More

    ಕ್ಷಯಮುಕ್ತ ಚಿಕ್ಕಮಗಳೂರು ಗುರಿ

    ಚಿಕ್ಕಮಗಳೂರು: ಜಿಲ್ಲೆಯನ್ನು 2025ರೊಳಗೆ ಕ್ಷಯಮುಕ್ತವಾಗಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಜುಲೈನಿಂದ ಸಕ್ರಿಯ ಪ್ರಕರಣಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದ್ದು, ಡಿಸೆಂಬರ್‌ವರೆಗೆ ಮುಂದುವರಿಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶ್ವತ್ಥಬಾಬು ತಿಳಿಸಿದರು.

    ರೋಗದ ಬಗ್ಗೆ ಸಂಶಯ ಇರುವ ವ್ಯಕ್ತಿಗಳ ಕಫ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುವುದು. ರೋಗವಿರುವುದು ಕಂಡುಬಂದಲ್ಲಿ ರೋಗ ನಿವಾರಣೆಗೆ ಮಾತ್ರೆಗಳನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 439 ಮಂದಿ ಕ್ಷಯ ರೋಗಿಗಳಿದ್ದಾರೆ. ಚಿಕ್ಕಮಗಳೂರು ತಾಲೂಕಿನಲ್ಲಿ 144, ಕಡೂರು 122, ತರೀಕೆರೆ 77, ಕೊಪ್ಪ 22, ಎನ್.ಆರ್.ಪುರ 30, ಮೂಡಿಗೆರೆ 38 ಮತ್ತು ಶೃಂಗೇರಿ ತಾಲೂಕಿನಲ್ಲಿ 6 ಮಂದಿ ಕ್ಷಯ ರೋಗಿಗಳಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಜಿಲ್ಲೆಯಲ್ಲಿ 22 ಸಾವಿರ ಮನೋರೋಗಿಗಳನ್ನು ಪತ್ತೆಹಚ್ಚಲಾಗಿದೆ. 1ನೇ ಮಂಗಳವಾರ ತರೀಕೆರೆ, 2ನೇ ಮಂಗಳವಾರ ಕಡೂರು, 3ನೇ ಮಂಗಳವಾರ ಮೂಡಿಗೆರೆ, 4ನೇ ಮಂಗಳವಾರ ಅಜ್ಜಂಪುರ, 1ನೇ ಶುಕ್ರವಾರ ಎನ್.ಆರ್.ಪುರ, 2ನೇ ಶುಕ್ರವಾರ ಶೃಂಗೇರಿ ಮತ್ತು 3ನೇ ಶುಕ್ರವಾರ ಕೊಪ್ಪ ತಾಲೂಕುಗಳ ಆಸ್ಪತ್ರೆಗಳಿಗೆ ತೆರಳಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
    ಆರ್‌ಸಿಎಚ್ ಕಾರ್ಯಕ್ರಮದಲ್ಲಿ ಎಲ್ಲ ಅರ್ಹ ದಂಪತಿಗಳ ದಾಖಲೆ ಮಾಡಲಾಗುತ್ತಿದೆ. ಪ್ರಸವ ಪೂರ್ವ ತಪಾಸಣೆಗಾಗಿ ಗರ್ಭಿಣಿಯರನ್ನು ದಾಖಲಿಸಲಾಗುವುದು. ಇವರಿಗೆ ಟಿ.ಡಿ. ಲಸಿಕೆ ನೀಡಲಾಗುತ್ತದೆ. ಕನಿಷ್ಠ 4 ಬಾರಿ ಪ್ರಸೂತಿ ತಜ್ಞರಿಂದ ಚಿಕಿತ್ಸೆ ನೀಡಲಾಗುತ್ತದೆ. ಪಿಎಂಎಸ್‌ಎಂಎ ಕಾರ್ಯಕ್ರಮದಲ್ಲಿ ಗಂಡಾಂತರ ಗರ್ಭಿಣಿಯರನ್ನು ಗುರುತಿಸಿ ಪ್ರತಿ ತಿಂಗಳ 9 ಮತ್ತು 24ನೇ ತಾರೀಖು ಪರೀಕ್ಷಿಸಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಗಂಡಾಂತರ ಗರ್ಭಿಣಿಯರಿಗೆ ಚಿಕಿತ್ಸೆಗಾಗಿ ಧನಸಹಾಯ ನೀಡಲಾಗುವುದು ಎಂದರು.
    ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಎಲ್ಲ ಮಕ್ಕಳಿಗೂ ಮಕ್ಕಳ ತಜ್ಞರಿಂದ ಪರೀಕ್ಷೆ ನಡೆಸಿ ತೊಂದರೆ ಇರುವ ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗುತ್ತದೆ. ಹೆರಿಗೆ ನಂತರ 24 ಗಂಟೆಗಳಲ್ಲಿ ಲಸಿಕೆಗಳನ್ನು ನೀಡಲಾಗುತ್ತದೆ. ಹುಟ್ಟಿನಿಂದ 16 ವರ್ಷದವರೆಗೆ ಕಾಲಕಾಲಕ್ಕೆ 12 ಕಾಯಿಲೆಗಳ ವಿರುದ್ಧ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.
    187 ಡೆಂೆ ಪ್ರಕರಣ: ಜಿಲ್ಲೆಯಲ್ಲಿ 2675 ಜನರ ರಕ್ತ ಪರೀಕ್ಷೆ ನಡೆಸಿದ್ದು, ಅದರಲ್ಲಿ 187 ಡೆಂಘೆ ಪ್ರಕರಣ ಪತ್ತೆಯಾಗಿದೆ. ಕಡೂರು, ಮೂಡಿಗೆರೆ ಮತ್ತು ಚಿಕ್ಕಮಗಳೂರು ತಾಲೂಕಿನಲ್ಲಿ ತಲಾ ಒಂದು ಮಲೇರಿಯಾ ಪ್ರಕರಣ ಕಂಡುಬಂದಿವೆ. ಕಡೂರಿನಲ್ಲಿ ಒಂದು ಚಿಕೂನ್‌ಗುನ್ಯಾ ಪ್ರಕರಣ ಪತ್ತೆಯಾಗಿದೆ ಎಂದು ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಬಾಲಕೃಷ್ಣ ತಿಳಿಸಿದರು. ಚಿಕ್ಕಮಗಳೂರು ತಾಲೂಕಿನಲ್ಲಿ ಡೆಂಘೆ 73, ಕಡೂರು 87, ತರೀಕೆರೆ 19, ಎನ್.ಆರ್.ಪುರ 11, ಕೊಪ್ಪ 16, ಶೃಂಗೇರಿ 12, ಮೂಡಿಗೆರೆ ತಾಲೂಕಿನಲ್ಲಿ 7 ಪ್ರಕರಣ ಪತ್ತೆಯಾಗಿವೆ ಎಂದರು.
    2313 ಎಚ್‌ಐವಿ ಸೋಂಕಿತರು: ಚಿಕ್ಕಮಗಳೂರು ಜಿಲ್ಲೆಯಲ್ಲಿ 2313 ಮಂದಿ ಎಚ್‌ಐವಿ ಸೋಂಕಿತರಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪಟ್ಟಿಯಲ್ಲಿ ಚಿಕ್ಕಮಗಳೂರು ಜಿಲ್ಲೆ 7ನೇ ಸ್ಥಾನದಲ್ಲಿದೆ ಎಂದು ಡಿಎಚ್‌ಒ ಡಾ. ಅಶ್ವತ್ಥಬಾಬು ತಿಳಿಸಿದರು. ಚಿಕ್ಕಮಗಳೂರು 728, ತರೀಕೆರೆ 442, ಕಡೂರಿನಲ್ಲಿ 630, ಮೂಡಿಗೆರೆ ತಾಲೂಕಿನಲ್ಲಿ 237, ಎನ್.ಆರ್.ಪುರ 106, ಕೊಪ್ಪ 136 ಮತ್ತು ಶೃಂಗೇರಿ ತಾಲೂಕಿನಲ್ಲಿ 36 ಜನ ಎಚ್‌ಐವಿ ಪೀಡಿತರಿದ್ದಾರೆ ಎಂದು ಮಾಹಿತಿ ನೀಡಿದರು.
    ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕುಟುಂಬಕಲ್ಯಾಣಾಧಿಕಾರಿ ಡಾ. ಶಶಿಕಲಾ, ಅಧಿಕಾರಿ ಡಾ.ಭರತ್‌ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ.ಸೀಮಾ, ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ. ಲಲಿತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts