More

    ನಗರಗಳ ಹಸಿರೀಕರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಮುಖ್ಯ: ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್

    ಮೈಸೂರು: ಪರಿಸರದಲ್ಲಿ ಆಗುತ್ತಿರುವ ಏರುಪೇರುಗಳನ್ನು ಸರಿಪಡಿಸಲು ನಗರದಲ್ಲಿ ಹೆಚ್ಚು ಹಸಿರೀಕರಣಗೊಳ್ಳಬೇಕು. ಇದಕ್ಕೆ ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅಭಿಪ್ರಾಯಪಟ್ಟರು.
    ನಗರದ ಯಾದವಗಿರಿಯಲ್ಲಿರುವ ಮೈಸೂರು ಗ್ರಾಹಕ ಪರಿಷತ್ತಿನ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
    ಮೈಸೂರು ನಗರ ಹಸರೀಕರಣಗೊಳಿಸುವ ಸಂಬಂಧ ಈಗಾಗಲೇ ನಮ್ಮ ಸಂಘಟನೆಯಿಂದ ಲಕ್ಷಾಂತರ ಗಿಡಗಳನ್ನು ನೆಡಲಾಗುತ್ತಿದೆ. ಹಾಗೆಯೇ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಮನೆಗಳಲ್ಲಿ ಸಸಿಗಳನ್ನು ನೆಡಲು ಕೋಟಿ ವೃಕ್ಷ ಅಭಿಯಾನದ ಮೂಲಕ ಲಕ್ಷಾಂತರ ಗಿಡಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
    ಪರಿಸರದಲ್ಲಾಗುತ್ತಿರುವ ಏರುಪೇರುಗಳನ್ನು ಸರಿಪಡಿಸಲು ನಗರದಲ್ಲಿ ಹೆಚ್ಚು ಹಸಿರೀಕರಣಗೊಳ್ಳಬೇಕು. ಇದಕ್ಕೆ ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯ. ಒಂದು ನಗರ ಹಸಿರಿನಿಂದ ಕಂಗೊಳಿಸಬೇಕಾದರೆ, ಸಾರ್ವಜನಿಕರು, ಸ್ಥಳೀಯ ಸಂಸ್ಥೆ ಅಧಿಕಾರಿಗಳು, ರಾಜ್ಯ ಸರ್ಕಾರದ ಸಹಕಾರ ಅತಿ ಮುಖ್ಯ. ಹಾಗಾಗಿ ಎಲ್ಲರೂ ನಗರದ ಪರಿಸರ ಕಾಪಾಡಲು ಕೈ ಜೋಡಿಸಬೇಕಿದೆ ಎಂದು ಕೋರಿದರು.
    ಪರಿಸರ ತಜ್ಞ ಡಾ.ಶಂಕರ್‌ಭಟ್ ಮಾತನಾಡಿ, ಫುಟ್‌ಪಾತ್‌ಗಳಲ್ಲಿ ನೆಟ್ಟಿರುವ ಗಿಡಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು. ಇದರ ನಿರ್ವಹಣೆ ಕುರಿತು ಆಯಾ ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳೇ ನೇರ ಉತ್ತರದಾಯಿತ್ವ ಹೊಂದಲು ಸರ್ಕಾರ ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.
    ನಗರ ಪ್ರದೇಶದಲ್ಲಿ ಸಸಿಗಳನ್ನು ನೆಡಬಹುದು. ಆದರೆ, ಆ ಗಿಡಗಳ ನಿರ್ವಹಣೆ ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ನಗರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಗಿಡ-ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈಗ ಅಳಿದುಳಿರುವ ಮರಗಳನ್ನು ಉಳಿಸಿಕೊಳ್ಳಬೇಕಾದರೆ, ವಿದ್ಯುತ್ ನಿಗಮಗಳ ನೌಕರರಿಗೆ, ಮೈಸೂರು ನಗರ ಪಾಲಿಕೆ ನೌಕರರಿಗೆ ವೈಜ್ಞಾನಿಕವಾಗಿ ಮರಗಳನ್ನು ಕತ್ತರಿಸುವ ಬಗ್ಗೆ ತರಬೇತಿ ನೀಡುವ ಅವಶ್ಯಕತೆ ಇದೆ. ಆದರೆ, ಇದರ ಬಗ್ಗೆ ಯಾವುದೇ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಹೇಳಿದರು.
    ಅರಣ್ಯ ಇಲಾಖೆಯ ಆರ್‌ಎಫ್‌ಒ ಧನ್ಯಶ್ರೀ ಮಾತನಾಡಿ, ಮೈಸೂರು ಹಸಿರೀಕರಣ ಮಾಡಲು ಅರಣ್ಯ ಇಲಾಖೆ ಮೂಲಕ ರಾಜ್ಯ ಸರ್ಕಾರ ಬದ್ಧವಾಗಿದೆ. ಈಗಾಗಲೇ ಲಕ್ಷಾಂತರ ಸಸಿಗಳನ್ನು ನೆಟ್ಟುಕೊಂಡು ಪೋಷಿಸುತ್ತಿದೆ. ಒಮ್ಮೆ ಸಾರ್ವಜನಿಕ ರಸ್ತೆಗಳಲ್ಲಿ ಗಿಡ ನೆಟ್ಟರೆ, ಆ ಗಿಡಗಳನ್ನು ಐದು ವರ್ಷಗಳವರೆಗೆ ಪೋಷಿಸುವುದು ಅರಣ್ಯ ಇಲಾಖೆ ಜವಾಬ್ದಾರಿ. ನಂತರ ಅದರ ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಗಳು ತೆಗೆದುಕೊಳ್ಳಬೇಕು. ಅದು ಸಾಧ್ಯವಾಗುತ್ತಿಲ್ಲ ಎಂದರು.
    ಪ್ರಸ್ತುತ 11 ಸಾವಿರಕ್ಕೂ ಹೆಚ್ಚು ನೆಡುವಷ್ಟು ಸಸಿಗಳು ನಮ್ಮ ಇಲಾಖೆಯಲ್ಲಿವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಪಡೆದ ಗಿಡಗಳನ್ನು ನೆಟ್ಟು ಸೂಕ್ತ ರೀತಿಯಲ್ಲಿ ಪೋಷಣೆ ಸಹ ಮಾಡಬೇಕಿದೆ ಎಂದು ಹೇಳಿದರು.
    ತಾಪಮಾನ ಏರಿಕೆ ತಡೆಗಟ್ಟಲು ಸ್ಥಳೀಯ ಸಂಸ್ಥೆಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು, ಸಾರ್ವಜನಿಕ ರಸ್ತೆ, ಉದ್ಯಾನ, ಫುಟ್‌ಪಾತ್‌ಗಳಲ್ಲಿ ಸಸಿಗಳನ್ನು ನೆಡಬೇಕು, ಇತ್ತೀಚೆಗೆ ಟೊಳ್ಳು ಬೀಳುತ್ತಿರುವ ಮರಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದರಿಂದ ಮಳೆಗಾಲದಲ್ಲಿ ಗಾಳಿಗೆ ಬಿದ್ದು ಅನೇಕ ಅನಾಹುತ ಅಗುತ್ತಿವೆ. ಆದ್ದರಿಂದ ನಗರಪಾಲಿಕೆ ಇವುಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂಬ ಸಲಹೆಗಳು ಸಭೆಯಲ್ಲಿ ಕೇಳಿ ಬಂದವು.
    ಮೈಸೂರು ಗ್ರಾಹಕ ಪರಿಷತ್ತಿನ ಅಧ್ಯಕ್ಷ ಶ್ರೀಶೈಲಾ ರಾಮಣ್ಣವರ್, ಪದಾಧಿಕಾರಿಗಳಾದ ಶೋಭನಾ, ಭಾಮಿ ವಿ.ಶೆಣೈ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts