More

    VIDEO| ಸಚಿನ್​ ತೆಂಡುಲ್ಕರ್​ ಜೀವನ ಬದಲಿಸಿದ ಮೂವರು ಗುರುಗಳು ಯಾರು ಗೊತ್ತೇ?

    ಬೆಂಗಳೂರು: ದಿಗ್ಗಜ ಬ್ಯಾಟ್ಸ್​ಮನ್​ ಸಚಿನ್​ ತೆಂಡುಲ್ಕರ್​ ಕ್ರಿಕೆಟ್​ ಜಗತ್ತಿನ ಬಹುತೇಕ ಬ್ಯಾಟಿಂಗ್​ ದಾಖಲೆಗಳ ಒಡೆಯರು. 2 ದಶಕಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ ಲೋಕವನ್ನು ಆಳಿದ ಸಚಿನ್​ ಯಶಸ್ಸಿನಲ್ಲಿ ಮೂವರು ಗುರುಗಳು ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಗುರುಪೂರ್ಣಿಮೆಯ ದಿನವಾದ ಭಾನುವಾರದಂದು ಸಚಿನ್​ ತೆಂಡುಲ್ಕರ್​ ಈ ಮೂವರು ಗುರುಗಳನ್ನು ವಿಶೇಷವಾಗಿ ನೆನೆಸಿಕೊಂಡಿದ್ದಾರೆ. ಹಾಗಾದರೆ ಆ ಮೂವರು ಯಾರು ಗೊತ್ತೇ?

    ‘ನಾನು ಬ್ಯಾಟ್​ ಕೈಗೆತ್ತಿಕೊಂಡಾಗಲೆಲ್ಲಾ ಮೂವರು ವ್ಯಕ್ತಿಗಳನ್ನು ನೆನಪಿಸಿಕೊಳ್ಳುತ್ತೇನೆ. ಈ ಮೂವರೂ ನನ್ನ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದವರು. ನಾನಿಂದು ಏನಾಗಿದ್ದೇನೋ ಅದೆಲ್ಲವೂ ಅವರಿಂದಲೇ ಆಗಿದ್ದು. ನನ್ನ ಅಣ್ಣ ಅಜಿತ್​ ಕೋಚ್​ ರಮಾಕಾಂತ್​ ಆಚ್ರೇಕರ್ ಬಳಿಗೆ ನನ್ನನ್ನು ಕರೆದುಕೊಂಡು ಹೋಗಿ ಕ್ರಿಕೆಟ್​ ತರಬೇತಿಗೆ ಸೇರಿಸಲು ನಿರ್ಧರಿಸಿದವರು. ನಾನು ಮೈದಾನಕ್ಕೆ ಬ್ಯಾಟಿಂಗ್​ಗೆ ಇಳಿದಾಗಲೆಲ್ಲ ನನ್ನ ಅಣ್ಣ ನನ್ನೊಂದಿಗೆ ದೈಹಿಕವಾಗಿ ಇರದೆ ಇರಬಹುದು. ಆದರೆ, ಮಾನಸಿಕವಾಗಿ ಯಾವಾಗಲೂ ನನ್ನೊಂದಿಗೆ ಇರುತ್ತಿದ್ದರು. ನಾನು ಬ್ಯಾಟಿಂಗ್​ ಇಳಿಯುತ್ತಿದ್ದಾಗಲೆಲ್ಲ ನನ್ನ ಅಣ್ಣನೂ ನನ್ನೊಂದಿಗೆ ಬ್ಯಾಟಿಂಗ್​ಗೆ ಬರುತ್ತಿದ್ದ ಎಂಬುದು ನನ್ನ ನಂಬಿಕೆಯಾಗಿತ್ತು’ ಎಂದು ಸಚಿನ್​ ತೆಂಡುಲ್ಕರ್​ ಟ್ವಿಟರ್​ನಲ್ಲಿ ಪ್ರಕಟಿಸಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

    VIDEO| ಸಚಿನ್​ ತೆಂಡುಲ್ಕರ್​ ಜೀವನ ಬದಲಿಸಿದ ಮೂವರು ಗುರುಗಳು ಯಾರು ಗೊತ್ತೇ?

    ಇದನ್ನೂ ಓದಿ: VIDEO: ರೋಜರ್​ ಫೆಡರರ್​ರಿಂದ ಮುಂಗೈ ಹೊಡೆತದ ಬಗ್ಗೆ ಟಿಪ್ಸ್​ ಕೇಳಿದ ಸಚಿನ್​ ತೆಂಡುಲ್ಕರ್​

    ಇನ್ನು ಕೋಚ್​ ರಮಾಕಾಂತ್ ಆಚ್ರೇಕರ್​ ತುಂಟ ಬಾಲಕ ಸಚಿನ್​ ತೆಂಡುಲ್ಕರ್​ರ ಬ್ಯಾಟಿಂಗ್​ ಲೋಪದೋಷಗಳನ್ನು ತಿದ್ದಿ ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​ ಆಗಿ ರೂಪಿಸಿದವರು. ‘ಆಚ್ರೇಕರ್​ ಸರ್​ ಬಗ್ಗೆ ನಾನೇನು ಹೇಳಲಿ. ಬಾಲ್ಯದಲ್ಲಿ ಅವರೊಂದಿಗೆ ಸಾಕಷ್ಟು ಸಮಯವನ್ನು ಕಳೆದಿದ್ದೇನೆ. ಬ್ಯಾಟಿಂಗ್​ ಲೋಪದೋಷಗಳನ್ನೆಲ್ಲ ಅವರು ನನ್ನ ಗಮನಕ್ಕೆ ತರುತ್ತಿದ್ದರು. ಪಂದ್ಯವಿರಲಿ ಅಥವಾ ಅಭ್ಯಾಸದ ಸಮಯವೇ ಇರಲಿ ಅವರು ನನ್ನೆಲ್ಲ ಬ್ಯಾಟಿಂಗ್​ನ ತಪ್ಪುಗಳನ್ನು ನೋಟ್​ ಮಾಡಿಟ್ಟುಕೊಳ್ಳುತ್ತಿದ್ದರು ಮತ್ತು ನಾನೆಲ್ಲಿ ಉತ್ತಮ ಪಡಿಸಿಕೊಳ್ಳಬಹುದೆಂದು ತಿಳಿಸುತ್ತಿದ್ದರು. ಕ್ರಿಕೆಟ್​ ಬಗ್ಗೆ ಅವರೊಂದಿಗೆ ಗಂಟೆಗಟ್ಟಲೆ ಚರ್ಚಿಸುತ್ತಿದ್ದೆ’ ಎಂದು ಸಚಿನ್​ ವಿವರಿಸಿದ್ದಾರೆ. ಈ ಹಿಂದೆಲ್ಲ ಸಚಿನ್​ ಕ್ರಿಕೆಟ್​ ಪಂದ್ಯಗಳಿಲ್ಲದ ಪ್ರತಿ ಗುರುಪೂರ್ಣಿಮೆಯಂದು ಆಚ್ರೇಕರ್​ ಮನೆಗೆ ಭೇಟಿ ನೀಡಿ ಆರ್ಶೀವಾದ ಪಡೆದುಕೊಳ್ಳುತ್ತಿದ್ದರು. ಆದರೆ 2019ರ ಜನವರಿಯಲ್ಲಿ ಆಚ್ರೇಕರ್​ ನಿಧನ ಹೊಂದಿದ ಬಳಿಕ ಸಚಿನ್​ ಅವರನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ.

    ಸಚಿನ್​ ತಮ್ಮ ಅಂತಿಮ ಮತ್ತು ಅತ್ಯಂತ ಪ್ರಮುಖವಾದ ಮತ್ತೋರ್ವ ಗುರು ಎಂದು ತಂದೆ ರಮೇಶ್​ ತೆಂಡುಲ್ಕರ್​ ಅವರನ್ನು ನೆನೆಸಿಕೊಂಡಿದ್ದಾರೆ. ‘ಯಶಸ್ಸಿಗೆ ಅಡ್ಡದಾರಿಗಳನ್ನು ಹಿಡಿಯಬೇಡ ಎಂದು ತಂದೆ ಯಾವಾಗಲೂ ಹೇಳುತ್ತಿದ್ದರು. ಸವಾಲುಗಳನ್ನು ಎದುರಿಸಲು ನೀನೇ ಸ್ವತಃ ಸಮರ್ಥವಾಗಿ ಸಿದ್ಧತೆ ನಡೆಸು ಎನ್ನುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಎಂದೂ ನಿನ್ನ ಮೌಲ್ಯಗಳನ್ನು ಕಡಿಮೆಗೊಳಿಸಬೇಡ ಎನ್ನುತ್ತಿದ್ದರು. ಈ ಮೂವರ ಬಗ್ಗೆ ನಾನು ಎಷ್ಟು ಮಾತನಾಡಿದರೂ ಅದು ಕೊನೆಗೊಳ್ಳುವುದಿಲ್ಲ’ ಎಂದು ಸಚಿನ್​ ಹೇಳಿದ್ದಾರೆ. ಸಚಿನ್​ ತೆಂಡುಲ್ಕರ್​ 1999ರ ವಿಶ್ವಕಪ್​ ಸಮಯದಲ್ಲಿ ತಂದೆಯನ್ನು ಕಳೆದುಕೊಂಡಿದ್ದರು.

    ಗುರುಪೂರ್ಣಿಮೆಯ ದಿನ ಕ್ರಿಕೆಟ್​ ತಾರೆಯರಿಂದ ಗುರುಗಳಿಗೆ ನಮನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts