More

    ಪ್ರಾದೇಶಿಕತೆ, ಮತೀಯ ವಾದಕ್ಕೆ ಕುಮ್ಮಕ್ಕು ಕಾಂಗ್ರೆಸ್ ಕುಮ್ಮಕ್ಕು: ಸಿ.ಟಿ.ರವಿ ವಾಗ್ದಾಳಿ

    ಮೈಸೂರು: ದೇಶ ವಿಭಜಿಸುವ ರೋಗ ಕಾಂಗ್ರೆಸ್‌ಗೆ ಇಂದಿಗೂ ಕಡಿಮೆ ಆಗಿಲ್ಲ. ತನ್ನ ಪ್ರಣಾಳಿಕೆಯಲ್ಲಿಯೂ ಜಾತಿ, ಪ್ರಾದೇಶಿಕತೆ, ಮತೀಯವಾದಕ್ಕೆ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.
    ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರು, ಮುಸ್ಲಿಂ ಲೀಗ್, ಕಾಂಗ್ರೆಸ್ ಸಹಿ ಹಾಕಿ ಭಾರತ ವಿಭಜಿಸಿದರು. ಆ ವಿಭಜಿಸುವ ರೋಗ ಇಂದಿಗೂ ಕಾಂಗ್ರೆಸ್‌ಗೆ ಕಡಿಮೆಯಾಗಿಲ್ಲ. ಜಾತಿ, ಪ್ರಾದೇಶಿಕತೆ ಹೆಸರಿನಲ್ಲಿ, ಮತೀಯವಾದಕ್ಕೆ ಕುಮ್ಮಕ್ಕು ಕೊಡುವ ನೀತಿಯ ಮೂಲಕ ಸಮಾಜ ವಿಭಜಿಸುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಜತೆಗೆ ಪ್ರಣಾಳಿಕೆ ಸಿದ್ಧಪಡಿಸಲು ನಗರ ನಕ್ಸಲರ ಸಹಾಯ, ತಾಲೀಬಾನಿಗಳ ಅಜೆಂಡಾದ ಪ್ರೇರಣೆ ಪಡೆದುಕೊಂಡಿದ್ದಾರೆ. ಇಲ್ಲಿಯೂ ದೇಶ ವಿಭಜನೆಯ ರೋಗ ಆವರಿಸಿದೆ. ಇಷ್ಟಾಗಿಯೂ ಕಾಂಗ್ರೆಸ್ ಎರಡಂಕಿ ದಾಟುವುದಿಲ್ಲ ಎಂದು ಸಮೀಕ್ಷೆ ಹೇಳಿರುವುದು ಸಮಾಧಾನದ ಸಂಗತಿ ಎಂದರು.
    ಕಾಂಗ್ರೆಸ್ ಸ್ಥಾಪನೆ ಉದ್ದೇಶ ಸ್ವಾತಂತ್ರ್ಯ ಪಡೆಯುವುದಕ್ಕಲ್ಲ ಎನ್ನುವುದು ಎಲ್ಲರಿಗೂ ತಿಳಿಸಿದೆ. ಕಾಂಗ್ರೆಸ್ ಸ್ಥಾಪನೆಯಿಂದ ಇಲ್ಲಿಯವರೆಗೆ ಕಾಲಕಾಲಕ್ಕೆ ನೀತಿ ಬದಲಿಸಿಕೊಂಡು ಬಂದಿದೆ. ಸ್ಥಾಪನೆಯಾದ ಎರಡು ವರ್ಷ ಕೇವಲ ಅರ್ಜಿ ಕೊಡುವ ಸಂಘಟನೆಯಾಗಿತ್ತು. ನಂತರ ಸುಭಾಷ್ ಚಂದ್ರಬೋಷ್, ಗಾಂಧೀಜಿ ಸೇರಿದಂತೆ ಹಲವರು ಆಂದೋಲನದ ರೂಪ ನೀಡಿದರು ಎಂದರು.
    ನೆಹರು ತನ್ನ ಕುಟುಂಬಕ್ಕೆ ಅಧಿಕಾರ ಸಿಗುವಂತೆ ತಳಪಾಯ ಮಾಡಿಕೊಂಡರು. ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ ಒಂದು ಕುಟುಂಬದ ಕಪಿಮುಷ್ಟಿಯಿಂದ ಹೊರಬಂದಿಲ್ಲ. ಕುಟುಂಬದಿಂದ ದೂರ ಮಾಡಲು ಪ್ರಯತ್ನಿಸಿದ ನರಸಿಂಹರಾವ್ ಅವರನ್ನೂ ಬದಿಗೆ ಸರಿಸಿ ಕುಟುಂಬಕ್ಕೆ ಪಕ್ಷ ಸೀಮಿತವಾಗುವಂತೆ ಮಾಡಿದರು ಎಂದು ದೂರಿದರು.
    ತನ್ನ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ಬಿಜೆಪಿಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಕಾಂಗ್ರೆಸ್‌ಗೆ ಉತ್ತಮ ನಾಯಕತ್ವವೇ ಇಲ್ಲ. ರಾಹುಲ್ ಗಾಂಧಿ ತಮ್ಮ ಅಜ್ಜ, ಅಜ್ಜಿ ರಾಜಕೀಯ ಮಾಡಿದ ಉತ್ತರಪ್ರದೇಶ ಬಿಟ್ಟು ವಯನಾಡಿಗೆ ವಲಸೆ ಬರುವ ದುಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ. ಹೀಗಾಗಿ ರಾಹುಲ್ ಗಾಂಧಿಗೆ ಚುನಾವಣೆ ನಂತರ ದೇಶದ ಜನರೇ ಕಡ್ಡಾಯ ನಿವೃತ್ತಿ ನೀಡುತ್ತಾರೆ ಎಂದರು.
    ಹಾಗಾಗಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚರ್ಚೆಯಾಗಬೇಕಿರುವುದು ಜಾತಿಯಲ್ಲ, ರಾಷ್ಟ್ರೀಯ ನೀತಿ, ವಿಚಾರಗಳು, ಭದ್ರತೆ, ಸುರಕ್ಷತೆ, ಮೂಲಸೌಕರ್ಯಗಳ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿ, ಭವಿಷ್ಯದ ಗುರಿ ಚರ್ಚೆ ಆಗಬೇಕು. ರಾಷ್ಟ್ರಕ್ಕೆ ಯಾರ ನೇತೃತ್ವ ಬೇಕು, ಯಾವ ಸರ್ಕಾರ ಬೇಕು, ಪ್ರಾಮಾಣಿಕತೆ, ಸಾಮರ್ಥ್ಯ, ಕೊಡುಗೆಗಳು, ಹಗರಣಗಳು, ಅಧ್ವಾನಗಳು ಚರ್ಚೆ ಆಗಬೇಕು ಎಂದರು.

    ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮುಖಂಡರಾದ ಎಂ.ಮೋಹನ್, ಮಹೇಶ್‌ರಾಜೇ ಅರಸ್, ಕೇಬಲ್ ಮಹೇಶ್, ಗಿರಿಧರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts