More

    ಕ್ಷಯಮುಕ್ತ ಜಿಲ್ಲೆಯಾಗಲಿ ಕೊಪ್ಪಳ- ಡಿಎಚ್‌ಒ ಡಾ.ಅಲಕನಂದಾ ಮಳಗಿ ಸಲಹೆ

    ಕೊಪ್ಪಳ: ರಾಜ್ಯದಲ್ಲಿ ಕೊಪ್ಪಳವನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಬೇಕಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಡಿಎಚ್‌ಒ ಡಾ.ಅಲಕನಂದಾ ಮಳಗಿ ಹೇಳಿದರು.

    ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕ್ಷಯ ರೋಗವು ಸಾಂಕ್ರಾಮಿಕವಾಗಿ ಹರಡುವುದಲ್ಲದೆ ಮಾರಣಾಂತಿಕವಾಗಿದೆ. ಸೂಕ್ತ ಸಮಯದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ಪಡೆದಲ್ಲಿ ಸಂಪೂರ್ಣ ಗುಣಪಡಿಸಬಹುದು. ವಿವಿಧ ತಪ್ಪು ತಿಳಿವಳಿಕೆ ಕಾರಣ ರೋಗ ಉಲ್ಬಣವಾಗುತ್ತಿದೆ. 2025ಕ್ಕೆ ದೇಶವನ್ನು ಕ್ಷಯಮುಕ್ತಗೊಳಿಸಲು ನಾವೆಲ್ಲ ಕೆಲಸ ಮಾಡಬೇಕು. ಇಲಾಖೆಯಿಂದ ಬೇಕಾದ ಎಲ್ಲ ಸಹಾಯ, ಸಹಕಾರ ನೀಡಲಾಗುವುದು. ಎಲ್ಲರೂ ಒಗ್ಗೂಡಿ ಕ್ಷಯರೋಗದ ವಿರುದ್ಧ ಹೋರಾಡೋಣ ಎಂದು ಕರೆ ನೀಡಿದರು.

    ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಶಶಿಧರ ಮಾತನಾಡಿ, ಕ್ಷಯ ನಿರ್ಮೂಲನೆಗೆ ಹತ್ತಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಟಿಬಿ ಗುರುವಾರ, ನಿಕ್ಷಯ್ ದಿವಸ, ಕ್ಷಯಮುಕ್ತ ಕಾರ್ಯಸ್ಥಳ, ಶಾಲೆ ಹಾಗೂ ವಿಭಿನ್ನ ಮಾದರಿ ಆರೈಕೆ, ಕ್ಷಯರೋಗಿಗಳ ಪೌಷ್ಟಿಕ ಆಹಾರ ವಿತರಣೆ ಮತ್ತು ತಜ್ಞ ವೈದ್ಯರಿಂದ ಕ್ಷಯ ರೋಗ ಚಿಕಿತ್ಸೆಯಲ್ಲಿ ಅಡ್ಡಪರಿಣಾಮ ಉಂಟಾದವರಿಗೆ ಚಿಕಿತ್ಸೆ ಮತ್ತು ಒಳರೋಗಿಗಳ ತಪಾಸಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

    ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರಾದ್ಯಂತ ಜಾಗೃತಿ ಜಾಥಾ ನಡೆಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಜಾಥಾಗೆ ಚಾಲನೆ ನೀಡಿದರು. ಡಾ.ರವೀಂದ್ರನಾಥ, ಡಾ.ವೆಂಕಟೇಶ, ಡಾ.ರಾಮಾಂಜನೇಯ, ಡಾ.ಹಂಸವೇಣಿ ಇತರರಿದ್ದರು.

    ಕ್ಷಯಮುಕ್ತ ಜಿಲ್ಲೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಸರ್ಕಾರ ಸೂಚಿಸುವ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಅನುಸರಿಸೋಣ. ಎಲ್ಲರೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ರೋಗ ಲಕ್ಷಣ ಕಾಣಿಸಿಕೊಂಡಲ್ಲಿ ತಕ್ಷಣ ಪರೀಕ್ಷೆಗೆ ಒಳಪಟ್ಟು ಚಿಕತ್ಸೆ ಪಡೆಯಬೇಕು.
    | ಗಂಗಾವತಿ ಪ್ರಾಣೇಶ್, ಕ್ಷಯಮುಕ್ತ ಆಂದೋಲನದ ಜಿಲ್ಲಾ ರಾಯಭಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts