಾನ ನಿಲ್ದಾಣಕ್ಕೆ, ಆ ಬಳಿಕ ಆಂಬುಲೆನ್ಸ್ ಮೂಲಕ ಎನ್‌ಎಂಪಿಟಿ ಆಸ್ಪತ್ರೆಗೆ ತರಲಾಯಿತು.

    ಎನ್‌ಎಂಪಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ: ಟಗ್‌ನಲ್ಲಿ ಇದ್ದ ಎಲ್ಲರನ್ನೂ ಈಗ ಎನ್‌ಎಂಪಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೌಕೆಯ ಪೈಲಟ್ ಆಗಿರುವ ಮೊಯ್ಜುದ್ದೀನ್ ಮೊಲ್ಲಾ(45), ಗೌರವ್ ಕುಮಾರ್(27), ಶಂತನು ಕುಮಾರ್(23), ರಾಹುಲ್ ಮಂಜುದಾರ್(21), ದೀಪಕ್ ದಿನೇಶ್(22), ತುಷಾನ್ ಬಿಸ್ವಾಸ್(24), ಲಕ್ಷ್ಮೀನಾರಾಯಣ್(23), ಪ್ರಶಾಂತ್ ಸುಬ್ರಹ್ಮಣ್ಯಂ(29), ರೌದ್ ಅಹಮದ್(26) ರಕ್ಷಣೆಗೊಳಗಾದವರು. ಎನ್‌ಎಂಪಿಟಿ ಆಸ್ಪತ್ರೆಯಲ್ಲಿ ರಕ್ಷಣೆಗೊಳಗಾಗಿರುವವರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ.

    ಭೀಕರ ಗಾಳಿ ತೊಡಗು: ಜಿಲ್ಲಾಧಿಕಾರಿ, ಕೋಸ್ಟ್‌ಗಾರ್ಡ್ ಹಾಗೂ ಎನ್‌ಎಂಪಿಟಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಾಚರಣೆ ಕುರಿತ ಮಾಹಿತಿ ಪಡೆದುಕೊಂಡರು. ಟಗ್ ಸಿಬ್ಬಂದಿಯನ್ನು ಸೇಫಾಗಿ ಕರೆ ತಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್, ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಜತೆ ಮಾತನಾಡಿ ಎರಡು ನೌಕಾ ಹೆಲಿಕಾಪ್ಟರ್ ತರುವ ಪ್ರಯತ್ನವಾಗಿತ್ತು. ಗೋವಾದಿಂದ ಹೊರಟಾಗ ಅಲ್ಲಿ ಭೀಕರ ಗಾಳಿ. ಕೊಚ್ಚಿಯಲ್ಲಿ ಮಳೆಯಿಂದ ಏರ್‌ಪೋರ್ಟ್ ಬಂದ್ ಆಗಿತ್ತು. ಹಾಗಾಗಿ ನಿನ್ನೆ ಹೆಲಿಕಾಪ್ಟರ್ ಇಳಿಯಲು ಸಾಧ್ಯವಾಗಲಿಲ್ಲ. ಇಂದು ಸುಗಮವಾಗಿ ಕಾರ್ಯಾಚರಣೆ ನಡೆಸಲಾಗಿದೆ ಎಂದರು.

    ಲಂಗುರು ತೆಗೆಯುವಾಗ ಮಾಹಿತಿ ನೀಡಲಿಲ್ಲ: ಎಂಆರ್‌ಪಿಎಲ್‌ನ ಹೊರಗುತ್ತಿಗೆ ಮುಗಿದಿದ್ದ ಅಟ್ಲಾಂಟಿಕ್ ಶಿಪ್ಪಿಂಗ್ ಕಂಪನಿಗೆ ಸೇರಿರುವ ಟಗ್ ‘ಕೋರಮಂಡಲ್ ಸಪೋರ್ಟ್ 9’ ಆ್ಯಂಕರೇಜ್‌ನಲ್ಲಿತ್ತು. ಅವರು ಆ್ಯಂಕರ್ ತೆಗೆಯುವಾಗ ನಮಗೆ ಮಾಹಿತಿ ನೀಡಿಲ್ಲ. ಸಮಸ್ಯೆಗೆ ಸಿಲುಕಿದ ಬಳಿಕವಷ್ಟೇ ಮಾಹಿತಿ ನೀಡಿದರು ಎಂದು ಎನ್‌ಎಂಪಿಟಿ ಅಧ್ಯಕ್ಷ ಎ.ವಿ.ರಮಣ ತಿಳಿಸಿದ್ದಾರೆ. ಆದರೂ ನಾವು ಕೋಸ್ಟ್‌ಗಾರ್ಡ್, ಕೋಸ್ಟಲ್ ಪೊಲೀಸ್‌ಗೆ ಮಾಹಿತಿ ನೀಡಿದ್ದೇವೆ. ಟಗ್ ಅಲಯನ್ಸ್ ಕೂಡ 14ರಂದು ರಾತ್ರಿಯೇ ಬರಬೇಕಿತ್ತು. ಆದರೆ ಬಂದಿಲ್ಲ. ಮರುದಿನ ಬರುವುದಾಗಿ ಸಂದೇಶ ಕಳಿಸಿದರೂ ಬರಲಿಲ್ಲ. ಅವರೂ 10.30ಕ್ಕೆ ರಾಡಾರ್ ಪರದೆಯಿಂದ ನಾಪತ್ತೆ ಆದಕೂಡಲೇ ಕೋಸ್ಟ್ ಗಾರ್ಡ್‌ಗೆ ತಿಳಿಸಿದ್ದೆವು ಎಂದು ಅವರು ತಿಳಿಸಿದರು.

    ಕೋರಮಂಡಲ್ ಸಪೋರ್ಟ್ 9 ಟಗ್‌ನಿಂದ ರಕ್ಷಿಸಲಾಗಿರುವ ಎಲ್ಲರೂ ಆರೋಗ್ಯವಾಗಿದ್ದಾರೆ. 24 ಗಂಟೆ ಅವರನ್ನು ನಿಗಾದಲ್ಲಿ ಇರಿಸಲಾಗುವುದು. ಅವರ ಕೋವಿಡ್ ತಪಾಸಣೆ ಮಾಡಲಾಗುವುದು.
    – ಡಾ. ರಾಜೇಂದ್ರ ಕೆ.ವಿ ಜಿಲ್ಲಾಧಿಕಾರಿ, ದ.ಕ.

    ಬಂಡೆ ಮೇಲೆ ನಿಂತದ್ದರಿಂದ ಸೇಫ್: ಸಾಮಾನ್ಯವಾಗಿ ದಡದತ್ತ ತಳ್ಳಲ್ಪಡುವ ನೌಕೆಗಳ ತಳ ಭೂಸ್ಪರ್ಶವಾದರೆ ಪಲ್ಟಿಯಾಗಿ ಅದರಲ್ಲಿರುವವರ ಜೀವಹಾನಿ ನಿಶ್ಚಿತ. ತೌಕ್ತೆ ಚಂಡಮಾರುತಕ್ಕೆ ಸಿಲುಕಿದ ಅಲಯನ್ಸ್ ಟಗ್ ನೌಕೆ ಇದೇ ಮಾದರಿಯಲ್ಲಿ ದುರಂತಕ್ಕೀಡಾಯಿತು. ಆದರೆ ಅದೇ ದಿನ ಅದೇ ಸೈಕ್ಲೋನ್ ಹೊಡೆತಕ್ಕೆ ತುತ್ತಾದರೂ ಅದೃಷ್ಟವಷಾತ್ ಕೋರಮಂಡಲ್ ಟಗ್ ಸಿಬ್ಬಂದಿ ಬದುಕಿ ಬಂದಿದ್ದಾರೆ.

    ಆಳ ಸಮುದ್ರದಲ್ಲಿ ಎಷ್ಟೇ ತೂಫಾನ್ ಇದ್ದರೂ ಹಡಗು ಪಲ್ಟಿಯಾಗುವುದಿಲ್ಲ, ದಡಕ್ಕೆ ಬರುವುದೇ ಅಪಾಯಕ್ಕೆ ಆಹ್ವಾನ, ಅದೃಷ್ಟವಷಾತ್ ಕೋರಮಂಡಲ್ ಟಗ್ ಮಾರುತದ ಹೊಡೆತದಿಂದ ಕಾಪು ಸಮೀಪದ ಸಮುದ್ರ ಬಂಡೆಗಳ ಮೇಲೆ ಸರಿಯಾಗಿ ಕುಳಿತುಕೊಂಡಿತು. ಇಲ್ಲವಾದರೆ ದುರಂತ ಅಂತ್ಯ ಕಾಣಬೇಕಿತ್ತು ಎಂದು ಈ ಟಗ್ ಪ್ರತಿನಿಧಿ ಸಂಸ್ಥೆ ಅಧಿಕಾರಿಯೊಬ್ಬರು ‘ವಿಜಯ ವಾಣಿ’ಗೆ ವಿವರಿಸಿದರು. ಎಂಆರ್‌ಪಿಎಲ್‌ನ ತೇಲುಜೆಟ್ಟಿಯ ನಿರ್ವಹಿಸುವ ನಾಲ್ಕು ವರ್ಷಗಳ ಗುತ್ತಿಗೆ ಕಳೆದ ಡಿಸೆಂಬರ್‌ಗೆ ಮುಗಿದಿತ್ತು, ಆದರೆ ನೌಕೆಯ ನಿರ್ವಹಣೆ, ಸರ್ಟಿಫಿಕೇಟ್ ರಿನಿವಲ್ ಮಾಡಬೇಕಿದ್ದುದರಿಂದ ಆ್ಯಂಕರೇಜ್‌ನಲ್ಲೇ ನೌಕೆ ನಿಂತಿತ್ತು.

    ಇಂಜಿನ್ ಹಾಳಾಗಿದ್ದೇ ಕಾರಣ?: ಕೋರಮಂಡಲ್ ನೌಕೆಯ ಇಂಜಿನ್ ಕೆಟ್ಟದ್ದೇ ಅದು ನಿಯಂತ್ರಣ ಕಳೆದುಕೊಂಡು ಚಂಡಮಾರುತದ ಅಲೆಗೆ ಸಿಲುಕಲು ಕಾರಣ ಎಂದು ತಿಳಿದುಬಂದಿದೆ. ಎರಡು ದಿನ ಕಾಲ ಸಿಬ್ಬಂದಿ ಚಂಡಮಾರುತಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ಅದೃಷ್ಟಕ್ಕೆ ಬಂಡೆಗಳ ನಡುವೆ ಹೋಗಿ ಟಗ್ ಸಿಲುಕಿಕೊಂಡಿದೆ. ಟಗ್‌ನ ಮೇಲೆ ಅಲೆಗಳು ಬಂದು ಹೊಡೆಯುತ್ತಿದ್ದವು. ಆ ಸ್ಥಿತಿಯಲ್ಲಿ ಅವರು ಆಹಾರ ಸೇವಿಸುವಂತೆಯೂ ಇರಲಿಲ್ಲ, ಹಾಗಾಗಿ ಸಿಬ್ಬಂದಿಗಳೆಲ್ಲರೂ ಹೈರಾಣಾಗಿದ್ದಾರೆ ಎಂದೂ ಪ್ರತಿನಿಧಿ ವಿವರಿಸಿದ್ದಾರೆ.

    ಸಾಗರದಲ್ಲೇ ಉಳಿದ ನೌಕೆಗಳ ಸಾಲಿಗೆ ಸೇರ್ಪಡೆ!: ಅರಬ್ಬಿ ಸಮುದ್ರದಲ್ಲಿ ಅಪಘಾತಕ್ಕೀಡಾಗುವ ನೌಕೆಗಳ ತೆರವು ಸವಾಲು. ಮಂಗಳೂರಿನ ತಣ್ಣೀರುಬಾವಿ ಸಮುದ್ರದಲ್ಲಿ ಎಂವಿ ಡೆನ್‌ಡೆನ್ ಎನ್ನುವ ಹಡಗಿನ ಅವಶೇಷ ಹಾಗೆಯೇ ಇದೆ. ಕೆಲ ದಶಕದ ಹಿಂದೆ ಮುಳುಗಿದ್ದ ಇನ್ನೊಂದು ಹಡಗಿನ ಅವಶೇಷವೂ ತಣ್ಣೀರು ಬಾವಿಯಲ್ಲಿದೆ. ಉಳ್ಳಾಲ ಬಳಿ 2018ರಲ್ಲಿ ಮುಳುಗಿದ ಬಾರ್ಜ್ ತೆರವಾಗಿಲ್ಲ. ಕೋರಮಂಡಲ್ ಟಗ್ಗನ್ನೂ ಕೂಡ ದಡಕ್ಕೆ ಎಳೆದುತರುವುದು ಕಷ್ಟ ಎನ್ನಲಾಗಿದೆ. ಸಮುದ್ರದಲ್ಲೇ ಬಾಕಿ ಇರುವ ನೌಕೆಗೆಳ ಸಾಲಿಗೆ ಕೋರಮಂಡಲ್ ಸೇರುವ ಸಾಧ್ಯತೆಯೇ ಹೆಚ್ಚು. ಸದ್ಯ ಭಾನುವಾರ ಸೈಕ್ಲೋನ್ ಹೊಡೆತಕ್ಕೆ ಸಿಲುಕಿದ ಟಗ್ ಅಲಯನ್ಸ್ ಬಹುತೇಕ ಪಡುಬಿದ್ರಿ ಬೀಚ್ ಸಮೀಪವೇ ಇರುವುದರಿಂದ ಅದನ್ನು ತೆರವು ಮಾಡುವ ಸಾಧ್ಯತೆ ಇದೆ. ಅದರ ಮಾಲೀಕರು, ತಜ್ಞರೊಂದಿಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಇದರ ತೆರವಿಗೆ ಮೇ 18ರಿಂದ ಕೆಲಸ ಶುರು ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts