More

    ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ ಚಿಕಿತ್ಸೆ ನೀಡಿ

    ಕಡೂರು: ಆರೋಗ್ಯ ಇಲಾಖೆ ನೌಕರರು ರೋಗಿಗಳೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಇಲಾಖೆ ಸುಧಾರಣೆಗೆ ಸಹಕರಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

    ತಾಪಂನಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರು, ದಾದಿಯರು ಹಾಗೂ ಆಶಾಕಾರ್ಯಕರ್ತೆಯರ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ಆರೋಗ್ಯ ಇಲಾಖೆ ಹೆಚ್ಚು ಸುಧಾರಣೆಯಾಗಬೇಕಿದೆ ಎಂದರು.
    ಆಶಾಕಾರ್ಯಕರ್ತೆಯರು, ನರ್ಸ್‌ಗಳು, ಡಿ ಗ್ರೂಪ್ ನೌಕರರು ಹಾಗೂ ಪರೋಕ್ಷವಾಗಿ ಗುತ್ತಿಗೆ ನೌಕರರು ಇಲಾಖೆೆ ಆಧಾರಸ್ತಂಭಗಳು. ಆಶಾಕಾರ್ಯಕರ್ತೆಯರಿಗೆ ಇಲಾಖೆಯ ಹಲವಾರು ಸಮೀಕ್ಷೆಗಳ ಕಾರ್ಯದೊತ್ತಡ ಹೆಚ್ಚಾಗಿದೆ. ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
    ಹೊರಗುತ್ತಿಗೆ ನೌಕರರ ವಿರುದ್ಧವೂ ಕೆಲವು ದೂರುಗಳಿವೆ. ಕೆಲ ನೌಕರರು ರಾಜಕೀಯವಾಗಿಯೂ ಸಕ್ರಿಯರಾಗಿದ್ದಾರೆ. ಅಂಥವರು ನಡವಳಿಕೆ ತಿದ್ದಿಕೊಳ್ಳಬೇಕು. ಕೆಲ ನರ್ಸ್‌ಗಳ ಕಾರ್ಯವೈಖರಿ ಬಗ್ಗೆಯೂ ದೂರುಗಳಿವೆ. ಅವರು ಸೌಜನ್ಯಯುತವಾಗಿ ವರ್ತಿಸಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಬರುವುದು ಬಹುತೇಕ ಬಡವರು. ಅವರಿಗೆ ಸಮರ್ಪಕ ಸೇವೆ ದೊರೆಯಬೇಕು. ಯಾವುದೇ ಲೋಪಗಳನ್ನು ನಡೆದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
    ಹೊರಗುತ್ತಿಗೆ ನೌಕರ ಯೋಗೀಶ್ ಮಾತನಾಡಿ, ನಮ್ಮ ಮೂಲ ವೇತನ 19,100 ರೂ. ಡಿಎ ಸೇರಿ 14 ಸಾವಿರ ಸಂಬಳ ದೊರಕಬೇಕಿದೆ. ಆದರೆ ಗುತ್ತಿಗೆದಾರರು ಕೇವಲ 12,100 ಸಾವಿರ ಸಂಬಳ ಕೊಡುತ್ತಾರೆ. ಅದರಲ್ಲಿಯೂ 3 ಸಾವಿರ ಜಿಎಸ್‌ಟಿ ಎಂದು ಕಡಿತಗೊಳಿಸುತ್ತಾರೆ. ಸಂಬಳದ ಹಣದಲ್ಲೇ ಪಿಎಫ್ ಮತ್ತು ಇಎಸ್‌ಐ ಹಣ ಕಡಿತವಾಗುತ್ತದೆ. ಆದರೆ ಇದರ ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ. ಇಲಾಖೆ ನೌಕರರಿಗೆ ಏಳು ವರ್ಷಗಳಿಂದ ಸಮವಸ್ತ್ರ ಒದಗಿಸಿಲ್ಲ. ನಮ್ಮ ಸಮಸ್ಯೆಯನ್ನು ಯಾರೂ ಕೇಳುತ್ತಿಲ್ಲ. ಪ್ರತಿ ತಿಂಗಳೂ 25ನೇ ತಾರೀಖು ಕಳೆದರೂ ಸಂಬಳ ಹಾಕುವುದಿಲ್ಲ. ಟಿಎ, ಡಿಎ ಸೌಲಭ್ಯವಿಲ್ಲ. ಬಹುತೇಕ ಜನರಿಗೆ ಗುರುತಿನ ಪತ್ರವಿಲ್ಲ. ಯಾವುದಕ್ಕೆ ಹಣ ಕಡಿತವಾಗುತ್ತದೆ ಎಂಬುದು ತಿಳಿದಿಲ್ಲ. ಒಂದು ದಿನವೂ ರಜೆ ಸೌಲಭ್ಯವಿಲ್ಲ ಎಂದು ಅಳಲುತೋಡಿಕೊಂಡರು.
    ಶಾಸಕ ಕೆ.ಎಸ್.ಆನಂದ್ ಪ್ರತಿಕ್ರಿಯಿಸಿ, ವೇತನ ಪಾವತಿ ಮಾಹಿತಿ ಒದಗಿಸಿಕೊಡುವಂತೆ ಸಂಬಂಧಿಸಿದ ಏಜೆನ್ಸಿಗೆ ಸೂಚಿಸುತ್ತೇನೆ. ನಿಮಗೆ ಅಗತ್ಯ ಸೌಲಭ್ಯಗಳನ್ನು ಕೊಡುವುದರಲ್ಲಿ ಏಜೆನ್ಸಿಗಳು ವ್ಯತ್ಯಾಸ ಮಾಡಿರುವುದು ಕಂಡುಬಂದರೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
    ತಾಲೂಕು ವೈದ್ಯಾಧಿಕಾರಿ ಡಾ. ರವಿಕುಮಾರ್ ಮಾತನಾಡಿ, ಇಲಾಖೆಯ ಡಿ ಗ್ರೂಪ್ ನೌಕರರಿಗೆ ವಾರಕ್ಕೊಮ್ಮೆ ವೇತನ ಸಹಿತ ರಜೆ ದೊರಕಿಸುವ ನಿಟ್ಟಿನಲ್ಲಿ ಸಂಬಂಧಿಸಿರುವವರ ಜತೆ ಮಾತನಾಡುತ್ತೇನೆ. ಯಾವುದೇ ಸಮಸ್ಯೆಯಿದ್ದರೂ ನನ್ನ ಗಮನಕ್ಕೆ ತಂದರೆ ಕೂಡಲೇ ಗಮನ ಹರಿಸಲಾಗುವುದು ಎಂದರು.
    ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಉಮೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಮತಾ, ಆಶಾ ಮೇಲ್ವಿಚಾರಕಿ ತಾರಾದೇವಿ, ಜ್ಯೋತಿ, ಜಿ.ಬಿ.ಯೋಗೀಶ್, ಕೌಶಿಕ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts