More

    ಟ್ರಂಪ್​ಗೆ ನಮೋ ಭಾರತ ಸತ್ಕಾರ; ಅಮೆರಿಕ ಬೆಂಬಲದ ಸಂದೇಶ ವಿಶ್ವಕ್ಕೆ ರವಾನೆ, ವ್ಯಾಪಾರ, ರಕ್ಷಣಾ ಬಂಧಕ್ಕೂ ಮನ್ನಣೆ 

    ತೀವ್ರ ಕುತೂಹಲ ಮೂಡಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಪ್ರವಾಸದ ಲಾಭ, ನಷ್ಟಗಳ ಲೆಕ್ಕಚಾರಕ್ಕೆ ಮೊದಲ ದಿನವೇ ಸ್ಪಷ್ಟ ಉತ್ತರ ದೊರೆತಿದೆ. ಪತ್ನಿ, ಪುತ್ರಿ ಸಮೇತರಾಗಿ ಸೋಮವಾರ ಅಹಮದಾಬಾದ್​ಗೆ ಬಂದಿಳಿದ ಟ್ರಂಪ್, ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸುತ್ತಲೇ ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದು ವಿಶೇಷ. ನಿರೀಕ್ಷೆಗಳನ್ನೂ ಮೀರಿ ಭಾರತದೊಂದಿಗೆ 3 ಶತಕೋಟಿ ಡಾಲರ್ ಸೇನಾ ಒಪ್ಪಂದ ಘೋಷಿಸುವ ಮೂಲಕ ಅವರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಬೆನ್ನಿಗಿರುವ ಸ್ಪಷ್ಟ ಸಂದೇಶ ರವಾನಿಸಿದರು. ಅಮೆರಿಕ ಅಧ್ಯಕ್ಷರನ್ನು ಭಾರತದ ನೆಲದಲ್ಲಿ ನಿಲ್ಲಿಸಿ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಡುವ ಜತೆಯಲ್ಲೇ ಅಮೆರಿಕದ ಮಿತ್ರ ರಾಷ್ಟ್ರಗಳ ಸಾಲಿನಲ್ಲಿ ನಾವೂ ಕೂಡ ಮುಂಚೂಣಿಯಲ್ಲಿದ್ದೇವೆಂಬ ಸಂದೇಶವನ್ನು ಚೀನಾ ಹಾಗೂ ರಷ್ಯಾಗೆ ರವಾನಿಸಿದ್ದು ಭಾರತದ ಪಾಲಿಗೆ ಲಾಭ ಎಂದೇ ವಿಶ್ಲೇಷಿಸಲಾಗುತ್ತಿದೆ.

    ಟ್ರಂಪ್​ಗೆ ನಮೋ ಭಾರತ ಸತ್ಕಾರ; ಅಮೆರಿಕ ಬೆಂಬಲದ ಸಂದೇಶ ವಿಶ್ವಕ್ಕೆ ರವಾನೆ, ವ್ಯಾಪಾರ, ರಕ್ಷಣಾ ಬಂಧಕ್ಕೂ ಮನ್ನಣೆ 

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಜೀವಮಾನದಲ್ಲೇ ಅತ್ಯಂತ ಬೃಹತ್ ಹಾಗೂ ವೈಭವೋಪೇತ ಸ್ವಾಗತ ಸಮಾರಂಭಕ್ಕೆ ಪಾತ್ರರಾದ ಧನ್ಯತೆ ಅನುಭವಿಸಿದರು. ರಾಷ್ಟ್ರದ ಅಧ್ಯಕ್ಷರೊಬ್ಬರಿಗೆ ಇದುವರೆಗೆ ಯಾವುದೇ ದೇಶ ನೀಡಿರದಂಥ ಅಭೂತಪೂರ್ವ ಸ್ವಾಗತವನ್ನು ಸೋಮವಾರ ಬೆಳಗ್ಗೆ ಅಹಮದಾಬಾದ್​ಗೆ ಬಂದಿಳಿದ ಟ್ರಂಪ್​ಗೆ ಕೋರುವ ಮೂಲಕ ಭಾರತ ಜಾಗತಿಕವಾಗಿ ತನ್ನ ಶಕ್ತಿ, ಸಾಮರ್ಥ್ಯದ ಅನಾವರಣದ ಜೊತೆಗೆ ವರ್ಚಸ್ಸು ಹೆಚ್ಚಿಸಿಕೊಂಡಿತು. ಅತಿಥಿ ಸತ್ಕಾರಕ್ಕೆ ಹೆಸರುವಾಸಿಯಾದ ಭಾರತೀಯ ಸತ್ಸಂಪ್ರದಾಯದ ಇತಿಹಾಸವೂ ಮರುಕಳಿಸಿತು.

    ಸರ್ದಾರ್ ವಲ್ಲಭಭಾಯ್ ಪಟೇಲ್ ವಿಮಾನ ನಿಲ್ದಾಣದಿಂದ ಮೊಟೇರಾ ಕ್ರೀಡಾಂಗಣದವರೆಗಿನ 22 ಕಿ.ಮೀ. ಹಾದಿಗುಂಟ ಇಬ್ಬದಿಯಲ್ಲಿ ಸಾಲುಗಟ್ಟಿ ನಿಂತಿದ್ದ ಲಕ್ಷಾಂತರ ಭಾರತೀಯರ ಮೆರವಣಿಗೆಯಿಂದ ಪುಳಕಿತಗೊಂಡಿದ್ದ ಟ್ರಂಪ್, ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ನಮಸ್ತೆ ಟ್ರಂಪ್ ಸಮಾರಂಭದಲ್ಲಿ ಸಹಜವಾಗಿಯೇ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ, ವರ್ಚಸ್ಸು, ಚರಿಷ್ಮಾ, ದೂರದೃಷ್ಟಿಯನ್ನು ಕೊಂಡಾಡಿದರು.

    ಮೋದಿ ತಮ್ಮ ಅತ್ಯುತ್ತಮ ಸ್ನೇಹಿತ ಮಾತ್ರವೇ ಅಲ್ಲದೆ ವಿಶ್ವನಾಯಕ ಎಂದು ಹೊಗಳಿದರು. ತಮ್ಮ ಅರ್ಧಗಂಟೆಗಳ ಬಾಷಣದಲ್ಲಿ ಭಾರತದ ಸಮಗ್ರತೆ, ವೈಶಿಷ್ಟ್ಯತೆ, ವೈವಿಧ್ಯತೆಯನ್ನು ಬಣ್ಣಿಸಿದ ಟ್ರಂಪ್, ವ್ಯಾಪಾರ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವೆ ದೈತ್ಯ ಪ್ರಮಾಣದ ಒಪ್ಪಂದವೇರ್ಪಡಲಿದೆ ಎಂದು ಸ್ಪಷ್ಟಪಡಿಸುವ ಮೂಲಕ ತಮ್ಮ ಮೊಟ್ಟ ಮೊದಲ ಭಾರತ ಪ್ರವಾಸದ ಮೊದಲ ದಿನವೇ ಹೆಚ್ಚಿನ ನಿರೀಕ್ಷೆ ಹುಟ್ಟು ಹಾಕಿದರು.

    ಇನ್ನೊಂದು ಕಡೆ ಭಾರತವು ಜಾಗತಿಕವಾಗಿ ಬಲಿಷ್ಠ ಹಾಗೂ ಪ್ರಭಾವಿ ರಾಷ್ಟ್ರವಾಗಿ ಹೊರಹೊಮ್ಮಿರುವ ಕಾಲಘಟ್ಟದಲ್ಲಿ ಟ್ರಂಪ್​ರನ್ನು ಭಾರತಕ್ಕೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾದ ಪ್ರಧಾನಿ ಮೋದಿ, ‘ನಮಸ್ತೆ ಟ್ರಂಪ್’ ಕಾರ್ಯಕ್ರಮದ ಮೂಲಕ ಅಮೆರಿಕ-ಭಾರತ ಒಗ್ಗೂಡಿ ಮುನ್ನಡೆಯುತ್ತಿವೆ ಎಂಬ ಸಂದೇಶವನ್ನು ಜಗತ್ತಿನ ಇತರ ರಾಷ್ಟ್ರಗಳಿಗೂ ಸಾರಿದ್ದಾರೆ.

    ಎಲ್ಲೆಲ್ಲೂ ನಮಸ್ತೆ ಟ್ರಂಪ್ ಟೋಪಿ: ಮೊಟೆರಾದಲ್ಲಿ ಕಿಕ್ಕಿರಿದು ತುಂಬಿದ್ದ ಜನರೆಲ್ಲರೂ ‘ನಮಸ್ತೆ ಟ್ರಂಪ್’ ಎಂಬ ಬಿಳಿ ಟೋಪಿ ಧರಿಸಿದ್ದರು. ಇದರಿಂದಾಗಿ ಮೊಟೇರಾ ಕ್ರೀಡಾಂಗಣ ಸುತ್ತಮುತ್ತ ಅವೇ ಟೋಪಿಗಳೇ ರಾರಾಜಿಸುತ್ತಿದ್ದವು. ‘ನನ್ನ 70ರ ಇಳಿ ವಯಸ್ಸಿನಲ್ಲಿ ಅಮೆರಿಕ ಅಧ್ಯಕ್ಷರನ್ನು ನೇರವಾಗಿ ನೋಡಬೇಕೆಂದೇ ಕಾರ್ಯಕ್ರಮಕ್ಕೆ ಬಂದೆ. ಬಹಳ ದೂರದಲ್ಲಿ ಟ್ರಂಪ್ ಕೂತಿದ್ದರೂ ಇಂಥದ್ದೊಂದು ಕ್ಷಣಕ್ಕೆ ಸಾಕ್ಷಿಯಾದೆ ಎಂಬ ಖುಷಿ ನನಗಿದೆ’ ಎಂದು ಸ್ಟೇಡಿಯಂನಲ್ಲಿ ಮಾತಿಗೆ ಸಿಕ್ಕ ಖೇಡಾ ಗ್ರಾಮದಿಂದ ಬಂದಿದ್ದ ರಘುರಾಮ್ ಭಾಯ್ ವಿಜಯವಾಣಿಗೆ ತಿಳಿಸಿದರು.

    6 ಗಂಟೆಗೇ ಬಂದ ಜನ: ಭದ್ರತೆಯ ಕಾರಣದಿಂದಾಗಿ ಮೊಟೆರಾ ತಲುಪುವ ಏಳೆಂಟು ಕಿಲೋಮೀಟರ್ ರಸ್ತೆಯಲ್ಲಿ ವಾಹನ ಸಂಚಾರ ರದ್ದುಗೊಳಿಸಿದ್ದರಿಂದ ಬೆಳಗ್ಗೆ 6 ಗಂಟೆಯಿಂದಲೇ ಜನ ಮನೆ ಬಿಟ್ಟು ಕ್ರೀಡಾಂಗಣದತ್ತ ಕಾಲ್ನಡಿಗೆಯಲ್ಲೇ ಬಂದಿದ್ದರು. ದೂರದ ಜಿಲ್ಲೆಗಳಿಂದ ಜನರನ್ನು ಹೊತ್ತು ಬಂದಿದ್ದ ಸಾವಿರಾರು ಬಸ್ಸುಗಳನ್ನೂ ದೂರದಲ್ಲೇ ನಿಲುಗಡೆಗೆ ಸೂಚಿಸಿದ್ದರಿಂದ ಕಾರ್ಯಕ್ರಮದತ್ತ ಧಾವಿಸಿದವರ ದಂಡು ಮೊಟೆರಾ ರಸ್ತೆಯಲ್ಲಿ ಸಾಗರೋಪಾದಿಯಲ್ಲಿ ಕಂಗೊಳಿಸಿತು.

    ಮುಗಿಯುವ ಮುನ್ನವೇ ಎದ್ದ ಜನ: ಟ್ರಂಪ್ ಭಾಷಣ ಮುಗಿಯುತ್ತಿದ್ದಂತೆಯೇ ಕ್ರೀಡಾಂಗಣದಿಂದ ಜನ ಹೊರ ಹೋಗಲಾರಂಭಿಸಿದರು. ಇದೇಕೆ ಜನ ಹೀಗೆ ಹೋಗುತ್ತಿದ್ದಾರೆ ಎಂಬುದು ಎಲ್ಲರ ಅಚ್ಚರಿಗೂ ಕಾರಣವಾಗಿತ್ತು. ಟ್ರಂಪ್ ಭಾಷಣ ಬಳಿಕ ಪ್ರಧಾನಿ ಮೋದಿ ಮಾತನಾಡುತ್ತಿದ್ದರೂ ಅರ್ಧಕ್ಕರ್ಧ ಜನ ನಿರ್ಗಮನದ ಗೇಟ್ ಬಳಿ ಹೋಗಲಾರಂಭಿಸಿದರು. ಆನಂದ್ ಜಿಲ್ಲೆಯಿಂದ ಬಂದಿದ್ದ ಯುವಕ ಅಶೋಕ್ ಪಟೇಲ್​ಗೆ ಮೋದಿಗಿಂತ ಟ್ರಂಪ್ ಭಾಷಣವೇ ಭಾರೀ ಇಷ್ಟವಾಯಿತಂತೆ. ‘‘ಭಾರತ, ನಮ್ಮ ನಾಯಕತ್ವ, ವೈಶಿಷ್ಟ್ಯತೆ ಬಗ್ಗೆ ಮಾಹಿತಿ ಕಲೆ ಹಾಕಿ ಆಕರ್ಷಕ ಭಾಷಣ ಮಾಡಿರುವ ಅವರಿಗೆ ನನ್ನ ಹೃದಯಾಂತರಾಳದ ಅಭಿನಂದನೆ. ಇದನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್​ನಲ್ಲೂ ಬರೆಯುವೆ’ ಎಂದರು.

    ಸೆಲ್ಪಿ ತೆಗೆದ ಇವಾಂಕಾ: ಮೊಟೆರಾ ಕ್ರೀಡಾಂಗಣಕ್ಕೆ ಟ್ರಂಪ್ ಮತ್ತು ಪತ್ನಿ ಮೆಲನಿಯಾ ಟ್ರಂಪ್ ಪ್ರವೇಶಿಸಿದರೂ ಇವಾಂಕಾ ಟ್ರಂಪ್ ಮಾತ್ರ ಹೊರಗೇ ನಿಂತು ಜನರ ಸೆಲ್ಪಿಗಳಿಗೆ ನಗುತ್ತಾ ನಿಂತರು. ತಮ್ಮೊಂದಿಗೆ ಸೆಲ್ಪಿ ತೆಗೆದುಕೊಳ್ಳಬೇಕೆಂದು ಬಂದಿದ್ದ ಜನರನ್ನು ಬೇಸರಗೊಳಿಸದ ಇವಾಂಕಾ, ಎಲ್ಲರಿಗೂ ನಗುತ್ತಲೇ ‘ನಮಸ್ತೆ, ನಮಸ್ತೆ’ ಎನ್ನುತ್ತಲೇ ಕ್ರೀಡಾಂಗಣದ ಒಳಹೋದರು.

    1.25 ಲಕ್ಷ ಪ್ರೇಕ್ಷಕರು!: 1.25 ಲಕ್ಷ ಜನರನ್ನು ಕ್ರೀಡಾಂಗಣದಲ್ಲಿ ಸೇರಿಸಿ ಸಂಘಟಕರು ನಿಜಕ್ಕೂ ಸವಾಲನ್ನು ಮೀರಿ ನಿಂತಿದ್ದಾರೆ. ಟ್ರಂಪ್ ಭಾರತವನ್ನು ಈ ಪರಿಯಲ್ಲಿ ಹೊಗಳಿರುವುದು ರಾಜತಾಂತ್ರಿಕವಾಗಿ ಭಾರತಕ್ಕೆ ಮುನ್ನಡೆಯೇ ಸರಿ ಎಂದು ಜಪಾನ್ ಮೂಲದ ಪತ್ರಕರ್ತ ಟೊಹ್ರು ಟಕೇಡಾ ಹೇಳುತ್ತಾರೆ.

    ಮೋದಿ-ಟ್ರಂಪ್ ಮಾಸ್ಕ್: 2014ರ ಲೋಕಸಭೆ ಚುನಾವಣೆ ದಿನಗಳಿಂದ ಹಿಡಿದು ಇಂದಿನವರೆಗೆ ‘ಮೋದಿ ಮಾಸ್ಕ್’ ಧರಿಸಿ ಮೋದಿ ಬೆಂಬಲಿಸುವ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಮೊದಲ ಬಾರಿಗೆ ಮೋದಿ ಜತೆಗೆ ಟ್ರಂಪ್ ಅವರ ಚಿತ್ರವುಳ್ಳ ಮಾಸ್ಕ್ ಧರಿಸಿದ್ದ ಜನರು ಮೊಟೇರಾ ಕ್ರೀಡಾಂಗಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ‘ಮೋದಿ-ಟ್ರಂಪ್ ಸ್ನೇಹಿತರು. ಅದನ್ನು ಬಿಂಬಿಸಲೆಂದೇ ಈ ಮಾಸ್ಕ್ ಧರಿಸಿ ಬಂದಿದ್ದೇವೆ’ ಎಂದ ಮಧ್ಯ ವಯಸ್ಸಿನ ಸಂಕೇತ್ ಕುಮಾರ್ 8 ಗಂಟೆಯಿಂದಲೇ ಮೋದಿ…ಮೋದಿ… ಎಂದು ಮೊಟೆರಾದಲ್ಲಿ ಘೋಷಣೆ ಹಾಕುತ್ತಾ ಕುಳಿತಿದ್ದ.

    ಹೊಸ ರಕ್ಷಣಾ ಬಂಧ

    ಟ್ರಂಪ್ ಭಾರತ ಪ್ರವಾಸದಲ್ಲಿ ಬಹುಪಾಲು ಮಾಧ್ಯಮಗಳು ಈ ಬಾರಿ ಯಾವುದೇ ಒಪ್ಪಂದ ಏರ್ಪಡುವ ಸಾಧ್ಯತೆಗಳಿಲ್ಲ ಎಂದೇ ರ್ಚಚಿಸಿದ್ದವು. ಆ ಊಹಾಪೋಹಗಳಿಗೆ ತೆರೆ ಎಳೆದ ಟ್ರಂಪ್, 3 ದಶಕೋಟಿ ಡಾಲರ್ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕುವ ಜತೆಗೆ ವ್ಯಾಪಾರ ಒಪ್ಪಂದಕ್ಕೂ ಮುಂದಾಗಲಿದ್ದೇವೆ ಎಂದಿದ್ದಾರೆ. ಇದರಿಂದಾಗಿ ಮಂಗಳವಾರದ ಸಭೆ ಕುರಿತ ಕುತೂಹಲ ಇಮ್ಮಡಿಯಾಗಿದೆ.

    ರಕ್ಷಣಾ ಕ್ಷೇತ್ರದಲ್ಲಿ ಭಾರತ ಅಮೆರಿಕದ ಪ್ರಮುಖ ಪಾಲುದಾರನಾಗಬೇಕೆಂಬುದು ಟ್ರಂಪ್ ಆಶಯವೂ ಹೌದು. ಇದು ಭಾರತಕ್ಕೂ ಅನುಕೂಲಕರ ಎನ್ನುವುದರಲ್ಲಿ ಅನುಮಾನವಿಲ್ಲ. ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೆಲ ಗೊಂದಲಗಳು ದೇಶಗಳ ಮಧ್ಯೆ ಮನೆ ಮಾಡಿದ್ದರೂ, ತಮ್ಮ ಸಂಬಂಧ ಮತ್ತಷ್ಟು ಬಿಗಿಯಾಗಿಸಲು ಉಭಯ ನಾಯಕರು ಒತ್ತು ನೀಡಿರುವುದು ಭಾರತದ ಮಟ್ಟಿಗೆ ಸ್ವಾಗತಾರ್ಹ ಬೆಳವಣಿಗೆ. ಮೋದಿ ತಮ್ಮ ಪ್ರಸ್ತಾವನೆ ‘ಲಾಂಗ್ ಲಿವ್ ಅಮೆರಿಕ-ಇಂಡಿಯಾ ಫ್ರೆಂಡ್​ಶಿಪ್’ ಐದಾರು ಬಾರಿ ಹೇಳಿದರು.

    | ರಾಘವ ಶರ್ಮ ನಿಡ್ಲೆ ಅಹಮದಾಬಾದ್ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts