More

    ವಾಣಿವಿಲಾಸ ಆಸ್ಪತ್ರೆಯಲ್ಲಿ 780 ಗ್ರಾಂ ಇದ್ದ ಶಿಶುವಿಗೆ ಯಶಸ್ವಿ ಆರೈಕೆ

    ಬೆಂಗಳೂರು: ಅವಧಿಪೂರ್ವ ಜನನದಿಂದಾಗಿ ಕಡಿಮೆ ತೂಕ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಶಿಶುವಿಗೆ ವಾಣಿವಿಲಾಸ ಆಸ್ಪತ್ರೆ ವೈದ್ಯರು 103 ದಿನ ನಿರಂತರ ಆರೈಕೆ ಮಾಡಿ ಮರುಜನ್ಮ ನೀಡಿದ್ದಾರೆ.

    ವಿಜಯನಗರ ನಿವಾಸಿ ರುಬಿನಾಗೆ ನ.9ರಂದು ತ್ರಿವಳಿ ಮಕ್ಕಳು ಜನಿಸಿದ್ದವು. ಅವಧಿ ಪೂರ್ವ ಪ್ರಸವದಿಂದಾಗಿ ಜನಿಸಿದ ಅರ್ಧ ಗಂಟೆಯಲ್ಲೇ ಎರಡು ಗಂಡು ಶಿಶುಗಳು ಮೃತಪಟ್ಟಿದ್ದವು, ಉಳಿದ ಒಂದು ಹೆಣ್ಣು ಶಿಶುವಿನ ತೂಕ 780 ಗ್ರಾಂಗೂ ಕಡಿಮೆಯಿತ್ತು. ಶಿಶುವಿಗೆ ಉಸಿರಾಟದ ತೊಂದರೆ ಸೇರಿ ಕೆಲ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಶಿಶುವನ್ನು ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಮಕ್ಕಳ ತುರ್ತು ನಿಗಾ ಘಟಕದಲ್ಲಿ ಮೂರೂವರೆ ತಿಂಗಳು ‘ಕಾಂಗರೂ ಕೇರ್’ ನೀಡಲಾಗಿದ್ದು, ಶಿಶುವಿನ ತೂಕ 1.85 ಕೆ.ಜಿ.ಗೆ ಹೆಚ್ಚಾಗಿದೆ. ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದೆ. ಹೀಗಾಗಿ ತಾಯಿ ಹಾಗೂ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆಯ ಅಧೀಕ್ಷಕಿ ಡಾ. ಗೀತಾ ಶಿವಮೂರ್ತಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕಾಂಗರೂ ಕೇರ್: ಫೆ.16ಕ್ಕೆ ಪ್ರಸವವಾಗಬೇಕಿತ್ತು. ಆದರೆ 26ನೇ ವಾರಕ್ಕೇ (ನ.9) ಅಂದರೆ ಮೂರು ತಿಂಗಳು ಮೊದಲೇ ಯುವತಿಗೆ ಪ್ರಸವವಾಗಿತ್ತು. ಹೀಗಾಗಿ ಮಗು ತೂಕ ಕಡಿಮೆ ಇದ್ದು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆರಂಭದ 18 ದಿನ ವೆಂಟಿಲೇಟರ್ ಅಳವಡಿಸಲಾಗಿತ್ತು. ನಂತರದಲ್ಲಿ ಮಕ್ಕಳ ತುರ್ತು ನಿಗಾ ಘಟಕದಲ್ಲಿ ‘ಕಾಂಗರೂ ಕೇರ್’ ನೀಡಲಾಯಿತು. ಮೊದಲಿಗೆ ಪೈಪ್ ಮೂಲಕ ಶಿಶುವಿಗೆ ಹನಿಹನಿಯಾಗಿ ಹಾಲುಣಿಸಲಾಯಿತು. ಬಳಿಕ ವಳಲೆಯಲ್ಲಿ ನೀಡಲಾಯಿತು. ಐದು ವರ್ಷಗಳವರೆಗೆ ನಿಯಮಿತವಾಗಿ ಮಗುವಿನ ಆರೋಗ್ಯ ತಪಾಸಣೆ ಮಾಡಬೇಕು ಎಂದು ನವಜಾತ ಶಿಶು ವಿಭಾಗದ ಮುಖ್ಯಸ್ಥೆ ಡಾ. ಸಹನಾ ದೇವದಾಸ್ ವಿವರಿಸಿದರು.

    ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ಸಂತೋಷ್, ಮಕ್ಕಳ ತಜ್ಞ ಡಾ. ಮಲ್ಲೇಶ್, ಶಿಶುವಿನ ಪಾಲಕರು ಉಪಸ್ಥಿತರಿದ್ದರು.

    ಎರಡು ಮಕ್ಕಳು ಮೃತಪಟ್ಟಿದ್ದವು. ಉಳಿದಿದ್ದ ಈ ಮಗುವನ್ನು ಉಳಿಸಿಕೊಳ್ಳಲು ವೈದ್ಯರು ನೀಡಿದ ಎಲ್ಲ ಸಲಹೆಗಳನ್ನು ಪಾಲಿಸಿದೆವು. ವೈದ್ಯರ ಉತ್ತಮ ಆರೈಕೆ ಹಾಗೂ ಸಹಕಾರದಿಂದ ಮಗು ಉಳಿದಿದೆ. ಮುಂದೆಯೂ ಅವರ ಸಲಹೆ ಪಾಲಿಸುವೆ.

    | ರುಬಿನಾ ಶಿಶುವಿನ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts