More

    ಮುಚ್ಚಿದ್ದ ಶಾಲೆ ತೆರೆಯಲು ಶ್ರಮ, ಗುರುಪುರ ನಡುಗುಡ್ಡೆ ಪ್ರಾಥಮಿಕ ಶಾಲೆ ಪುನರಾರಂಭಕ್ಕೆ ಪ್ರಯತ್ನ

    ಧನಂಜಯ ಗುರುಪುರ

    ಗುರುಪುರದಲ್ಲಿ ಅತಿ ಹಳೇ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದ ಬೆನ್ನಲ್ಲೇ ಇಲ್ಲಿನ ನಡುಗುಡ್ಡೆಯ ದ.ಕ.ಜಿ.ಪಂ ಕಿರಿಯ ಪ್ರಾಥಮಿಕ ಶಾಲೆಯೂ ಮುಚ್ಚಲ್ಪಟ್ಟಿದೆ. ಇದರಿಂದ ಕೆಲವು ವರ್ಷಗಳಿಂದ ಗುರುಪುರ ಆಸುಪಾಸಿನ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣ ತ್ರಾಸದಾಯಕವಾಗಿತ್ತು. ಪ್ರಸಕ್ತ ಗುರುಪುರದಲ್ಲೇ ಮತ್ತೆ ಪ್ರಾಥಮಿಕ ಶಾಲೆ ತೆರೆಯುವ ನಿಟ್ಟಿನಲ್ಲಿ ಶಿಕ್ಷಣಾಸಕ್ತರ ವಲಯದಿಂದ ಆಶಾದಾಯಕ ಪ್ರಯತ್ನ ನಡೆದಿದೆ.

    ನಡುಗುಡ್ಡೆ ಶಾಲೆ ಮತ್ತೊಮ್ಮೆ ತೆರೆದರೆ ಆಸುಪಾಸಿನ ನೂರಾರು ಮಕ್ಕಳಿಗೆ ಸುಲಭದಲ್ಲಿ ಶಿಕ್ಷಣ ಲಭಿಸಲಿದೆ. ಈ ನಿಟ್ಟಿನಲ್ಲಿ ಗುರುಪುರ ಸರ್ಕಾರಿ ಪ್ರೌಢಶಾಲೆಗೆ ನಡುಗುಡ್ಡೆ ಶಾಲೆ ಸ್ಥಳಾಂತರಿಸುವ ವಿಷಯದಲ್ಲಿ ಪ್ರೌಢಶಾಲಾ ಅಭಿವೃದ್ಧಿ ಸಮಿತಿ ನಿರ್ಣಯ ಕೈಗೊಂಡಿದೆ. ಕಳೆದ ಸಾಲಿನಲ್ಲಿ ನಡುಗುಡ್ಡೆ ಶಾಲೆ ಸ್ಥಳಾಂತರಿಸಲು ಜಿಪಂ ನಿಕಟಪೂರ್ವ ಸದಸ್ಯ ಯು.ಪಿ.ಇಬ್ರಾಹಿಂ ಮತ್ತು ತಾಪಂ ನಿಕಟಪೂರ್ವ ಸದಸ್ಯ ಸಚಿನ್ ಅಡಪ ಪ್ರಯತ್ನಿಸಿದ್ದರು. ಶಾಲೆ ಪುನರಾರಂಭಕ್ಕಾಗಿ ಇತ್ತೀಚೆಗೆ ಗುರುಪುರ ಪಂಚಾಯಿತಿಯ ಹಾಲಿ ಸದಸ್ಯರಾದ ಜಿ.ಎಂ.ಉದಯ ಭಟ್, ಸಚಿನ್ ಅಡಪ ಪ್ರಾಥಮಿಕ ಶಿಕ್ಷಣ ಇಲಾಖೆಯ ಕದ ತಟ್ಟಿದ್ದು, ಹತ್ತಿರದ ಪ್ರೌಢಶಾಲೆಯಲ್ಲಿ ಕಿರಿಯ ಪ್ರಾಥಮಿಕ ತರಗತಿ ಆರಂಭಿಸಲು ಪೂರಕ ಕೆಲಸ ಮಾಡಿದ್ದಾರೆ.

    ಒಪ್ಪಿಗೆ ಪತ್ರ ಅಗತ್ಯ: ಶಿಕ್ಷಣ ಇಲಾಖೆ ಆಪೇಕ್ಷಿಸಿದಂತೆ ಈಗಾಗಲೇ ಆರೇಳು ಮಕ್ಕಳ ಪಾಲಕರ ಒಪ್ಪಿಗೆ ಪತ್ರ ಸಲ್ಲಿಸಲಾಗಿದೆ. ಆದರೆ ಸರ್ಕಾರದ ಪ್ರಸಕ್ತ ಆದೇಶದ ಪ್ರಕಾರ, ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲಾಗಿರುವ ಶಾಲೆ ಮತ್ತೊಮ್ಮೆ ತೆರೆಯಬೇಕಿದ್ದರೆ 10ಕ್ಕೆ ಮೇಲ್ಪಟ್ಟು ಮಕ್ಕಳ ಪಾಲಕರ ಒಪ್ಪಿಗೆ ಪತ್ರ ಅಗತ್ಯವಿದೆ. ಇಲಾಖಾಧಿಕಾರಿಗಳ ಸೂಚನೆ ಮೇರೆಗೆ ಶಿಕ್ಷಣಾಸಕ್ತರು ಮತ್ತಷ್ಟು ಮಕ್ಕಳ ಪಾಲಕರ ಒಪ್ಪಿಗೆ ಪತ್ರ ಸಂಗ್ರಹಿಸಲು ಪ್ರಯತ್ನ ಮುಂದುವರಿಸಿದ್ದಾರೆ.

    ಇಲಾಖೆಯ ಅಭ್ಯಂತರವಿಲ್ಲ: ಮಕ್ಕಳಿಲ್ಲದೆ ಮುಚ್ಚಲ್ಟಟ್ಟ ನಡುಗುಡ್ಡೆ ಶಾಲೆ ಪುನರಾರಂಭಕ್ಕೆ ಇಲಾಖೆಯ ಅಭ್ಯಂತವಿಲ್ಲ. ಆದರೆ ಶಿಕ್ಷಣ ಇಲಾಖೆ ಆದೇಶದ ಅನ್ವಯ 10ಕ್ಕೆ ಮೇಲ್ಪಟ್ಟು ವಿದ್ಯಾರ್ಥಿಗಳು ಶಾಲೆಯಲ್ಲಿರಬೇಕು ಮತ್ತು ಮಕ್ಕಳ ಪಾಲಕರ ಒಪ್ಪಿಗೆ ಪತ್ರ ಸಲ್ಲಿಸಬೇಕು. ಅಗತ್ಯ ದಾಖಲೆ ಒದಗಿಸಿದರೆ ಖಂಡಿತ ಶಿಕ್ಷಣ ಇಲಾಖೆ ಆಯುಕ್ತರಿಗೆ ಬರೆದು ಈ ವರ್ಷವೇ ನಡುಗುಡ್ಡೆ ಶಾಲೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಿದ್ದೇವೆ ಎಂದು ಡಿಡಿಪಿಐ ಮಂಗಳೂರು ಮಲ್ಲೇಸ್ವಾಮಿ ತಿಳಿಸಿದ್ದಾರೆ. ಮಂಗಳೂರು ಬಿಇಒ ರಾಜಲಕ್ಷ್ಮೀ ಅವರೂ ಇದೇ ಉತ್ತರ ನೀಡಿದ್ದಾರೆ.

    ಸ್ಥಳಾಂತರಗೊಳ್ಳಲಿರುವ ನಡುಗುಡ್ಡೆ ಕಿರಿಯ ಪ್ರಾಥಮಿಕ ಶಾಲೆಗೆ ತರಗತಿ ಕೊಠಡಿ ಒದಗಿಸುವ ನಿಟ್ಟಿನಲ್ಲಿ ಪ್ರೌಢಶಾಲೆ ಶಾಲಾಭಿವೃದ್ಧಿ ಸಮಿತಿ ನಿರ್ಣಯ ತೆಗೆದುಕೊಂಡಿದೆ. ಗುರುಪುರದಲ್ಲಿ ಈಗ ಪ್ರೌಢಶಾಲೆ ಮತ್ತು ಪಿಯು ಕಾಲೇಜು ಇದೆಯೇ ಹೊರತು ಪ್ರಾಥಮಿಕ ಶಾಲೆ ಇಲ್ಲ. ಇಲ್ಲಿನ ಮಕ್ಕಳು ದೂರದ ಶಾಲೆಗಳಲ್ಲಿ ಕಲಿಯುವ ಸ್ಥಿತಿ ನಿರ್ಮಾಣವಾಗಿದೆ. ಪ್ರೌಢಶಾಲೆಗೆ ಕಿರಿಯ ಶಾಲೆ ಸ್ಥಳಾಂತರಗೊಳ್ಳುವುದು ಹೆಚ್ಚು ಸೂಕ್ತ. ಈ ನಿಟ್ಟಿನಲ್ಲಿ, ಶಾಲೆಯ ಸ್ಥಳಾಂತರ ಪ್ರಯತ್ನ ನಡೆಸುತ್ತಿರುವವರಿಗೆ ನಮ್ಮ ಪೂರ್ಣ ಸಹಕಾರವಿದೆ.

    ಸತೀಶ್ ಕಾವ
    ಗುರುಪುರ ಸರ್ಕಾರಿ ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ

    ಬಿಇಒ ಮತ್ತು ಡಿಡಿಪಿಐಯವರು ಈ ಹಿಂದೆ ಸೂಚಿಸಿದಂತೆ ಶಾಲೆ ಸ್ಥಳಾಂತರಿಸಲು ಅಗತ್ಯವಿರುವ ಏಳು ಮಕ್ಕಳ ಪಾಲಕರ ಒಪ್ಪಿಗೆ ಪತ್ರ ನೀಡಿದ್ದೇವೆ. ಆದರೆ ಇಷ್ಟರವರೆಗೆ ಸ್ಥಳಾಂತರಕ್ಕೆ ಆದೇಶ ಬಂದಿಲ್ಲ. ಅ.4ರಂದು ಗುರುಪುರದಲ್ಲಿ ಪರಿಶೀಲನೆ ನಡೆಸಿದ ಡಿಡಿಪಿಐ ಮತ್ತು ಬಿಇಒ ಅವರು 10ಕ್ಕೆ ಮೇಲ್ಟಟ್ಟು ವಿದ್ಯಾರ್ಥಿಗಳಿದ್ದರೆ ಶಾಲೆ ಆರಂಭಿಸುವ ಕುರಿತು ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆಯಬಹುದು ಎಂದಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಕ್ಕೆ ಊರವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದ್ದು, ಶೀಘ್ರವೇ ಇಲಾಖೆಗೆ ಮತ್ತೊಮ್ಮೆ ಅಗತ್ಯವಿರುವ ಒಪ್ಪಿಗೆ ಪತ್ರ ನೀಡಲಿದ್ದೇವೆ.

    ಜಿ.ಎಂ.ಉದಯ ಭಟ್
    ಗುರುಪುರ ಗ್ರಾಪಂ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ

    ನಡುಗುಡ್ಡೆ ಶಾಲೆ ಗುರುಪುರ ಸರ್ಕಾರಿ ಪ್ರೌಢಶಾಲೆಗೆ ಸ್ಥಳಾಂತರಕ್ಕೆ ಪೂರ್ಣ ಅವಕಾಶವಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಹಾಗೂ ಉಚಿತ ಶಿಕ್ಷಣ ಸಿಗಬೇಕೆಂಬ ಅಂಶ ಕೇಂದ್ರದ ಇತ್ತೀಚಿನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಡಗಿದೆ. ಈ ದೃಷ್ಟಿಕೋನದಿಂದ ನಡುಗುಡ್ಡೆ ಶಾಲೆ ಸ್ಥಳಾಂತರಕ್ಕಾಗಿ ಸ್ಥಳೀಯರು ನಡೆಸುತ್ತಿರುವ ಪ್ರಯತ್ನಕ್ಕೆ ಬೆಂಬಲ ಸೂಚಿಸಿ, ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಚಿತ ಮತ್ತು ಉತ್ತಮ ಶಿಕ್ಷಣ ಸಿಗಬೇಕು.

    ಡಾ.ವೈ.ಭರತ್ ಶೆಟ್ಟಿ
    ಕ್ಷೇತ್ರದ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts